ವಿಧಾನಸೌಧ, ವಿಕಾಸಸೌಧಗಳಿಗೆ ಲಗ್ಗೆಯಿಟ್ಟ ಕಿಲ್ಲರ್ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9- ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಅಬ್ಬರ ಜೋರಾಗಿದೆ. ಜನರನ್ನು ಬೆಂಬಿಡದೇ ಕಾಡುತ್ತಿರುವ ಈ ವೈರಸ್ ಇದೀಗ ಸರ್ಕಾರಿ ಕಚೇರಿಗಳಿಗೂ ಲಗ್ಗೆಯಿಟ್ಟಿದೆ. ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ವಿಶ್ವೇಶ್ವರಯ್ಯ ಟವರ್ ಸೇರಿದಂತೆ ಹಲವೆಡೆ ಕಾಲಿಟ್ಟಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕಲ್ಯಾಣಮಂಟಪ, ಮಾಲ್, ಚಿತ್ರಮಂದಿರ, ಪಬ್ ಸೇರಿದಂತೆ ಬಹುತೇಕ ಖಾಸಗಿ ವಲಯವನ್ನು ತಾತ್ಕಾಲಿಕ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರ, ನಿತ್ಯ ನೂರಾರು ಜನರು ಬಂದು ಹೋಗುವ ಸರ್ಕಾರಿ ಕಚೇರಿಗಳ ಬಗ್ಗೆ ಗಮನ ಹರಿಸದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ಅಧಿಕಾರಿಗಳು ನೌಕರರು ಕಾರ್ಯನಿರ್ವಹಿಸುವ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ, ವಿಕಾಸಸೌಧ, ಎಂ.ಎಸ್. ಬಿಲ್ಡಿಂಗ್ ಸೇರಿದಂತೆ ಪ್ರಮುಖ ಕಚೇರಿಗಳು, ನ್ಯಾಯಾಲಯಗಳು, ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳು, ತಾಲೂಕು ಕಚೇರಿಗಳು, ಮಹಾನಗರ ಪಾಲಿಕೆಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

ಕಚೇರಿಗಳಿಗೆ ನಿತ್ಯ ನೂರಾರು ಮಂದಿ ಸಾರ್ವಜನಿಕರು ಬಂದು ಹೋಗುತ್ತಾರೆ. ವಾಸ್ತವವಾಗಿ ಈ ಕಚೇರಿಗಳು ಸೋಂಕು ಹರಡಬಹುದಾದ ಸ್ಥಳಗಳು. ಆದರೆ, ಸರ್ಕಾರಿ ಈ ಕಚೇರಿಗಳ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಇದೀಗ ಸರ್ಕಾರಿ ಉದ್ಯೋಗಿಗಳು ನೌಕರರು ಆತಂಕದಿಂದಲೇ ಕೆಲಸ ನಿರ್ವಹಿಸುವಂತಾಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರದ ಎಲ್ಲ ಕಚೇರಿಗಳಿಗೆ ರಜೆ ನೀಡಿದರೆ ಆಡಳಿತ ವ್ಯವಸ್ಥೆಯೇ ಸ್ಥಗಿತಗೊಳ್ಳುತ್ತದೆ. ಹೀಗಾಗಿ ಆಡಳಿತ ವ್ಯವಸ್ಥೆ ಸುಗಮವಾಗಿ ನಡೆಯಲು ಅಗತ್ಯವಿರುವ ಕಚೇರಿಗಳಲ್ಲಿ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೆಲಸಕಾರ್ಯ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಬೇಕು.

ಆದರೆ, ಸಾರ್ವಜನಿಕರು ನಿತ್ಯ ಭೇಟಿ ನೀಡುವ ಕಚೇರಿಗಳು ಕೆಲ ದಿನ ಮುಚ್ಚಿದರೂ ಆಡಳಿತದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಇಂತಹ ಕಚೇರಿಗಳನ್ನು ಗುರುತಿಸಿ ಅವುಗಳನ್ನು ಕೂಡಲೇ ಮುಚ್ಚಿಸಬೇಕು ಎಂಬುದು ನೌಕರರ ಅಭಿಪ್ರಾಯವಾಗಿದೆ.

ನಮಗೆ ರಜೆ ಘೋಷಿಸಿ ನಾವು ಐಟಿ-ಬಿಟಿ ಕಂಪನಿಗಳ ಮಾದರಿಯಲ್ಲಿ ಮನೆಯಿಂದ ಕೆಲಸ ಮಾಡುತ್ತೇವೆ ಎಂದು ಹೇಳಲು ಆಗುವುದಿಲ್ಲ. ಅದು ಸಾಧ್ಯವೂ ಆಗುವುದಿಲ್ಲ. ಆದರೆ, ಸರ್ಕಾರಿ ಕಚೇರಿಗಳಲ್ಲಿ ಕನಿಷ್ಠ ಮಟ್ಟದ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು.

ಸರ್ಕಾರಿ ನೌಕರರು ಸಾರ್ವಜನಿಕರಿಗೆ ರಸ್ತೆ ಮೂಲಕ ಮನೆಯಿಂದ ಕಚೇರಿಗೆ ಬಂದು ಹೋಗುತ್ತಾರೆ. ಉನ್ನತ ಮಟ್ಟದ ಅಧಿಕಾರಿಗಳು, ನೌಕರರು ಸರ್ಕಾರಿ ಕಾರ್ಯಗಳ ನಿಮಿತ್ತ ಹಾಗೂ ಖಾಸಗಿ ಕಾರ್ಯಗಳ ನಿಮಿತ್ತವೂ ಹೊರರಾಜ್ಯ, ವಿದೇಶಗಳಿಗೂ ಹೋಗಿಬರುತ್ತಾರೆ. ಹೀಗಿರುವಾಗ ಸರ್ಕಾರಿ ಕಚೇರಿಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ.

ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಸರ್ಕಾರ, ಇದನ್ನು ಕೇವಲ ಖಾಸಗಿ ವಲಯಕ್ಕೆ ಸೀಮಿತಗೊಳಿಸಿದರೆ ಸಾರ್ವಜನಿಕ ವಲಯದಲ್ಲಿ ಆತಂಕ ಕಡಿಮೆಯಾಗುವುದಿಲ್ಲ. ಸರ್ಕಾರಿ ವಲಯದಲ್ಲೂ ಹೆಚ್ಚು ಕ್ರಮ ವಹಿಸಬೇಕಾಗಿದೆ ಎನ್ನುತ್ತಾರೆ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿರುವ ನೌಕರರೊಬ್ಬರು.

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ ಎಂಬುದು ಮಾಧ್ಯಮಗಳಿಂದ ತಿಳಿದು ಬಂದಿದೆ. ಹೀಗಾಗಿ ಸರ್ಕಾರಿ ನೌಕರರು ಜಾಗ್ರತೆ ವಹಿಸುವಂತೆ ತಿಳಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಯವರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ. ತಮಿಳುನಾಡು ಹಾಗೂ ದೆಹಲಿ ಮಾದರಿಯಲ್ಲಿ ಶಿಫ್ಟಿಂಗ್ ರೀತಿ ಕೆಲಸ ಮಾಡಬೇಕೆಂದು ಮನವಿ ಮಾಡಲಾಗಿದೆ.

ಇದರಿಂದ ಅನಾವಶ್ಯಕವಾಗಿ ನಾಗರಿಕರು ಕಚೇರಿಗೆ ಬರುವುದು ತಪ್ಪುತ್ತದೆ. ಇದರಿಂದ ಸೋಂಕು ನಿಯಂತ್ರಣಕ್ಕೆ ಬರಬಹುದು ಎಂದು ಹೇಳಿದ್ದೇವೆ. ಸಕಾರತ್ಮಕವಾಗಿ ಪರಿಶೀಲನೆ ಮಾಡುತ್ತೇವೆ ಎಂದು ಸಿಎಸ್ ಹೇಳಿದ್ದಾರೆ. ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಮುಖರೊಬ್ಬರು ತಿಳಿಸಿದ್ದಾರೆ.

ಸ್ಯಾನಿಟೈಸರ್ ಮತ್ತು ಮಾಸ್ಕ್ ಕಡ್ಡಾಯವಾಗಿ ನೌಕರರು ಹಾಕಬೇಕು ಎಂದ ಅವರು, ನಿರಂತರ ಸಭೆಗಳನ್ನು ಮಾಡದಂತೆ ಮನವಿ ಮಾಡಿದ್ದೇವೆ. ಕೊರೊನಾಗೆ ಸಂಬಂಧಿಸಿದಂತೆ ಅತಿ ತುರ್ತು ಸಭೆಗಳನ್ನು ಮಾಡಲಿ. ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದರು.

Facebook Comments