ವಿಶ್ವದಾದ್ಯಂತ 10 ಲಕ್ಷ ಸನಿಹದಲ್ಲಿ ಕೊರೊನಾ ಸಾವಿನ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್, ಸೆ.24-ಕೆಲವು ದೇಶಗಳಲ್ಲಿ ಕೊರೊನಾ ವೈರಸ್ ದಾಳಿಯ ಎರಡನೇ ಅಲೆಯ ಆತಂಕದ ನಡುವೆಯೇ ವಿಶ್ವಾದ್ಯಂತ ಡೆಡ್ಲಿ ಕೋವಿಡ್-19 ವೈರಸ್ ಪ್ರಹಾರ ಮುಂದುವರಿದಿದ್ದು, ಮೃತರ ಸಂಖ್ಯೆ 10 ಲಕ್ಷ ಸನಿಹದಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ. ಲೋಕಕಂಟಕವಾಗಿ ಪರಿಣಮಿಸಿರುವ ಪೆಡಂಭೂತದ ಹಾವಳಿಯಿಂದ ಪ್ರತಿ ನಿತ್ಯ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಲೇ ಇವೆ.

ಜಗತ್ತಿನಾದ್ಯಂತ ರೋಗಪೀಡಿತರ ಸಂಖ್ಯೆ 3.21 ಕೋಟಿ ಮತ್ತು ಒಟ್ಟು ಸಾವಿನ ಸಂಖ್ಯೆ 9.82 ಲಕ್ಷ ದಾಟಿದೆ. ಇದರ ನಡುವೆಯೂ ವಿಶ್ವದಲ್ಲಿ ಈವರೆಗೆ 2.36 ಕೋಟಿಗೂ ಅಧಿಕ ರೋಗಿಗಳು ಗುಣಮುಖರಾಗಿರುವುದು ತುಸು ಸಮಾಧಾನಕರ ಸಂಗತಿಯಾಗಿದೆ. ಆದರೆ ಇನ್ನೂ 74.36 ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಿರುವುದು ಆತಂಕದ ಸಂಗತಿಯಾಗಿದೆ.

ವಿಶ್ವವ್ಯಾಪಿ ನಿನ್ನೆ ಮಧ್ಯರಾತ್ರಿವರೆಗೆ 9,82,020 ಮಂದಿ ಸಾವಿಗೀಡಾಗಿದ್ದು, 3,21,01,060 ಸೋಂಕು ಪ್ರಕರಣಗಳು ವರದಿಯಾಗಿದೆ.  ಸಕ್ರಿಯ ಪ್ರಕರಣಗಳ ಸಂಖ್ಯೆ 74,36,998 ದಾಟಿದೆ. ಅಲ್ಲದೇ ಇನ್ನೂ 62,350ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ.

ನಾಳೆ ವೇಳೆಗೆ ಸಾವಿನ ಸಂಖ್ಯೆ 10 ಲಕ್ಷ ಮತ್ತು ಸಾಂಕ್ರಾಮಿಕ ರೋಗಿಗಳ ಪ್ರಮಾಣ 3.25 ಕೋಟಿ ದಾಟುವ ಆತಂಕವಿದೆ. ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ. ವಿಶ್ವದಲ್ಲಿ ಈವರೆಗೆ 2,36,82,042 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಗುಣಮುಖರಾಗಿದ್ದಾರೆ.

ಅಮೆರಿಕ, ಭಾರತ, ಬ್ರೆಜಿಲ್, ರಷ್ಯಾ, ಮತ್ತು ಕೊಲಂಬಿಯಾ- ಕೊರೊನಾ ಕೇಸ್‍ಗಳಲ್ಲಿ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ ಇದರ ನಡುವೆಯೂ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಹೆಮ್ಮಾರಿಯ ಪ್ರಕೋಪ ಕ್ಷೀಣಿಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ ಆದರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ಇಸ್ರೇಲ್ ಮೊದಲಾದ ದೇಶಗಳಲ್ಲಿ ವೈರಸ್ ದಾಳಿ ಮತ್ತೆ ಹೆಚ್ಚಾಗಿದ್ದು, ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ.

Facebook Comments