ಭೀತಿ ಬೇಡ : ಕೊರೊನಾ ಅಗ್ನಿಪರೀಕ್ಷೆಯಲ್ಲಿ ಗೆಲ್ಲೋಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಕೊರೊನಾ ಭೀತಿಗೆ ಹೆದರಿ ಕೈಕಟ್ಟಿ ಕುಳಿತುಕೊಳ್ಳುವ ಅಗತ್ಯವಿಲ್ಲ. ಈ ಅಗ್ನಿ ಪರೀಕ್ಷೆಯನ್ನು ನಾವು ಎದುರಿಸಲೇ ಬೇಕಾದ ಅನಿವಾರ್ಯತೆ ಇದೆ. ಭೀತಿ ತೊರೆದು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕಿದೆ. ನಾವು ದೃಢವಾಗಿ ನಿಂತು ಸಮಾಜವನ್ನು ಆತಂಕದಿಂದ ದೂರಾಗಿಸಬೇಕಿದೆ. ಕೊರೋನಾ ಏನು ಕೊಲ್ಲುವ ಖಾಯಿಲೆಯಲ್ಲ. ಅದನ್ನು ನಾವು ಗೆಲ್ಲುವ ಅವಕಾಶವಿದೆ. ಆತಂಕದಿಂದ ಹೊರಬಂದರೆ ಅರ್ಧ ಗೆದ್ದಂತೆ.

ಸರ್ಕಾರದ ಮಂತ್ರಿಗಳೇ ಕೊರೊನಾ ಸಮುದಾಯಕ್ಕೆ ಹರಡಿದೆ ಎಂದು ಹೇಳುತ್ತಿದ್ದಾರೆ. ಕರೋನಾ ಆ ಬೀದಿಗೆ ಬಂತು, ಈ ಗಲ್ಲಿಗೆ ಬಂತು, ಅವರಿಗೆ ಬಂತು ಇವರಿಗೆ ಬಂತು ಎಂದು ಗಾಬರಿ ಪಡುತ್ತ ಕೂರುವುದರಲ್ಲಿ ಇನ್ನು ಅರ್ಥವಿಲ್ಲ. ಅದು ಮನೆಮನೆಗಳನ್ನು ತಲುಪುತ್ತಿದೆ. ಬಹಳಷ್ಟು ರೋಗಿಗಳು ಭೀತಿಯಿಂದಲೇ ಮಾನಸಿಕವಾಗಿ, ದೈಹಿಕವಾಗಿ ಕುಸಿದು ಸಾಯುತ್ತಿದ್ದಾರೆ, ಹಾಗಾಗಕೂಡದು. ಕೆಲವು ಮುಖ್ಯ ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಂಡಿರೋಣ.

1. ಕೊರೊನಾ ಪಾಸಿಟಿವ್ ಇರುವವರಿಗೆಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕಾಗಿಲ್ಲ. ಯಾವುದೇ ಸಿಂಪ್ಟಮ್ಸ್ ಇಲ್ಲದವರು ಹೆದರಿ ಆಸ್ಪತ್ರೆಗಳಿಗೆ ಅಡ್ಮಿಟ್ ಆಗುವುದು ಬೇಕಾಗಿಲ್ಲ. ಕರೋನಾ ಸೋಂಕಿತರೆಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳುವುದು ಅಸಾಧ್ಯ. ನಮ್ಮ ವೈದ್ಯಕೀಯ ವ್ಯವಸ್ಥೆ ಕುಸಿದುಹೋಗದಂತೆ ಎಚ್ಚರ ವಹಿಸುವುದು ಮುಖ್ಯ. ಯಾರಿಗೆ ನಿಜವಾಗಿಯೂ ಚಿಕಿತ್ಸೆ, ಆಕ್ಸಿಜನ್, ವೆಂಟಿಲೇಟರ್ ಬೇಕಾಗಿದೆಯೋ ಅದು ಅವರಿಗೆ ದೊರೆಯುವಂತೆ ನೋಡಿಕೊಳ್ಳುವ ಹೊಣೆ ಎಲ್ಲರದ್ದೂ ಆಗಿದೆ.

2. ಬೇರೆ ಬಗೆಯ ಆರೋಗ್ಯ ಸಮಸ್ಯೆ ಇರುವವರೆಲ್ಲ ಸ್ವಾಬ್ ಟೆಸ್ಟಿಂಗ್ ಮಾಡಿಸುವ ಅಗತ್ಯವಿಲ್ಲ. ಕೊರೊನಾ ಲಕ್ಷಣ ಇದ್ದವರು ಮಾತ್ರ ಮಾಡಿಸಿದರೆ ಸಾಕು.

3. ನಮ್ಮಲ್ಲಿ ಬಹಳಷ್ಟು ಮಂದಿಗೆ ಕೊರೊನಾ ಈಗಾಗಲೇ ಬಂದುಹೋಗಿರುವ ಸಾಧ್ಯತೆಯೂ ಇದೆ. ಯಾಕೆಂದರೆ ಕರ್ನಾಟಕದಲ್ಲಿ ದಾಖಲಾಗಿರುವ ಕರೋನಾ ಕೇಸುಗಳಲ್ಲಿ ಶೇ. 95 ರಷ್ಟು ಪ್ರಕರಣಗಳಲ್ಲಿ ರೋಗಲಕ್ಷಣಗಳು ಇರಲಿಲ್ಲ. ಕಾಂಟ್ಯಾಕ್ಟ್ ಟ್ರೇಸಿಂಗ್ ಪ್ರೋಟೋಕಾಲ್ ಪ್ರಕಾರ ಅವರು ಟೆಸ್ಟ್ ಗಳಿಗೆ ಒಳಗಾಗಿದ್ದರು. ಅವರಿಗೆ ಕರೋನಾ ಇದೆಯೆಂದು ಗೊತ್ತಾಗಿದ್ದು, ಪರೀಕ್ಷೆಗಳ ಮೂಲಕ. ಸಿಂಪ್ಟಮ್ಸ್ ಗಳಿಂದ ಅಲ್ಲ. ನೆನಪಿಡಿ, ಕರೋನಾದಲ್ಲಿ ಮರಣಪ್ರಮಾಣ ತೀರಾ ಕಡಿಮೆ. ಕರೋನಾ ಎಂದರೆ ಸಾವು ಎಂದು ಹೆದರಿಕೊಳ್ಳುವುದು ಮೂರ್ಖತನ.

4. ಸಿಂಪ್ಟಮ್ಸ್ ಇಲ್ಲದ ಸೋಂಕಿತರು ಮನೆಯಲ್ಲೇ ಐಸೋಲೇಟ್ ಆಗುವುದು ಎಲ್ಲ ದೃಷ್ಟಿಯಲ್ಲೂ ಒಳ್ಳೆಯದು. ಕುಟುಂಬ ಸದಸ್ಯರ ಭಾವನಾತ್ಮಕ ಮತ್ತು ನೈತಿಕ ಬಲ ಅವರಿಗಿರುತ್ತದೆ. ತೀರಾ ಪುಟ್ಟ ಮನೆಗಳಾದರೆ ಐಸೋಲೇಷನ್ ಕಷ್ಟ. ಅದಕ್ಕಾಗಿ ಬೇರೆ ದಾರಿ ಹುಡುಕಿಕೊಳ್ಳಬೇಕಾಗುತ್ತದೆ.

5. ಕಂಡಕಂಡ ವಾಟ್ಸಾಪ್ ಯೂನಿವರ್ಸಿಟಿ ಮೆಡಿಕೇಷನ್ನುಗಳನ್ನು ನಿಮ್ಮ ದೇಹಗಳ ಮೇಲೆ ಪ್ರಯೋಗ ಮಾಡಿಕೊಳ್ಳಬೇಡಿ. ಒಂದು ಹೋಗಿ ನೂರು ಮಾಡಿಕೊಳ್ಳುವುದು ಬೇಡ. ಅಂಥ ಸಂದೇಶಗಳನ್ನು ಬೇರೆಯವರಿಗೆ ಫಾರ್ವರ್ಡ್ ಮಾಡುವುದನ್ನು ಬಿಟ್ಟುಬಿಡಿ.

6. ಕರೋನಾ ರೋಗಲಕ್ಷಣಗಳು ಅಧಿಕವಾಗಿದ್ದು, ಉಸಿರಾಟದ ಸಮಸ್ಯೆಗಳು ಇದ್ದರೆ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯ. ಹಣವಿಲ್ಲದವರಿಗೆ ಸರ್ಕಾರಿ ಆಸ್ಪತ್ರೆಗಳೇ ಚಿಕಿತ್ಸೆ ನೀಡಬೇಕು. ಚಿಕಿತ್ಸೆಯ ನಂತರವೂ ರೋಗಿ ಗುಣವಾಗದಿದ್ದರೆ ಯಾರೇನು ಮಾಡಲು ಸಾಧ್ಯ? ಬಂದದ್ದನ್ನು ಎದುರಿಸಲು ಮಾನಸಿಕವಾಗಿ ಸಜÁ್ಜಗಬೇಕು. ಆದರೆ ಉಳಿಸಿಕೊಳ್ಳಲು ಸಾಧ್ಯವಿತ್ತು, ಉಳಿಸಿಕೊಳ್ಳಲಾಗಲಿಲ್ಲ ಎಂಬ ಹಳಹಳಿಕೆ ನಮ್ಮಲ್ಲಿ ಉಳಿದುಕೊಳ್ಳಬಾರದು. ಅದು ಬದುಕಿರುವವರೆಗೆ ನಮ್ಮನ್ನು ಕೊಲ್ಲುತ್ತಿರುತ್ತದೆ. ಹೀಗಾಗಿ ಪ್ರೀತಿಪಾತ್ರರನ್ನು ಉಳಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಪಡೋಣ.

7. ಖಾಸಗಿ ಆಸ್ಪತ್ರೆಗಳು ಗಂಭೀರ ಸಮಸ್ಯೆ ಇರುವ ಕರೋನಾ ರೋಗಿಗಳನ್ನು ದಾಖಲಿಸಿಕೊಳ್ಳದಿದ್ದರೆ ಕ್ರಿಮಿನಲ್ ಕೇಸು ಹೂಡುವುದಾಗಿ ಸರ್ಕಾರ ಎಚ್ಚರಿಸಿದೆ. ಯಾವುದಾದರೂ ಖಾಸಗಿ ಆಸ್ಪತ್ರೆ ದಾಖಲಿಸಿಕೊಳ್ಳಲು ನಿರಾಕರಿಸಿದರೆ ದೂರು ನೀಡಿ. ಚಿಕಿತ್ಸೆ ನಿಮ್ಮ ಹಕ್ಕು. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ಎಲ್ಲಾದರೂ ನಿಮ್ಮ ಹಕ್ಕನ್ನು ನಿರಾಕರಿಸುವಂತಿಲ್ಲ. ಇಂಥ ಸಂದರ್ಭಗಳಲ್ಲಿ ಪ್ರಭಾವಿ ವ್ಯಕ್ತಿಗಳು, ಸಂಘಟನೆಗಳ ಮುಖಂಡರನ್ನು ಬಳಸಿಕೊಳ್ಳಿ. ಸಾಮಾಜಿಕ ಮಾಧ್ಯಮವೂ ಕೂಡ ಒಂದು ಹಂತದಲ್ಲಿ ಪ್ರಭಾವಶಾಲಿ. ಅದನ್ನೂ ಕೂಡ ಬಳಸಿಕೊಳ್ಳಬಹುದು.

8. ನಿಮ್ಮ ಬಳಿ ಹೆಲ್ತ್ ಇನ್ಯೂರೆನ್ಸ್ ಇದ್ದರೆ ಹಣಕಾಸಿನ ಅರ್ಧ ಸಮಸ್ಯೆ ಬಗೆಹರಿದಹಾಗೆ. ಆದರೆ ಇನ್ಯೂರೆನ್ಸ್ ಇದ್ದರೂ ಪಿಪಿಇ ಕಿಟ್ ಗಳಿಗೆ ಕಿಸೆಯಿಂದಲೇ ಹಣ ಕೊಡಬೇಕು. ಬೆಡ್ ಚಾರ್ಜ್ ಕೂಡ ಪೂರ್ತಿಯಾಗಿ ಇನ್ಶೂರೆನ್ಸ್ ಕಂಪೆನಿಗಳೇ ಕೊಡುವುದಿಲ್ಲ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಹಣ ಸಂಗ್ರಹಿಸಿ ಇಟ್ಟುಕೊಂಡಿರಿ. ಈ ಸಂದರ್ಭದಲ್ಲಿ ಯಾವುದೇ ರೀತಿಯ ದುಂದುವೆಚ್ಚ ಮಾಡಬೇಡಿ. ಮರೆಯಬೇಡಿ, ಮನೆಯಲ್ಲಿ ಒಬ್ಬರು ಕರೋನಾ ಪಾಜಿಟಿವ್ ಆದರೆ ಮನೆಯಲ್ಲಿ ಇರುವವರೆಲ್ಲ ಪಾಜಿಟಿವ್ ಆಗುವ ಸಾಧ್ಯತೆ ಇರುತ್ತದೆ. ಅದರಲ್ಲಿ ಚಿಕಿತ್ಸೆ ಯಾರಿಗೆಲ್ಲ ಬೇಕಾಗುತ್ತದೆ ಎಂದು ಹೇಳಲು ಬಾರದು. ಹೀಗಾಗಿ ಲಿಕ್ವಿಡ್ ಕ್ಯಾಶ್ ನಿಮ್ಮ ಬಳಿ ಇರುವುದು ಮುಖ್ಯ.

9. ಆರ್ಥಿಕವಾಗಿ ಶಕ್ತಿಹೀನರಾಗಿದ್ದರೆ, ನಿಮಗೆ ಸಹಾಯ ಮಾಡಬಹುದಾದ ಬಂಧುಗಳು, ಹಿತೈಶಿಗಳ ಆಸರೆ ಪಡೆಯುವುದು ತಪ್ಪಲ್ಲ. ದುಡಿದು ಸಾಲ ತೀರಿಸುವ ಪ್ರಾಮಾಣಿಕತೆ ಇರಬೇಕು, ಅಷ್ಟೆ. ಅದೇ ರೀತಿ ನೀವು ಆರ್ಥಿಕವಾಗಿ ಸದೃಢರಾಗಿದ್ದರೆ, ಕಷ್ಟದಲ್ಲಿರುವ ನಿಮ್ಮ ಬಂಧುಮಿತ್ರರ ನೆರವಿಗೆ ನಿಲ್ಲಿ, ಅವರು ಅಸಹಾಯಕತೆಯಿಂದ ಬೇಡುವ ಮೊದಲೇ ಸಹಾಯಹಸ್ತ ಚಾಚಿ.

10. ಈ ಕಷ್ಟ ಕಾಲದಲ್ಲಿ ನಿಮಗೆ ಆರ್ಥಿಕವಾಗಿ ಮಾತ್ರವಲ್ಲದೆ ಬೇರೆ ಬೇರೆ ರೂಪದಲ್ಲಿ ಸಹಾಯ ಮಾಡಬಹುದಾದ ಬಂಧು ಮಿತ್ರರ ಪಟ್ಟಿ ಇಟ್ಟುಕೊಳ್ಳಿ. ಯಾರು ಯಾವ ರೂಪದಲ್ಲಿ ನೆರವಾಗುತ್ತಾರೋ ಯಾರಿಗೆ ಗೊತ್ತು? ಅದೇ ರೀತಿ, ಆಂಬ್ಯಲೆನ್ಸ್, ಸಹಾಯವಾಣಿ ಸಂಖ್ಯೆಗಳನ್ನು ಸೇವ್ ಮಾಡಿ ಇಟ್ಟುಕೊಳ್ಳಿ.

Facebook Comments