ಕಿಲ್ಲರ್ ಕರೋನಾ ವೈರಸ್‌ಗೆ 110ಕ್ಕೂ ಹೆಚ್ಚು ಸಾವು, 4,500 ಮಂದಿಗೆ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ವುಹಾನ್, ಜ.28-ವಿಶ್ವಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿರುವ ಕರೋನಾ ವೈರಸ್ ಡೆಡ್ಲಿ ವೈರಸ್ ದಾಳಿ ಮುಂದುವರೆದಿದ್ದು, ಈ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 110ಕ್ಕೆ ಏರಿದೆ. ಅಲ್ಲದೆ ಮತ್ತೆ 1,500 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು,ಸಾವಿನ ಸಂಖ್ಯೆ ಮತ್ತಷ್ಟು ಏರುವ ಆತಂಕವಿದೆ. ವೇಗವಾಗಿ ವ್ಯಾಪಿಸುತ್ತಿರುವ ಈ ರೋಗಕ್ಕೆ ಕಡಿವಾಣ ಹಾಕಲು ಚೀನಾ ಸರ್ಕಾರ ತುರ್ತು ಕ್ರಮಗಳ ಹೊರತಾಗಿಯೂ ವೈರಸ್‍ನ ಕಬಂಧ ಬಾಹುಗಳು ವಿಸ್ತರಿಸುತ್ತಿವೆ.

ಹೊಸದಾಗಿ ಸೋಂಕು ಕಾಣಿಸಿಕೊಂಡವರಲ್ಲಿ 461 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿರುವ ಚೀನಾ ಸರ್ಕಾರ, ಪ್ರಧಾನಿ ಲಿ ಕೆಖಿಯಾಂಗ್ ನೇತೃತ್ವದಲ್ಲಿ ಉನ್ನತ ಸಮಿತಿಯೊಂದನ್ನು ರಚಿಸಿದೆ. ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ವುಹಾನ್ ನಗರಕ್ಕೆ ಭೇಟಿ ನೀಡಿರುವ ಪ್ರಧಾನಿ ಕೆಖಿಯಾಂಗ್ ಅವಲೋಕನ ನಡೆಸಿದ್ದಾರೆ. ಕೊರೋನಾ ವೈರಸ್ ಸೋಂಕು ಭಾರತಕ್ಕೂ ಕಾಲಿಡುವ ಭೀತಿ ಹಿನ್ನೆಲಯಲ್ಲಿ ದೇಶದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಬೆಂಗಳೂರು ಸೇರಿ ದೇಶದ ವಿವಿಧೆಡೆ ಚೀನಾದಿಂದ ಬಂದ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಬಿಹಾರ, ಮುಂಬೈನಲ್ಲಿ ತಲಾ ಒಬ್ಬರು ಮತ್ತು ಹೈದರಾಬಾದ್ ನಲ್ಲಿ ಹೊಸದಾಗಿ ನಾಲ್ವರು ರೋಗಿಗಳಿಗೆ ಸೋಂಕು ತಗುಲಿರುವ ಅನುಮಾನ ವ್ಯಕ್ತವಾಗಿದೆ.  ಈ ಹಿನ್ನೆಲೆಯಲ್ಲಿ ಅವರನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಕೇರಳದಲ್ಲಿ ಇತ್ತೀಚೆಗೆ ಚೀನಾದಿಂದ ಮರಳಿದ 436 ಮಂದಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪುಣೆಗೆ ಕಳುಹಿಸಲಾಗಿದ್ದು, ಸೋಂಕು ಪತ್ತೆಯಾಗಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ವಿವಿಧ ದೇಶಗಳಲ್ಲೂ ಸೋಂಕು: ಚೀನಾದ ವುಹಾನ್ ನಗರಿಯಲ್ಲಿ ಮೊದಲು ಕಾಣಿಸಿಕೊಂಡ ಕರೋನಾ ಸೋಂಕು ವಿಶ್ವದ ಅನೇಕ ದೇಶಗಳಿಗೂ ಹಬ್ಬಿದ್ದು , ಆತಂಕ ಸೃಷ್ಟಿಸಿದೆ.
ತೈವಾನ್‍ನಲ್ಲಿ 7 ಮಂದಿ, ಜಪಾನ್ 3 ಮಂದಿ, ದಕ್ಷಿಣ ಕೊರಿಯಾ 3 , ಅಮೆರಿಕಾ 3, ವಿಯೆಟ್ನಾಂ 3, ಮಲೇಷಿಯಾ3, ಸಿಂಗಾಪೂರ್ 4, ಆಸ್ಟ್ರೇಲಿಯಾ 4, ಫ್ರಾನ್ಸ್ 3, ಶ್ರೀಲಂಕಾ 1 ಮತ್ತು ನೇಪಾಳದಲ್ಲಿ ಇಬ್ಬರಿಗೆ ಈ ಸೋಂಕು ಕಾಣಿಸಿಕೊಂಡಿದ್ದು , ಇತರ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.

Facebook Comments