ದೀಪಾವಳಿ ನಂತರ ಕಾದಿದೆ ‘ಮಾರಿ’ಹಬ್ಬ, ಕೊರೋನಾ 3ನೇ ಅಲೆ ಫಿಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.23- ಜನಜೀವನವನ್ನು ಹೈರಾಣಾಗಿಸಿದ್ದ ಕೊರೊನಾ ಅಬ್ಬರ ತಗ್ಗಿದ್ದು, ಎಲ್ಲವೂ ಸಹಜ ಸ್ಥಿತಿಯತ್ತ ಮರಳಿತು ಎನ್ನುವಷ್ಟರಲ್ಲಿ, ನವೆಂಬರ್‍ನಲ್ಲಿ ಮೂರನೇ ಅಲೆ ಎದುರಾಗಲಿದೆ ಎಂಬ ವರದಿ ಆತಂಕ ಸೃಷ್ಟಿಸಿದೆ. ತಜ್ಞರ ಮಾಹಿತಿ ಪ್ರಕಾರ ಕೊರೊನಾ ರೂಪಾಂತರಗೊಳ್ಳಲು ಆರೇಳು ತಿಂಗಳ ಸಮಯ ತೆಗೆದುಕೊಳ್ಳಲಿದೆ. ಆ ಲೆಕ್ಕಾಚಾರದ ಪ್ರಕಾರ ದೀಪಾ ವಳಿ ಬಳಿಕ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಆತಂಕಗಳಿವೆ.

ಕೊರೊನಾ ರೂಪಾಂತರದ ಬಗ್ಗೆ ತಜ್ಞರು ಊಹಿಸಿದಂತೆ ಚೀನಾದಲ್ಲಿ ಈಗಾಗಲೇ ಮೂರನೆ ಅಲೆ ಕಾಡಲಾರಂಭಿಸಿದೆ. ಅಲ್ಲಿ ಕಳೆದ ಒಂದು ವಾರದಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗಿವೆ. ಎರಡನೆ ಅಲೆ ತಗ್ಗಿದ ಬಳಿಕ ಚೀನಾದಲ್ಲಿ ಎಲ್ಲವೂ ಸಹಜ ಸ್ಥಿತಿಯತ್ತ ಮರಳಿತ್ತು, ಶಾಲಾ ಕಾಲೇಜುಗಳು ಸೇರಿ ಎಲ್ಲವೂ ಎಂದಿನಂತೆ ಚಾಲುಗೊಂಡಿದ್ದವು.

ಈಗ ಇದ್ದಕ್ಕಿದ್ದಂತೆ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದರಿಂದ ಮತ್ತೆ ಲಾಕ್‍ಡೌನ್ ಜಾರಿ ಮಾಡಲಾಗಿದೆ.ಭಾರತದಲ್ಲಿ ಏಪ್ರಿಲ್, ಮೇ ತಿಂಗಳಿನಲ್ಲಿ ಕಾಡಿದ್ದ ಕೊರೊನಾ ನಂತರ ತಣ್ಣಗಾಗಿದೆ. ಕಳೆದ ಐದು ತಿಂಗಳಿನಿಂದ ಸೋಂಕು ನಿಯಂತ್ರಣದಲ್ಲಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಗಣನೀಯವಾಗಿ ತಗ್ಗಿದೆ, ಸಾವಿನ ಪ್ರಮಾಣವೂ ನಿಯಂತ್ರಣದಲ್ಲಿದೆ.

ಇದಕ್ಕೆ ಬೆಂಬಲ ಎಂಬಂತೆ ಲಸಿಕಾ ಅಭಿಯಾನ ಐತಿಹಾಸಿಕ ದಾಖಲೆ ನಿರ್ಮಿಸಿದೆ. 100 ಕೋಟಿ ಲಸಿಕೆ ಹಾಕಲಾಗಿದ್ದು, ಶೇ.75ರಷ್ಟು ಗುರಿ ಸಾಸಲಾಗಿದೆ. ಯಾವುದೇ ಸಾಂಕ್ರಾಮಿಕ ರೋಗವಾಗಿದ್ದರೂ ಶೇ.80ರಷ್ಟು ಲಸಿಕಿಕರಣವಾಗಿದ್ದರೆ ಸೋಂಕು ತನ್ನಷ್ಟಕ್ಕೆ ತಾನೇ ನಿಷ್ಕ್ರೀಯಗೊಳ್ಳುತ್ತದೆ. ಈವರೆಗೂ ಹಲವಾರು ರೋಗಗಳು ಇದೇ ರೀತಿ ಅಳಿದು ಹೋಗಿವೆ. ಆದರೆ ಕೊರೊನಾ ಸ್ವರೂಪವೇ ಬೇರೆ ಇದೆ.

ಇದು ಪದೇ ಪದೇ ರೂಪಾಂತರಗೊಳ್ಳುತ್ತಿದೆ. ಈಗ ಲಭ್ಯ ಇರುವ ಲಸಿಕೆಗಳು ಈವರೆಗಿನ ರೂಪಾಂತರ ಸೋಂಕನ್ನು ನಿಗ್ರಹಿಸಬಲ್ಲವಾಗಿದ್ದವು. ನಿರೀಕ್ಷಿತ ಮೂರನೆ ಅಲೆ ಯಾವ ಸ್ವರೂಪದಲ್ಲಿರುತ್ತದೆ ಎಂಬ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಮೊದಲನೆ ಅಲೆ ಮತ್ತು ಎರಡನೆ ಅಲೆಯಲ್ಲಿ ಸಮಾನ ರೋಗಲಕ್ಷಣಗಳಿದ್ದರೂ, ಎರಡನೆ ಅಲೆಯ ಭೀಕರತೆ ಬೇರೆ ರೀತಿಯಲ್ಲಿತ್ತು.

18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಲಸಿಕೆ ನೀಡಲಾಗಿದೆ. ಹಾಗಾಗಿ ಕೊರೊನಾ ಮತ್ತು ಅದರ ರೂಪಾಂತರ ಸೋಂಕುಗಳನ್ನು ತಡೆಯುವ ರೋಗ ನಿರೋಧಕ ಶಕ್ತಿ ಲಸಿಕೆಗಳಿಂದ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಮೂರನೇ ಅಲೆ ಎದುರಾದರೂ ಹೆದರ ಬೇಕಿಲ್ಲ, ಲಸಿಕೆ ಪಡೆದವರಿಗೆ ಸಾಮಾನ್ಯ ಜ್ವರದಂತೆ ಬಂದು ಹೋಗಲಿದೆ. ಕ್ಲಿನಿಕಲ್ ಮತ್ತು ಆಸ್ಪತ್ರೆ ಸೇರುವ ಅಪಾಯದ ಸನ್ನಿವೇಶಗಳು ಕಡಿಮೆ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗೆಂದು ಮಾಸ್ಕ್ ಧರಿಸದೆ ಇರುವುದು, ಕೋವಿಡ್ ಶಿಷ್ಠಾಚಾರಗಳನ್ನು ಪಾಲಿಸದೆ ಮೈಮರೆಯುವುದು ಸೂಕ್ತವಲ್ಲ ಎಂಬ ಎಚ್ಚರಿಕೆಗಳು ಕೇಳಿ ಬರುತ್ತಿವೆ.

ಲಸಿಕೆ 100 ಕೋಟಿ ದಾಟಿದೆ, ಸೋಂಕು ತಗ್ಗಿದೆ ಎನ್ನುತ್ತಿದ್ದಂತೆ ಬಹುತೇಕ ರಾಜ್ಯಗಳು ನಿರ್ಬಂಧಗಳನ್ನು ಸಡಿಲಿಸಿವೆ. ಕೈಗಾರಿಕೆಗಳು, ಮಾಲ್, ಥಿಯೇಟರ್, ಸಾರ್ವಜನಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ ಸಮಾರಂಭಗಳು, ಶಾಲಾ-ಕಾಲೇಜುಗಳು ಎಲ್ಲವೂ ಮುಕ್ತಗೊಂಡಿವೆ. ಜನ ಮಾಸ್ಕ್ ಧರಿಸುವ ಬಗ್ಗೆಯೂ ನಿರ್ಲಕ್ಷ್ಯತೆ ತೋರಿಸಲಾರಂಭಿಸಿದ್ದಾರೆ.

ಇತ್ತೀಚೆಗೆ ಉಪಚುನಾವಣೆ ಹಾಗೂ ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಜನ ಜಮಾವಣೆಗೊಳ್ಳುತ್ತಿದ್ದಾರೆ. ಈ ಹಂತದಲ್ಲಿ ಮತ್ತೆ ಮೂರನೆ ಅಲೆಯ ಆತಂಕ ಎದುರಾಗಿರುವುದು ಆತಂಕ ಮೂಡಿಸಿದೆ.ಈಗಷ್ಟೇ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿವೆ.

ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕೊರೊನಾ ಸೋಂಕು ಏರಿಳಿತದ ಕಣ್ಣಾಮುಚ್ಚಾಲೆಯಾಡುತ್ತಿದೆ. ಕೊರೊನಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಹೊರತು ಪಡಿಸಿ ಉಳಿದೆಲ್ಲೆಡೆ ಸೋಂಕು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಇವೆ. ಒಂದು ವೇಳೆ ಚೀನಾದ ಮಾದರಿಯಲ್ಲೇ ಇಲ್ಲಿಯೂ ಸೋಂಕು ಹೆಚ್ಚಾದರೆ, ಅದು ಮೂರನೆ ಅಲೆಗೆ ಕಾರಣವಾದರೆ ಎಂಬ ಭಯ ಜನಸಾಮಾನ್ಯರಲ್ಲಿ ಹುಟ್ಟುತ್ತಿದೆ.

ಒಂದು ಮತ್ತು ಎರಡನೆ ಅಲೆಯಲ್ಲಿ ಪಾಠ ಕಲಿತಿರುವ ಸರ್ಕಾರಗಳು ಆರೋಗ್ಯ ಕ್ಷೇತ್ರದ ಮೂಲಸೌಲಭ್ಯ ಹೆಚ್ಚಳ ಮಾಡಿವೆ. ಆಮ್ಲಜನಕದ ಲಭ್ಯತೆ, ಆಸ್ಪತ್ರೆಗಳಲ್ಲಿ ಅಗತ್ಯದಷ್ಟು ಬೆಡ್‍ಗಳ ಸ್ಥಾಪನೆ, ಮಕ್ಕಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಸೇರಿದಂತೆ ನಾನಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೂ ಮತ್ತೆ ಕೊರೊನಾ ಎಂದರೆ ಜನ ಬೆಚ್ಚಿ ಬೀಳುತ್ತಿದ್ದಾರೆ.

Facebook Comments

Sri Raghav

Admin