ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 86,508 ಹೊಸ ಕೊರೋನಾ ಕೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.24-ಡೆಡ್ಲಿ ಕೋವಿಡ್-19 ವೈರಸ್ ಹಾವಳಿಯ ಏರಿಳಿತದ ಆಟದ ನಡುವೆಯೂ ಸತತ ಆರನೇ ದಿನ ಚೇತರಿಕೆ ಪ್ರಮಾಣದಲ್ಲಿ ಹೆಚ್ಚಳ ಮುಂದುವರಿದಿದೆ. ಮೊನ್ನೆ ಸೋಂಕು ಪ್ರಕರಣದಲ್ಲಿ ಇಳಿಕೆ ಕಂಡ ಬೆನ್ನಲ್ಲೇ ಪಾಸಿಟಿವ್ ಕೇಸ್‍ನಲ್ಲಿ ತುಸು ಏರಿಕೆಯಾಗಿದೆ. ಒಂದೇ ದಿನ ಮತ್ತೆ 86,508 (ಮೊನ್ನೆ 83,347) ಮಂದಿಗೆ ಸೋಂಕು ತಗಲಿದ್ದು, ಒಟ್ಟು ರೋಗಿಗಳ ಸಂಖ್ಯೆ 58 ಲಕ್ಷ ಸನಿಹದಲ್ಲಿದೆ.

ಇದೇ ವೇಳೆ ಸಾವಿನ ಪ್ರಮಾಣದಲ್ಲಿಯೂ ಅಲ್ಪ ಏರಿಕೆ ಗೋಚರಿಸಿದೆ. ಒಂದೇ ದಿನ 1,129 (ಮೊನ್ನೆ 1,085) ರೋಗಿಗಳನ್ನು ಕೊರೊನಾ ಮಹಾಮಾರಿ ಬಲಿ ತೆಗೆದುಕೊಂಡಿದೆ. ಸತತ 20ನೇ ದಿನ 1,000ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 91,000 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಎರಡು ವಾರಗಳ ಬಳಿಕ ಸೋಂಕಿತರ ಸಂಖ್ಯೆ ಸೋಮವಾರ 75,809ಕ್ಕೆ ಇಳಿದಿತ್ತು. ನಿನ್ನೆ ಮತ್ತೆ 86,508 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದು ಒಟ್ಟು ರೋಗಿಗಳ ಸಂಖ್ಯೆ 57,32,518ಕ್ಕೇರಿದ್ದು, ನಾಳೆ ವೇಳೆಗೆ 58 ಲಕ್ಷ ದಾಟಲಿದೆ.  ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಇನ್ನೆರಡು ದಿನಗಳಲ್ಲಿ 60 ಲಕ್ಷ ಮೀರಲಿದೆ.

ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.81.55ರಷ್ಟು ವೃದ್ದಿ ಕಂಡು ಬಂದಿದ್ದು, ಈವರೆಗೆ ದೇಶದಲ್ಲಿ ಸುಮಾರು 6.74 ಕೋಟಿ ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡು ಬಂದಿದ್ದೂ, ಮತ್ತೊಂದೆಡೆ 9.66 ಲಕ್ಷ ಸಕ್ರಿಯ ಕೇಸ್‍ಗಳೊಂದಿಗೆ ಪಾಸಿಟಿವ್ ಪ್ರಕರಣಗಳಲ್ಲಿ ಏರಿಳಿತ ಮುಂದುವರಿದಿದೆ.

ಏತನ್ಮಧ್ಯೆ, 46.74 ಲಕ್ಷ ಮಂದಿ ಹೆಮ್ಮಾರಿಯ ಬಿಗಿ ಹಿಡಿತದಿಂದ ಪಾರಾಗಿದ್ದಾರೆ.  ದೇಶದಲ್ಲಿ ಈಗ 9,66,382 ಆಕ್ಟಿವ್ ಕೇಸ್‍ಗಳಿವೆ. 46,74,987 ಮಂದಿ ಚೇತರಿಸಿಕೊಂಡಿದ್ದು, ಗುಣಮುಖ ಪ್ರಕರಣ ಶೇ.81.55 ಕ್ಕೇರಿದ್ದು, ಮರಣ ಪ್ರಮಾಣ ಶೇ.1.59ಕೆ ಇಳಿದಿದೆ. ಸಕ್ರಿಯ ಪ್ರಕರಣಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ನಾಲ್ಕು ಪಟ್ಟುಗಳಿಗಿಂತಲೂ ಅಧಿಕ ಹೆಚ್ಚಳ ಕಂಡು ಬಂದಿರುವುದು ಸಮಾಧಾನಕರ ಸಂಗತಿ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆÉ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ದೇಶದಾದ್ಯಂತ ನಿನ್ನೆ ಒಂದೇ ದಿನ 11.56 ಲಕ್ಷಕ್ಕೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 6.74 ಕೋಟಿಗೂ ಅಧಿಕ ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments