ಕೊರೊನ ಭೀತಿ : ಪತ್ನಿಯನ್ನೇ ಮನೆಗೆ ಸೇರಿಸಿಕೊಳ್ಳದ ಪತಿ ಮಹಾಶಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಕೊರೊನಾ ಸೋಂಕು ಎಲ್ಲಿ ಹಬ್ಬಿಬಿಡುತ್ತದೋ ಎಂದು ಗಾಬರಿಗೊಂಡ ಪತಿ ಮಹಾಶಯನೊಬ್ಬ ಮನೆಗೆ ಬಂದ ಪತ್ನಿಗೆ ಬಾಗಿಲು ತೆಗೆಯಲು ಹಿಂದೇಟು ಹಾಕಿರುವ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕೊನೆಗೆ ಪತಿಯ ಸಂಬಂಧಿಕರು ಮತ್ತು ಪೊಲೀಸರ ಮಧ್ಯಪ್ರವೇಶದಿಂದಾಗಿ ಪತ್ನಿಗೆ ಮನೆ ಪ್ರವೇಶಿಸಲು ಅವಕಾಶ ಸಿಕ್ಕಿದೆ. ಆದರೆ ಪತಿ ಮಾತ್ರ ಮನೆಯಿಂದಲೇ ಪರಾರಿಯಾಗಿದ್ದಾನೆ.

ಅಷ್ಟಕ್ಕೂ ಈ ಘಟನೆ ನಡೆದಿರುವುದು ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಏಪ್ರಿಲ್ ತಿಂಗಳಿನಲ್ಲಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಪರಿಣಾಮ ಎಲ್ಲವೂ ಸ್ತಬ್ದಗೊಂಡವು. ಹೀಗಾಗಿ ದೂರದ ಚಂಡೀಘಡದಲ್ಲಿದ್ದ ಪತ್ನಿ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ.

ಕೊನೆಗೆ ಸರ್ಕಾರ ಮೇ ತಿಂಗಳ ಮಧ್ಯದಲ್ಲಿ ವಾಹನಗಳ ಸಂಚಾರ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಿತು. ಮೂರು ತಿಂಗಳಿನಿಂದ ಪತಿಯ ಮುಖವನ್ನೇ ನೋಡದೆ ಪರಿತಪಿಸುತ್ತಿದ್ದ ಪತ್ನಿ ಅಂಗೋ ಹಿಂಗೋ ಕಷ್ಟಪಟ್ಟು ಮನೆಗೆ ಬಂದರು. ಬೆಂಗಳೂರಿನಲ್ಲಿ ಪತಿ ಮತ್ತು 10 ವರ್ಷದ ಮಗ ಇದ್ದರು.

ಮನೆಗೆ ಬಂದರೆ ಪತಿಯಿಂದ ತುಂಬು ಹೃದಯದ ಸ್ವಾಗತ ಸಿಗಬಹುದೆಂದು ನಿರೀಕ್ಷೆಯಲ್ಲಿದ್ದ ಪತ್ನಿಗೆ ಏಕಾಏಕಿ ಸಿಡಿಲು ಬಡಿದಂತಾಯಿತು. ಏಕೆಂದರೆ ಜಪ್ಪಯ್ಯ ಎಂದರೂ ಪತಿ ಪತ್ನಿಗೆ ಮನೆಯ ಬಾಗಿಲನ್ನೇ ತೆಗೆಯಲಿಲ್ಲ.

ಮೂರು ತಿಂಗಳು ನಂತರ ಮಗನನ್ನು ನೋಡಲು ಬಂದ ಪತ್ನಿಯನ್ನ ಪತಿ ಮನೆಯ ಹೊರಗೆ ನಿಲ್ಲಿಸಿದ್ದಾನೆ. ಕೊನೆಗೆ ಮಹಿಳೆ ತಾನು 14 ದಿನ ಮನೆಯಲ್ಲಿ ನಿಮ್ಮಿಬ್ಬರಿಂದ ದೂರವಿದ್ದು ಕ್ವಾರಂಟೈ£ ನಲ್ಲಿರುತ್ತೇನೆ. ಕೋವಿಡ್ ನೆಗೆಟಿವ್ ವರದಿ ಬಂದ ಬಳಿಕ ಹೊರಗೆ ಬರುತ್ತೇನೆ ಎಂದು ಕೇಳಿದರೂ ಪತಿ ಬಾಗಿಲು ತೆಗೆದಿಲ್ಲ.

ಪತಿ ಬಾಗಿಲು ತೆಗೆಯದಿದ್ದಾಗ ಕೊನೆಗೆ ಪತ್ನಿ ಮಹಿಳಾ ಸಹಾಯವಾಣಿ ಮೂಲಕ ವರ್ತೂರು ಠಾಣೆ ಪೊಲೀಸರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಪೊಲೀಸರು ಫೋನ್ ಮಾಡಿದರೆ ಪತಿ ಕರೆ ಸ್ವೀಕರಿಸಲಿಲ್ಲ. ಕೊನೆಗೆ ಪೊಲೀಸರು ಬರಬಹುದೆಂದು ತಿಳಿದು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ಸದ್ಯ ಪೊಲೀಸರು ಮಹಿಳೆಯನ್ನು ಆಕೆಯ ಸಂಬಂಧಿಕರ ಮನೆಯಲ್ಲಿರಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ.

Facebook Comments