ಮೃತ್ಯು ಕೋಟೆಯಲ್ಲಿ ಕೊರೊನಾ ಕ್ರೌರ್ಯ, ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೀಜಿಂಗ್, ಫೆ.10- ಚೀನಾದಲ್ಲಿನ ಕೊರೋನಾ ಸೋಂಕಿನಿಂದ ಮೃತರ ಸಂಖ್ಯೆ ಈಗ 1000ಕ್ಕೆ ಏರಿದ್ದು 40,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೃತ್ಯು ಕೋಟೆಯಂತಾಗಿರುವ ವುಹಾನ್ ನಗರದಲ್ಲಿ ನೋವೆಲ್ ಕೊರೊನಾ (2019-ಸಿಎನ್‍ಒವಿ) ಕ್ರೌರ್ಯ ಮುಂದುವರೆದಿದ್ದು, ಪ್ರತಿ ದಿನ ಸರಾಸರಿ 100 ಜನರು ಬಲಿಯಾಗುತ್ತಿದ್ದಾರೆ.

ಚೀನಾದಲ್ಲಿ ಅದರಲ್ಲೂ ನಿರ್ದಿಷ್ಟವಾಗಿ ವುಹಾನ್ ನಗರಿಯಲ್ಲಿ ಹೊಸ ಸೋಂಕಿನ ಪ್ರಕರಣ ಇಳಿಮುಖವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿನ್ನೆಯಷ್ಟೇ ತಿಳಿಸಿತ್ತು. ಆದರೆ ಪ್ರತಿ ದಿನ ಸರಾಸರಿ 100 ಮಂದಿ ಬಲಿಯಾಗುತ್ತಿರುವುದು ಡಬ್ಲ್ಯುಎಚ್‍ಒ ಘೋಷಣೆಗೆ ವ್ಯತಿರಿಕ್ತವಾಗಿದೆ. ವೈರಸ್ ಹೆಚ್ಚಾಗಿ ಹರಡಿರುವ ಹುಬೇ ಪ್ರಾಂತ್ಯದಲ್ಲಿ ಹೊಸ ಸಾವಿನ ಪ್ರಕರಣಗಳು (91 ಸಾವು) ದಾಖಲಾಗುವ ಮೂಲಕ ಒಟ್ಟು ಮೃತರ ಸಂಖ್ಯೆ 1000ಕ್ಕೆ ಏರಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಈ ಪ್ರಾಂತ್ಯದ ಅನ್‍ವುಹಿ ಹಿಲೋಂಗ್ ಜಿಯಾಂಗ್, ಜಿಯಾಂಗ್ ಷಿ, ಹೈನನ್, ಗನ್ಸು ಮೊದಲಾದ ಪಟ್ಟಣಗಳಲ್ಲಿ ಹೊಸ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸಾವು-ನೋವು ವರದಿಯಾಗಿದೆ. ಈ ಹಿಂದೆ ತೀವ್ರ ಉಸಿರಾಟದ ತೊಂದರೆಯ ಸಾರ್ಸ್ (ಸಿವಿರ್ಯ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್) ವೈರಸ್ ಸೋಂಕಿನಿಂದ ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ಸಾವಿನ ಸಂಖ್ಯೆಯನ್ನೂ ಕೊರೋನಾ ವೈರಸ್ ಮೀರಿಸಿದೆ.

2002-2003ರಲ್ಲಿ ಕಾಣಿಸಿಕೊಂಡಿದ್ದ ಸಾರ್ಸ್‍ನಿಂದ 774 ಮಂದಿ ಸಾವಿಗೀಡಾಗಿದ್ದರು. ಇದೀಗ ಕೊರೋನಾ ದಾಳಿಯಿಂದ 871 ಮಂದಿ ಮೃತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹುಬೇನಲ್ಲಿ 2,500 ಹೊಸ ಕೊರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಎಂದು ಹುಬೇ ಆರೋಗ್ಯ ಸಚಿವಾಲಯವು ಹೇಳಿದೆ. ಕಳೆದ ಡಿಸೆಂಬರ್‍ನಲ್ಲಿ ಕೊರೋನಾ ವೈರಸ್ ಹರಡಲು ಆರಂಭಿಸಿತ್ತು. ಸದ್ಯ ಚೀನಾದ್ಯಂತ 40,000ಕ್ಕೂ ಹೆಚ್ಚು ಸೋಂಕು ತಗುಲಿರುವ ಪ್ರಕರಣಗಳು ದಾಖಲಾಗಿವೆ.

Facebook Comments