ಕೊರೊನಾ ಚಿಕಿತ್ಸೆ ಪಡೆದರೆ ಮುಂದೆ ಅಡ್ಡ ಪರಿಣಾಮಗಳಾಗಲಿವೆಯೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.20- ಕೋವಿಡ್-19 ಸೋಂಕಿತರ ದೂರ ಗಾಮಿ ಆರೋಗ್ಯದ ದೃಷ್ಟಿಯಿಂದ ನೂತನ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಕೋವಿಡ್ ಸೋಂಕಿನಿಂದ ಗುಣಮುಖ ಹೊಂದಿದವರಲ್ಲಿ ಉಂಟಾಗಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಒಂದು ವಿಶೇಷ ತಜ್ಞ ವೈದ್ಯರ ಸಮಿತಿ ರಚಿಸಲಾಗುವುದು.

ಆ ಸಮಿತಿಯ ಅಧ್ಯಯನದ ಆಧಾರದ ಮೇರೆಗೆ ಆರೋಗ್ಯದ ಹಿತದೃಷ್ಟಿಯಿಂದ ಬೇರೆಯ ಚಿಕಿತ್ಸಾ ಪದ್ಧತಿಯನ್ನು ಅನುಸರಿಸುವುದಾಗಿ ಹೇಳಿದ್ದಾರೆ. ಸಚಿವರ ಹೇಳಿಕೆ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಕೊರೊನಾ ಬಂದ ನಂತರ ಜೀವ ಉಳಿದರೆ ಸಾಕು ಎಂಬ ದುಗುಡವನ್ನು ಜನ ಅನುಭವಿಸುತ್ತಿದ್ದರು. ಹಾಗೂ ಹೀಗೂ ಚಿಕಿತ್ಸೆ ಪಡೆದು ರಾಜ್ಯದಲ್ಲಿ ಸುಮಾರು ನಾಲ್ಕು ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಆದರೆ ಅವರಲ್ಲಿ ದೂರಗಾಮಿಯಾಗಿ ಅಡ್ಡ ಪರಿಣಾಮಗಳಾಗುತ್ತವೆಯೇ ಎಂಬ ಅನುಮಾನ ಹುಟ್ಟಿದೆ.

ಸಚಿವರು ತಮ್ಮ ಟ್ವಿಟ್‍ನಲ್ಲಿ ದೂರಗಾಮಿ ಆರೋಗ್ಯದ ದೃಷ್ಟಿಯಿಂದ ನೂತನ ಚಿಕಿತ್ಸಾ ಪದ್ಧತಿ ಅಳವಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿದೆ. ಲಘು ಮತ್ತು ತೀವ್ರ ರೋಗಲಕ್ಷಣ ಹೊಂದಿದ್ದ ಮತ್ತು ವಿಶೇಷವಾಗಿ ಇತರೆ ಸಹ ಅಸ್ವಸ್ಥತೆಗಳನ್ನು ಹೊಂದಿದ್ದ ಪ್ರಕರಣಗಳ ಬಗ್ಗೆಯೂ ಅಧ್ಯಯನ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

Facebook Comments