ಭಾರತದ ವಿವಿಧೆಡೆ ಶಂಕಿತ ಕರೋನಾ ವೈರಸ್ ಸೋಂಕು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ – ವಿಶ್ವಾದ್ಯಂತ ಭಾರೀ ಆತಂಕ ಸೃಷ್ಟಿಸಿ ಸಾವು-ನೋವಿಗೆ ಕಾರಣವಾಗಿರುವ ಮಾರಕ ಕೊರೋನಾ ವೈರಸ್ ಸೋಂಕಿನ ಶಂಕಿತ ಹೊಸ ಪ್ರಕರಣಗಳು ಭಾರತದಲ್ಲಿ ವಿವಿಧೆಡೆ ಪತ್ತೆಯಾಗಿವೆ. ದೆಹಲಿ, ಮಹಾರಾಷ್ಟ್ರ, ಪಂಜಾಬ್ ಮತ್ತು ಮಧ್ಯಪ್ರದೇಶದಲ್ಲಿ ಡೆಡ್ಲಿ ವೈರಸ್ ಗುಣಲಕ್ಷಣದ ಶಂಕಿತ ಸೋಂಕುಗಳು ಕೆಲವರಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಇವರೆಲ್ಲರನ್ನು ವಿವಿಧ ಆಸ್ಪತ್ರೆಗಳ ಪ್ರತ್ಯೇಕ ಕೊಠಡಿಗಳಲ್ಲಿರಿಸಿ ತೀವ್ರ ನಿಗಾ ವಹಿಸಲಾಗಿದೆ. ರಾಜಧಾನಿ ದೆಹಲಿಯ ಚೀನಾದಿಂದ ಭಾರತಕ್ಕೆ ಬಂದಿದ್ದ ಮೂವರು ವ್ಯಕ್ತಿಗಳಲ್ಲಿ ಕರೋನಾ ವೈರಸ್ ಮಾದರಿ ಸೋಂಕಿನ ಚಿಹ್ನೆಗಳು ಕಂಡು ಬಂದಿದ್ದು , ಒಬ್ಬರನ್ನು ರಾಮನ್ ಮನೋಹರ್ ಲೋಹಿಯಾ ಆಸ್ಪತ್ರೆಯ ಪ್ರತ್ಯೇಕ ಕೊಠಡಿಗಳಲ್ಲಿರಿಸಲಾಗಿದೆ.ನಿನ್ನೆ ರಾತ್ರಿ ಪುಣೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಇದೇ ರೀತಿಯ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಈವರೆಗೆ ಆರು ಜನರಿಗೆ ಶಂಕಿತ ಸೋಂಕು ತಗುಲಿರುವ ಭೀತಿ ಎದುರಾಗಿದೆ.

ಇವರೆಲ್ಲರನ್ನು ವಿವಿಧ ಆಸ್ಪತ್ರೆಗಳಲ್ಲಿ ಹೈ ಸಲ್ಯೂಶನ್ ವಾರ್ಡ್‍ಗಳಲ್ಲಿ ಇರಿಸಿ ತೀವ್ರ ನಿಗಾ ವಹಿಸಲಾಗಿದೆ. ಪಂಜಾಬ್ ಮತ್ತು ಹರಿಯಾಣ ಪ್ರಾಂತ್ಯ ಹಾಗೂ ಮಧ್ಯಪ್ರದೇಶದ ಉಜ್ಜೈನ್‍ನಲ್ಲಿ ಎರಡು ಪ್ರಕರಣಗಳು ಕಂಡು ಬಂದಿದ್ದು , ಉನ್ನತ ವೈದ್ಯಾಧಿಕಾರಿಗಳು ಪರಿಸ್ಥಿತಿ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.

ಈ ಮಧ್ಯೆ ವುಹಾನ್‍ನಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಏರ್ ಇಂಡಿಯಾದ 123 ಆಸನಗಳ ಜಂಬೋ ಜಟ್ ವಿಮಾನ ಸಜ್ಜಾಗಿದೆ. ಚೀನಾ ಪ್ರವಾಸವನ್ನು ಮುಂದಿನ ಆದೇಶದ ತನಕ ಮುಂದೂಡುವುದು ಒಳ್ಳೆಯದು ಎಂದು ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ.

Facebook Comments