ಆಗಸ್ಟ್ ನಲ್ಲೇ ಕೊರೋನಾ 3ನೇ ಅಲೆ ಫಿಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.30- ಜನ ಕೊರೊನಾ ನಿಯಮ ಗಳನ್ನು ಗಾಳಿಗೆ ತೂರಿ ಬೇಜವಾಬ್ದಾರಿ ತೋರುತ್ತಿರುವುದ ರಿಂದ ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲೇ ಮೂರನೆ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ನೆರೆಯ ಕೇರಳದಲ್ಲಿ ಮೂರನೆ ಅಲೆ ಆತಂಕ ಎದುರಾಗಿದ್ದು, ಆಗಸ್ಟ್ ಎರಡನೆ ವಾರದಲ್ಲಿ ರಾಜ್ಯದಲ್ಲೂ ಮೂರನೆ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ಧಾರೆ.

ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆ ಬಿಡುಗಡೆ ಮಾಡುತ್ತಿರುವ ಬುಲೆಟಿನ್‍ನಲ್ಲಿ ಬಹಿರಂಗಗೊಳ್ಳುತ್ತಿರುವುದನ್ನು ಗಮನಿಸಿದರೆ ಕೆಲವೇ ದಿನಗಳಲ್ಲಿ ಕೊರೊನಾ ಸೋಂಕು ತೀವ್ರಗೊಳ್ಳುವುದರ ಸಂಕೇತವಾಗಿದೆ.

ಹೊರ ರಾಜ್ಯಗಳಿಂದ ಬರುತ್ತಿರುವವರ ಕೊರೊನಾ ತಪಾಸಣೆ ನಡೆಸದಿರುವುದು, ಕೆಲ ಪ್ರಯಾಣಿಕರು ಕಳ್ಳದಾರಿ ಮೂಲಕ ರಾಜ್ಯ ಪ್ರವೇಶಿಸುತ್ತಿರುವುದು, ಪ್ರವಾಸಿ ತಾಣಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಪ್ರಮುಖ ಪ್ರದೇಶಗಳಲ್ಲಿ ನಿಯಮ ಮೀರಿ ಪಾಲ್ಗೊಳ್ಳುತ್ತಿರುವ ಜನರು, ಮಾಲ್‍ಗಳಲ್ಲಿ ರೂಲ್ಸ್ ಫಾಲೋ ಮಾಡುವಲ್ಲಿ ವಿಫಲ, ಬಸ್‍ಗಳಲ್ಲಿ ಮನಸೋ ಇಚ್ಚೆ ಪ್ರಯಾಣಿಕರನ್ನು ತುಂಬಿಕೊಳ್ಳುತ್ತಿರುವುದು ಹಾಗೂ ದೇವಾಲಯಗಳಿಗೆ ದಾಂಗುಡಿ ಇಡುತ್ತಿರುವ ಭಕ್ತ ಸಮೂಹದಿಂದ ಕೊರೊನಾ ಸೋಂಕು ಏರಿಕೆಯಾಗುತ್ತಿರುವುದು ಕಂಡು ಬರುತ್ತಿದೆ.

ಸರ್ಕಾರ, ಮತ್ತು ಜನರ ಬೇಜವಾಬ್ದಾರಿ ಜತೆಗೆ ವಾತಾವರಣದಲ್ಲಿ ಆಗುತ್ತಿರುವ ದಿಢೀರ್ ಬದಲಾವಣೆ ಕಾರಣದಿಂದಲೂ ಸೋಂಕು ಹೆಚ್ಚಳಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕೇರಳವೇ ಕಂಟಕ: ಈಗಾಗಲೆ ಮೂರನೆ ಅಲೆಯಿಂದ ತತ್ತರಿಸಿರುವ ಕೇರಳದಿಂದ ಆಗಮಿಸುತ್ತಿರುವ ಪ್ರಯಾಣಿಕರಿಗೆ ಕಡಿವಾಣ ಹಾಕಲು ಸಾಧ್ಯವಾಗದ ಹಿನ್ನಲೆಯಲ್ಲಿ ರಾಜ್ಯಕ್ಕೆ ಕೇರಳವೇ ಕಂಟಕವಾಗಿ ಪರಿಣಮಿಸಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಲಾಕ್‍ಡೌನ್ ತೆರವುಗೊಳಿಸಲಾಗಿದೆ ಎಂದು ಜನ ಮೈಮರೆತು ಎಲ್ಲೆಂದರಲ್ಲಿ ಓಡಾಡುವುದನ್ನು ಬಿಟ್ಟು ಕೊರೊನಾ ನಿಯಮಗಳನ್ನು ಪಾಲಿಸಬೇಕು. ಇದರ ಜತೆಗೆ ತಮ್ಮ ಮಕ್ಕಳ ಆರೋಗ್ಯದ ಮೇಲೆ ನೀಗಾ ಇರಿಸುವ ಅವಶ್ಯಕತೆ ಇದೆ. ಮಕ್ಕಳಿಗೆ ಯಾವುದೆ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ಮಕ್ಕಳ ತಜ್ಞ ವೈದ್ಯರಲ್ಲಿಗೆ ಅವರನ್ನು ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಿಸುವುದು ಸೂಕ್ತ ಎಂದು ತಜ್ಞರು ಸಲಹೆ ನೀಡಿದ್ದಾರೆ.

Facebook Comments