ಲಕ್ಷಣ ರಹಿತ ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಜಾರ್ಜ್, ಆರೋಗ್ಯಾಧಿಕಾರಿಗಳ ಮಹಾ ಎಡವಟ್ಟು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.8- ಕೊರೊನಾ ಸೋಂಕಿನ ಬಗ್ಗೆ ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ಲಕ್ಷಣ ರಹಿತ ಸೋಂಕಿತರನ್ನು ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡುವಲ್ಲಿ ಅಧಿಕಾರಿಗಳು ಎಡವಟ್ಟು ಮಾಡುತ್ತಿದ್ದಾರೆ.

ಗಂಟಲು ದ್ರವ ಟೆಸ್ಟ್ ಮಾಡಿಸಿದಾಗ ಸೋಂಕು ಇರುವುದು ದೃಢಪಟ್ಟು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಏಳು ದಿನಗಳ ನಂತರ ಇಂತಹವರನ್ನು ಮತ್ತೆ ತಪಾಸಣೆಗೊಳಪಡಿಸಿ ಸೋಂಕು ದೃಢಪಡಿಸಿಕೊಂಡು ಡಿಸ್ಜಾರ್ಜ್ ಮಾಡಬೇಕು. ಆದರೆ, ಗಂಟಲು ದ್ರವ ಪಡೆದು ಟೆಸ್ಟ್ ಮಾಡದೆ ಮನೆಗೆ ಕಳುಹಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಈ ಎಡವಟ್ಟಿನಿಂದ ಸೋಂಕು ಮತ್ತೆ ವ್ಯಾಪಿಸುವ ಸಾಧ್ಯತೆ ಇದೆ. ಲಕ್ಷಣ ರಹಿತ ಸೋಂಕಿತರನ್ನು ಹಾಗೆಯೇ ಕೋವಿಡ್ ಆಸ್ಪತ್ರೆಗಳಿಂದ ಅಧಿಕಾರಿಗಳು ಮನೆಗೆ ಕಳುಹಿಸುತ್ತಿದ್ದಾರೆ.

ಈ ಬಗ್ಗೆ ಕೇಳಿದರೆ ಏಳು ದಿನ ಚಿಕಿತ್ಸೆ ಕೊಟ್ಟಿದ್ದೇವೆ. ಮತ್ತೊಮ್ಮೆ ಟೆಸ್ಟ್ ಮಾಡುವ ಅವಶ್ಯಕತೆ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ. ಸೋಂಕಿತರ ಸ್ವಾಬ್ ಟೆಸ್ಟ್ ಮಾಡಿಸದೆ ಮನೆಗೆ ಕಳುಹಿಸುತ್ತಿರುವುದು ಏಕೆ? ಸೋಂಕು ಇಲ್ಲವೆಂದು ಹೇಗೆ ಋಜುವಾತಾಗುತ್ತದೆ? ಮನೆಗೆ ಹೋದ ಮೇಲೆ ಮತ್ತೆ ಪಾಸಿಟಿವ್ ಕಂಡುಬಂದರೆ ಸೋಂಕು ವ್ಯಾಪಿಸುವುದಿಲ್ಲವೆ ಎಂಬ ಪ್ರಶ್ನೆ ಮೂಡುತ್ತದೆ.

ಆರೋಗ್ಯ ಇಲಾಖೆ ಅಧಿಕಾರಿಗಳ ಈ ನಿರ್ಲಕ್ಷ್ಯ ಮತ್ತು ಎಡವಟ್ಟಿನಿಂದ ಸೋಂಕು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮೊದಲು ಕೊರೊನಾ ಸೋಂಕು ಲಕ್ಷಣಗಳು ಕಂಡುಬರುತ್ತಿತ್ತು.

ಈಗ ಯಾವುದೇ ಲಕ್ಷಣಗಳಿಲ್ಲದವರಲ್ಲೂ ಕೂಡ ಸೋಂಕು ಕಂಡುಬರುತ್ತಿದೆ. ಹಾಗಾಗಿ ಸ್ವಾಬ್ ಟೆಸ್ಟ್ ದೃಢಪಡಿಸಿಕೊಂಡೇ ಡಿಸ್ಜಾರ್ಜ್ ಮಾಡಬೇಕು. ಆದರೆ, ಕೆಲ ಅಧಿಕಾರಿಗಳು ಈ ಕ್ರಮ ಕೈಗೊಳ್ಳುತ್ತಿಲ್ಲ.

ಏಳು ದಿನಗಳ ನಂತರ ಲ್ಯಾಬ್‍ಟೆಸ್ಟ್ ಮಾಡಿದ ಮೇಲೆ ನೆಗೆಟಿವ್ ಬಂದರೆ ಮಾತ್ರ ಮನೆಗೆ ಕಳುಹಿಸಬೇಕು. ಏಳು ದಿನಗಳ ಚಿಕಿತ್ಸೆ ಆದ ಮೇಲೆ ಯಾವುದೇ ಟೆಸ್ಟ್ ಮಾಡದೆ ಮನೆಗೆ ಕಳುಹಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಕ್ರಮಗಳು ಕೂಡ ರೋಗ ಉಲ್ಬಣವಾಗಲು ಕೂಡ ಕಾರಣ ಎಂದು ಹೇಳಲಾಗುತ್ತಿದೆ.

ಹಾಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪಾಸಿಟಿವ್ ಬಂದ ವ್ಯಕ್ತಿಗೆ ಏಳು ದಿನ ಚಿಕಿತ್ಸೆ ಕೊಟ್ಟಿರುತ್ತಾರೆ. ಮತ್ತೆರಡು ದಿನ ಪರೀಕ್ಷೆ ಮಾಡಿ ಕಳುಹಿಸಿದರೆ ಏನಾಗುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Facebook Comments