ಪಾರಂಪರಿಕ ವಿಧಾನ ಪಾಲಿಸಿ ಕೊರೊನಾದಿಂದ ದೂರವಿರಿ

ಈ ಸುದ್ದಿಯನ್ನು ಶೇರ್ ಮಾಡಿ

ಮೂರ್ನಾಲ್ಕು ವಾರಗಳಿಂದ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಕೊರೊನಾ ಭೀತಿ ಆವರಿಸಿದ್ದು, ಈ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ಮಾರಣಾಂತಿಕ ಕಾಯಿಲೆ ಭಾರತದಲ್ಲೂ ಮರಣ ಮೃದಂಗ ಬಾರಿಸಿದೆ. ಈ ಹಿನ್ನೆಲೆಯಲ್ಲಿ ಇದರ ಉದ್ದ ಮತ್ತು ಅಗಲ ಕಂಡುಕೊಳ್ಳಲು ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ನಾವು ಕೂಡ ಜವಾಬ್ದಾರಿಯನ್ನು ಅತ್ಯಂತ ಮುಖ್ಯವಾಗಿ ನಿಭಾಯಸಬೇಕಾಗಿದೆ.

ಸರ್ಕಾರ ಕಡ್ಡಾಯವಾಗಿ ಪಾಲಿಸಬೇಕಾದ ಸ್ವಚ್ಛತಾ ಯೋಜನೆ ಜಾರಿಗೆ ತಂದಿದೆ. ಇದರಿಂದಾಗಿ ನಮ್ಮ ಪರಿಸರ ಸಂರಕ್ಷಣೆ ಸುಧಾರಣೆ ಆಗುತ್ತಿದ್ದು, ಇನ್ನೂ ಆಗಬೇಕಾಗಿದೆ. ಸ್ವಚ್ಛ ಪರಿಸರ ಸಂರಕ್ಷಣೆ ಸುಧಾರಣೆಯಿಂದ ಕೊರೊನಾ ಭೀತಿ ತಡೆಯಲು ಸಾಧ್ಯ. ನಮ್ಮದೇ ಆದ ಪಾರಂಪರಿಕ ವಿಧಾನಗಳನ್ನು ಅನುಸರಿಸದೆ ಮರೆತಿರುವುದರಿಂದ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಅನುಸರಿಸಲು ಪ್ರಯತ್ನ ಮಾಡದೆ ಇರುವುದರಿಂದ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ.

ಪಾರಂಪರಿಕ ವಿಧಾನಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಇಲ್ಲಿ ಕೆಲವೊಂದು ಪಾರಂಪರಿಕ ವಿಧಾನಗಳನ್ನು ಅನುಸರಿಸುವ ಸಲಹೆಗಳನ್ನು ನೀಡಲಾಗಿದೆ. ಪ್ರತಿ ಮನೆ ಮತ್ತು ಕಚೇರಿಯಲ್ಲಿ ಅಗ್ನಿಹೋತ್ರ ಅನುಸರಿಸುವುದು. ಅಗ್ನಿಹೋತ್ರದಿಂದ ಕೊರೊನಾ ವೈರಾಣುಗಳು ಮತ್ತು ಬ್ಯಾಕ್ಟೀರಿಯಾಗಳು ವೃದ್ಧಿಯಾಗದಂತೆ ತಡೆಯಲು ಸಾಧ್ಯವಿದೆ.

ಪ್ರತಿನಿತ್ಯ ಸ್ನಾನ ಮಾಡುವುದರಿಂದ ಹಲವಾರು ಬ್ಯಾಕ್ಟೀರಿಯಾಗಳನ್ನು ದೇಹದ ಒಳಗೆ ಹೋಗಲು ತಡೆಯಲು ಸಾಧ್ಯ.  ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಿದೆ. ಪರಿಸರ ರಕ್ಷಣೆ ಮಾಡದೆ ಇರುವುದರಿಂದ ಕೊರೊನಾ ವೈರಾಣುಗಳು ಹರಡಲು ಸಾಧ್ಯವಾಗಿದೆ. ಅದ್ದರಿಂದ ಪರಿಸರ ರಕ್ಷಣೆಯ ಹೊಣೆಗಾರಿಕೆಯನ್ನು ನಾವು ಮಾಡಬೇಕು.

ಮುಖ್ಯವಾಗಿ ಹಲ್ಲು, ನಾಲಿಗೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಪ್ರತಿನಿತ್ಯ ಆಯಿಲ್ ಪುಲ್ಲಿಂಗ್ ಮತ್ತು ಬೇವು ಮತ್ತು ಉಪ್ಪನ್ನು ಸೇರಿಸಿ ಬಾಯಿ ಸ್ವಚ್ಛ ಮಾಡುವುದು ತುಂಬಾ ಒಳ್ಳೆಯದು.ಮೂಗಿನಿಂದ ಹಲವಾರು ಬ್ಯಾಕ್ಟೀರಿಯಾಗಳು ದೇಹದೊಳಗೆ ಹೋಗಲು ತಡೆಯಲು ಸಾಧ್ಯ. ಪ್ರತಿ ನಿತ್ಯ ಸ್ನಾನ ಮಾಡುವಾಗ ಸೂತ್ರನೇತಿ, ಜಲನೇತಿ ಮಾಡಿದರೆ ಸಾಕು, ನಮ್ಮ ಮೂಗು ಸ್ವಚ್ಛವಾಗುತ್ತದೆ.

ಇದರೊಂದಿಗೆ ನಿತ್ಯ ಮೂರು ಹೊತ್ತು ಕಡ್ಡಾಯವಾಗಿ ಪ್ರಾಣಾಯಾಮ ಮಾಡುವುದರಿಂದ ಹಲವಾರು ಬ್ಯಾಕ್ಟೀರಿಯಾಗಳು ಮತ್ತು ವೈರಾಣುಗಳು ಹರಡುವುದನ್ನು ತಪ್ಪಿಸಬಹುದು. ಇಂದಿನ ದಿನಗಳಲ್ಲಿ ಪ್ರಾಣಾಯಾಮ ಮಾಡದೆ ಇರುವುದರಿಂದ ಶ್ವಾಸಕೋಶದ ಹಲವಾರು ರೋಗದ ಭೀತಿ ಎದುರಾಗಿದೆ. ಸೂರ್ಯ ನಮಸ್ಕಾರ ಪ್ರತಿನಿತ್ಯ 10 ಬಾರಿ ಮಾಡುವುದರಿಂದ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಬ್ಯಾಕ್ಟೀರಿಯಾಗಳನ್ನು ಮತ್ತು ವೈರಾಣುಗಳನ್ನು ದೂರ ಮಾಡಬಹುದು.  ಪ್ರತಿನಿತ್ಯ ಉಸಿರಾಟ ಮತ್ತು ನಾಡಿ ಮಿಡಿತವನ್ನು ಹತೋಟಿಗೆ ತರಲು ಆಸನ ಮಾಡುವುದರಿಂದ ದೇಹದಲ್ಲಿ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

ಕೊರೊನಾ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ನಮ್ಮಲ್ಲಿ ಹಾರ್ಮೋನ್‍ಗಳ ಕೊರತೆ ಇದೆ. ಇದರ ಸಮತೋಲನ ಕಾಪಾಡಲು ನಿಯಮಿತ ಆಹಾರ ಮತ್ತು ನೀರು ಸೇವನೆ ಒಳ್ಳೆಯದು. ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶುಂಠಿ, ಬೆಳ್ಳುಳ್ಳಿ, ಮೆಣಸು, ಜಿರೀಗೆ, ಲವಂಗ, ಚಕ್ಕೆ, ಅರಿಷಿನ, ಪುದೀನಾ ಸೊಪ್ಪು, ಕೊತ್ತಂಬರಿ ಮತ್ತು ಅಜವನ ಇವುಗಳನ್ನು ಬಳಸುವುದು ಒಳ್ಳೆಯದು. ಅಲ್ಲದೆ, ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿಕೊಂಡು ಆಗೊಮ್ಮೆ ಈಗೊಮ್ಮೆ ನೀರು ಸೇವನೆಯಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇದರಿಂದ ಮನುಷ್ಯನ ಮೂರು ಶತ್ರುಗಳಾದ ವಾತ, ಪಿತ್ಥ, ಕಫ ದೋಷ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವ್ಯಕ್ತಿಯ ನೆಗಡಿ, ಕೆಮ್ಮು ಮತ್ತು ಗಂಟಲು ಕೆರೆತವನ್ನು ಸುಲಭವಾಗಿ ಮೊಳಕೆಯಲ್ಲೇ ಕಿತ್ತು ಹಾಕಲು ಸಾಧ್ಯ. ಪ್ರತಿನಿತ್ಯ ಬಿಸಿನೀರು ಸೇವನೆಯಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.

ಕನಿಷ್ಠ ಪಕ್ಷ ಪ್ರತಿನಿತ್ಯ ಐದು ಕಿಲೋ ಮೀಟರ್ ದೂರ ಬ್ರಿಸ್ಕ್‍ವಾಕ್ ಮಾಡುವುದು ಸೂಕ್ತ. ಇದರಿಂದ ದೇಹದ ಉಷ್ಣತೆಯನ್ನು ಹೆಚ್ಚಿಸಿಕೊಳ್ಳಬಹುದು.ನಾಲಿಗೆ ಚಪಲಕ್ಕೆ ಜಂಕ್‍ಫುಡ್ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ತೊಂದರೆಯಾಗುತ್ತದೆ. ತಂಪಾದ ಪಾನೀಯ ಮತ್ತು ಐಸ್‍ಕ್ರೀಮ್ ತಿನ್ನೋದು ಸಹ ತಪ್ಪು.

ಬೇಸಿಗೆಯಲ್ಲಿ ದೇಹದ ಉಷ್ಣತೆಯಲ್ಲಿ ಏರುಪೇರಾಗಾವುದರಿಂದ ಆವಶ್ಯಕತೆಗೆ ತಕ್ಕಂತೆ ನೀರು ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿ ತರಕಾರಿಗಳನ್ನು ತಿನ್ನುವುದರಿಂದ ಮತ್ತು ಕಾಲಕ್ಕೆ ತಕ್ಕಂತೆ ಆಹಾರ ಸೇವನೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ವ್ಯಕ್ತಿ ತನ್ನ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು.

ಯಾವುದೇ ಕಾರಣಕ್ಕೂ Anxiety ಮತ್ತು  Panic ಆಗದಂತೆ ನೋಡಿಕೊಳ್ಳಬೇಕು. ಹೀಗೆ ಕೆಲ ಸಲಹೆಗಳನ್ನು ಪಾಲಿಸಿದರೆ ದೇಹದ ಒಳಗೆ ಬ್ಯಾಕ್ಟಿರೀಯಾ ಮತ್ತು ವೈರಾಣುಗಳು ಹರಡುವುದು ಮತ್ತು ವೃದ್ಧಿ ಹೊಂದದಂತೆ ನೋಡಿಕೊಳ್ಳಬಹುದು.

– ಡಾ. ಎಂ.ಆರ್.ರಂಗನಾಥ್,
ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರು

Facebook Comments