ವಿಶ್ವದಾದ್ಯಂತ ಹರಡುತ್ತಿದೆ ಡೆಡ್ಲಿ ಕೋವಿಡ್-19 ವೈರಸ್..!

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಫೆ.23- ಚೀನಾದಲ್ಲಿ 2,500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಸುಮಾರು 76,000 ಮಂದಿಗೆ ಸೋಂಕು ತಗುಲಿರುವ ಮಹಾಮಾರಿ ಕೊರೋನಾ ವೈರಸ್ (ಕೋವಿಡ್-19) ನಿಧಾನಗತಿಯಲ್ಲಿ ಜಾಗತಿಕ ಪಿಡುಗಾಗಿ ಪರಿಣಮಿಸಲು ಆರಂಭಿಸಿದೆ. 35ಕ್ಕೂ ಹೆಚ್ಚು ದೇಶಗಳಲ್ಲಿ ಕೋವಿಡ್-19 ವೈರಾಣು ಸೋಂಕು ಹಬ್ಬಿದ್ದು , ಸಾವು-ನೋವಿನ ಪ್ರಕರಣ ಮುಂದುವರೆದಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಅಂಕಿ ಅಂಶಗಳ ಪ್ರಕಾರ ಚೀನಾ ಸೇರಿದಂತೆ ಏಷ್ಯಾ, ಕೊಲ್ಲಿ ಪ್ರಾಂತ್ಯ, ಯುರೋಪ್ ಮತ್ತು ಅಮೆರಿಕಾ ದೇಶಗಳಲ್ಲಿ ಸುಮಾರು 78,000 ಮಂದಿಗೆ ಸೋಂಕು ತಗುಲಿದ್ದು , ಆತಂಕಕಾರಿಯಾಗಿ ಪರಿಣಮಿಸಿದೆ. ಸೋಂಕು ನಿಯಂತ್ರಣಕ್ಕೆ ನಾನಾ ಕ್ರಮ ಕೈಗೊಂಡ ಹೊರತಾಗಿಯೂ ದಕ್ಷಿಣ ಕೊರಿಯಾ, ಇರಾನ್, ಯುಇಎ, ಇಟಲಿಯಲ್ಲಿ ದಿನೇ ದಿನೇ ಸೋಂಕಿಗೆ ತುತ್ತಾದವರು ಮತ್ತು ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಭಾರೀ ಆತಂಕವನ್ನು ಹುಟ್ಟು ಹಾಕಿದೆ.

ಈ ನಡುವೆ ಆರೋಗ್ಯ ಸೇವೆಗಳು ಉತ್ತಮ ಮಟ್ಟದಲ್ಲಿ ಇರದ ಆಫ್ರಿಕಾ ದೇಶಗಳಲ್ಲಿ ಸೋಂಕು ಎದುರಿಸಲು ಸಜ್ಜಾಗಿರುವ ಸ್ಥಿತಿಗತಿಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಮೂಲಕ ಆ ರಾಷ್ಟ್ರಗಳಲ್ಲಿ ಈಗಾಗಲೇ ಸೋಂಕು ಹಬ್ಬಿದ್ದರೂ ಅದು ಗಮನಕ್ಕೆ ಬರದಿರುವ ಸಾಧ್ಯತೆ ದಟ್ಟವಾಗಿದೆ ಎಂಬ ಸುಳಿವನ್ನು ನೀಡಿದೆ.

ದಕ್ಷಿಣ ಕೊರಿಯಾದಲ್ಲಿ ನಿನ್ನೆ ಒಂದೇ ದಿನ 150ಕ್ಕೂ ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ದೇಶದಲ್ಲಿ ವೈರಸ್ ತಗಲಿದವರ ಸಂಖ್ಯೆ 365ಕ್ಕೆ ಏರಿದೆ. ಚೀನಾ ಹೊರತುಪಡಿಸಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿರುವ ಮತ್ತೊಂದು ದೇಶವಾಗಿ ಹೊರ ಹೊಮ್ಮಿರುವ ಕಾರಣ ದಕ್ಷಿಣ ಕೊರಿಯಾದಲ್ಲಿ ಭಾರೀ ಆತಂಕ ಕಂಡು ಬಂದಿದೆ. ಇದುವರೆಗೆ ಈ ದೇಶದಲ್ಲಿ ಸೋಂಕಿಗೆ ಕೆಲವರು ಬಲಿಯಾಗಿದ್ದಾರೆ.

ಇನ್ನು ಇರಾನ್‍ನಲ್ಲಿ 16 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಪೀಡಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕಿಗೆ ತುತ್ತಾಗಿದ್ದ ಕೆಲವರು ಸಾವನ್ನಪ್ಪಿದ್ದಾರೆ.
ಇಟಲಿಯ ಕೊಡೊಗ್ನೋ ಎಂಬ ಸಣ್ಣ ನಗರದಲ್ಲಿ ಕೊರೋನಾ ವೈರಸ್ ನಿನ್ನೆ ಎರಡನೇ ಬಲಿ ಪಡೆದಿದೆ. ಇದು ಯುರೋಪ್ ನಲ್ಲಿ ಸೋಂಕಿಗೆ ಬಲಿಯಾದ ಮೊದಲ ಪ್ರಕರಣವಾಗಿದೆ.

ಈ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಮೂವರು ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿರುವ ತುರ್ತು ಕೊಠಡಿಯಿಂದ ದೂರ ಇರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಕೊಲ್ಲಿ ದೇಶ ಯುಎಇಯಲ್ಲಿ ಹೊಸದಾಗಿ ಇಬ್ಬರಲ್ಲಿ ಸೋಂಕು ತಗುಲಿದ್ದು, ಇದರೊಂದಿಗೆ ಒಟ್ಟು 11 ಮಂದಿ ಕೊರೋನಾದಿಂದ ಬಳಲುತ್ತಿರುವುದಾಗಿ ವರದಿಗಳು ತಿಳಿಸಿವೆ.

Facebook Comments