ಕಿಲ್ಲರ್ ಕೊರೊನಾ ಬಗ್ಗೆ ಮೈಮರೆಯದಿರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ನಮಗೆ ರೋಗ-ನಿರೋಧಕ ಶಕ್ತಿ ಹೆಚ್ಚಿದೆ. ಕೊರೊನಾ ಮಹಾಮಾರಿ ನಮಗೇನೂ ಮಾಡದು ಎಂಬ ಉದಾಸೀನ ಬೇಡ. ನಿರ್ಲಕ್ಷ್ಯ ತೋರಿದರೆ ಜೀವಕ್ಕೆ ಅಪಾಯ ಗ್ಯಾರಂಟಿ. ಕೊರೊನಾ ಮಹಾಮಾರಿಗೆ ಬಲಿಯಾಗುತ್ತಿರುವವರು ಹಿರಿಯ ನಾಗರಿಕರು. ವಯಸ್ಕರಾದ ನಮಗೆ ಸೋಂಕು ತಗುಲುತ್ತಿಲ್ಲ ಎಂಬ ಉದಾಸೀನ ತೋರಿ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಹೀಗಾಗಿ ಯಾವುದೇ ವಯೋಮಾನದವರಾಗಲಿ ಕೊರೊನಾ ಮಹಾಮಾರಿ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಮರೆಯಬಾರದು.  ಕೊರೊನಾ ಸೋಂಕಿಗೆ ಮದ್ದು ಕಂಡುಹಿಡಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ಕೊರೊನಾ ಜತೆಗೆ ಬದುಕಬೇಕು ಎಂಬ ಉದ್ದೇಶದಿಂದ ಲಾಕ್‍ಡೌನ್ ತೆರವು ಮಾಡಿ ಸಾರ್ವಜನಿಕರ ಓಡಾಟಕ್ಕೆ ಮುಕ್ತ ಅವಕಾಶ ನೀಡಿದೆ.

ಸರ್ಕಾರದ ಈ ನಿರ್ಧಾರದಿಂದ ಇಂದಿನ ಯುವ ಪೀಳಿಗೆ ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ತೋರುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಮರೆತು ಸ್ನೇಹಿತರು, ಸಂಬಂಧಿಕರೊಂದಿಗೆ ಗುಂಪುಗೂಡಿ ಮೋಜು-ಮಸ್ತಿಯಲ್ಲಿ ನಿರತರಾಗಿದ್ದಾರೆ.

ಲಾಕ್‍ಡೌನ್ ತೆರವಿನ ನಂತರ ನೂರಾರು ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ರಾತ್ರಿ ನಿದ್ರೆಗೆ ಜಾರಿದವರು ಬೆಳಗ್ಗೆ ಏಳುವ ಮುನ್ನವೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಗೇನೂ ಕಡಿಮೆ ಇಲ್ಲ.

ಆದರೆ, ಇದಾವುದರ ಪರಿವೇ ಇಲ್ಲದ ಯುವ ಸಮೂಹ ಸೋಂಕಿನ ಬಗ್ಗೆ ಗಂಭೀರ ಚಿಂತನೆ ನಡೆಸುವ ಆವಶ್ಯಕತೆ ಇದೆ.  ಇತ್ತೀಚೆಗೆ ಯಾವುದೇ ರೋಗ ಲಕ್ಷಣಗಳಿಲ್ಲದ 35ರ ಹರೆಯದ ಯುವಕನೊಬ್ಬ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ.  ಇನ್ನಿತರ ಹಲವಾರು ವಯಸ್ಕರು ಸೋಂಕು ಲಕ್ಷಣವಿಲ್ಲದಿದ್ದರೂ ಸಾವನ್ನಪ್ಪುತ್ತಿರುವುದು ಹೆಚ್ಚಾಗುತ್ತಲೇ ಇದೆ.

ಆರೋಗ್ಯವಂತರಾಗಿ ಕಾಣಿಸಿಕೊಳ್ಳುತ್ತಿರುವ ಯುವ ಜನಾಂಗದಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ರೋಗ ಲಕ್ಷಣ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಯುವ ಸಮುದಾಯ ಕೊರೊನಾ ತಪಾಸಣೆ ಮಾಡಿಸಿಕೊಳ್ಳದೆ ಬೇಕಾಬಿಟ್ಟಿ ಕೆಲಸ-ಕಾರ್ಯದಲ್ಲಿ ನಿರತರಾಗಿದ್ದಾರೆ.

ದೇಹಸ್ವಾಸ್ಥ್ಯ ಕಾಪಾಡಿಕೊಳ್ಳುವುದರ ಜತೆಗೆ ಕಾಲ ಕಾಲಕ್ಕೆ ಕೊರೊನಾ ತಪಾಸಣೆ ನಡೆಸಿಕೊಂಡು ಸೋಂಕು ಕಾಣಿಸಿಕೊಂಡಿಲ್ಲ ಎಂದು ಖಾತರಿ ಪಡಿಸಿಕೊಳ್ಳುವುದರ ಜತೆಗೆ ಸೋಂಕು ತಗುಲಿದ್ದರೆ ಸೂಕ್ತ ಚಿಕಿತ್ಸೆ ಪಡೆದು ತಮ್ಮ ಅಮೂಲ್ಯವಾದ ಜೀವವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ.

Facebook Comments