ಕಂಟ್ರೋಲ್ ತಪ್ಪಿದ ಕೊರೋನಾ, ಸಾರ್ವಜನಿಕರೇ ಎಚ್ಚರ, ನಿಮ್ಮ ಆರೋಗ್ಯ ಕೈಯಲ್ಲೇ ಇದೆ..!
ಬೆಂಗಳೂರು, ಅ.13- ಸಾರ್ವಜನಿಕರೇ ಎಚ್ಚರ.. ಎಚ್ಚರ.. ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕರು ಮತ್ತಷ್ಟು ಜಾಗೃತರಾಗಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆ ಎದುರಾಗಿದೆ. ಕೊರೊನಾ ಸೋಂಕಿಗೆ ಈವರೆಗೂ ಯಾವುದೇ ನಿರ್ದಿಷ್ಟ ಔಷ ಲಭ್ಯವಾಗಿಲ್ಲ. ಈ ಕೊರೊನಾ ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.
ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸ್ಯಾನಿಟೈಜರ್ ಬಳಕೆ ಪದೇ ಪದೇ ಕೈತೊಳೆದು ನೀವು ಶುಚಿಯಾಗಿರುವುದರ ಜೊತೆಗೆ ಪರಿಸರವನ್ನು ಶುಚಿ ಯಾಗಿ ಇಟ್ಟುಕೊಳ್ಳುವ ಮೂಲಕ ಕೊರೊನಾವನ್ನು ನಿಯಂತ್ರಿಸಬೇಕಾಗಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಸಾವಿನ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ವಿಶೇಷವಾಗಿ ತುಮಕೂರು, ಚಿತ್ರದುರ್ಗ, ಕೊಡಗು ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ತೀವ್ರಗೊಳ್ಳುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಆರೋಗ್ಯ ಇಲಾಖೆ ಎಷ್ಟೇ ಕ್ರಮಗಳನ್ನು ಕೈಗೊಂಡರೂ ಕೂಡ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ಜಾಗೃತರಾಗದಿದ್ದರೆ ರೋಗ ಉಲ್ಭಣಗೊಂಡು ಮತ್ತಷ್ಟು ಜನ ಬಲಿಯಾಗುವುದರಲ್ಲಿ ಅನುಮಾನವಿಲ್ಲ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70 ಲಕ್ಷ ದಾಟಿದೆ. ರಾಜ್ಯದಲ್ಲಿ 8 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಮೀರಿದೆ. ರಾಜಧಾನಿ ಬೆಂಗಳೂರಿನಲ್ಲಿ 2.5 ಲಕ್ಷ ಜನರಿಗೆ ಸೋಂಕು ತಗುಲಿದೆ. ಗುಣಮುಖರಾಗುವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದ್ದು ಪ್ರತಿದಿನ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಆತಂಕವೂ ಕೂಡ ಹೆಚ್ಚಾಗಿದೆ.ಜನರು ಗುಂಪು ಸೇರುವುದು ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು ಎಲ್ಲಿಂದರಲ್ಲಿ ಹೇಗಿಂದರಾಗೆ ಇರುವುದಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳದಿದ್ದರೆ ಕೊರೊನಾ ಬಲಿ ತೆಗೆದುಕೊಳ್ಳುವ ಸಂಖ್ಯೆ ಕೂಡ ಹೆಚ್ಚಾಗಲಿದೆ.
ಈ ತಿಂಗಳಲ್ಲಿ ಹಬ್ಬ, ಜಾತ್ರೆ, ಶುಭ ಸಮಾರಂಭಗಳು ನಡೆಯುವುದು ಹೆಚ್ಚು ವಿಶೇಷವಾಗಿ ದಸರಾ, ಆಯುಧಪೂಜಾ, ಈದ್-ಮಿಲಾದ್, ವಾಲ್ಮೀಕಿ ಜಯಂತ್ರಿ ಅಂತಹ ವಿಶೇಷ ಹಬ್ಬಗಳ ಆಚರಣೆ ನಡೆಯಲಿದೆ. ಹಬ್ಬದ ಸಂದರ್ಭಗಳಲ್ಲಿ ಹೆಚ್ಚು ಸೇರದಂತೆ ಮನೆಗಳಿಗೆ ಸೀಮಿತಗೊಳಿಸಿಕೊಂಡು ಹಬ್ಬ ಆಚರಣೆ ಮಾಡಬೇಕು. ಕೊರೊನಾ ನಮಗೇನು ಮಾಡುವುದಿಲ್ಲ.
ಈವರೆಗೂ ನನಗೇನೂ ಆಗಿಲ್ಲ ಎಂಬ ನಿರ್ಲಕ್ಷ್ಯ ಧೋರಣೆಯಿಂದ ಬೇಕಾಬಿಟ್ಟಿ ವರ್ತಿಸಿದರೆ ಕೊರೊನಾದ ಕಬಂಧ ಬಾಹುಗಳಿಗೆ ಸಿಲುಕಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೊರೊನಾ ಜೊತೆಗೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಸರ್ಕಾರ ಶಾಲಾ- ಕಾಲೇಜುಗಳನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಆದರೆ ಮಾಸ್ಕ್ ಧರಿಸಿಕೊಳ್ಳಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿಕೊಳ್ಳುವಂತೆ ಹಲವು ಮಾರ್ಗಸೂಚಿಗಳನ್ನು ನೀಡಿದೆ. ಇದನ್ನು ನಾವು ಕಡ್ಡಾಯವಾಗಿ ಪಾಲಿಸಲೇ ಬೇಕಾಗಿದೆ.
ಮನೆಯಿರಲಿ, ಕಚೇರಿಯಿರಲಿ, ಹೋಟೆಲ್, ಶಾಪಿಂಗ್, ಮಾಲ್ ಎಲ್ಲೇ ಹೋದರೂ ಕೂಡ ಕನಿಷ್ಟ ಅಂತರವನ್ನು ನಾವು ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ನ್ನು ಧರಿಸಿಕೊಂಡಿರಬೇಕು.
ಇಷ್ಟು ಕನಿಷ್ಠ ಮಾರ್ಗಸೂಚಿಗಳನ್ನು ಪಾಲಿಸಿದರೆ ಕೊರೊನಾವನ್ನು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಬಹುದಾಗಿದೆ. ಈಗಾಗಲೇ ಕೊರೊನಾ ಅಟ್ಟಹಾಸ ಮೀರಿ ಮೆರೆಯುತ್ತಿದೆ. ಅದು ಮತ್ತಷ್ಟು ತೀವ್ರಗೊಳ್ಳುವುದನ್ನು ತಡೆಯಲು ಸಾರ್ವಜನಿಕರು ಎಚ್ಚರ ವಹಿಸಲೇಬೇಕಾಗಿದೆ.
ಕೇವಲ ಆರೋಗ್ಯ ಇಲಾಖೆ ಮಾಡುವ ಕೆಲಸವಲ್ಲ. ಸಾರ್ವಜನಿಕರು ಸ್ವಯಂ ಜಾಗೃತಿ ವಹಿಸಲೇಬೇಕು. ಈಗ ಕೊರೊನಾ ಶೇ. ಪ್ರಮಾಣ 17ರಷ್ಟಿದೆ. ಅದು 5ರಷ್ಟು ಇಳಿಕೆಯಾಗಬೇಕೆಂದರೆ ಆರೋಗ್ಯ ಇಲಾಖೆಯ ಜೊತೆ ಸಾರ್ವಜನಿಕರು ಕೈಜೋಡಿಸಬೇಕು.
ರಾಜಕೀಯ ಸಮಾರಂಭ ಸಾಮಾಜಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳು ಹಬ್ಬ ಹರಿದಿನಗಳು, ಜಾತ್ರೆ, ಸಮಾರಂಭಗಳು ಇನ್ನಿತರ ಯಾವುದೇ ಸಮಾರಂಭಗಳನ್ನು ಸದ್ಯಕ್ಕೆ ಮುಂದೂಡುವುದೇ ಒಳಿತು. ಆಚರಿಸಲೇಬೇಕಾದ ಅನಿವಾರ್ಯತೆ ಇದ್ದರೆ ಅದನ್ನು ಮನೆಗೆ ಸೀಮಿತಗೊಳಿಸಿಕೊಳ್ಳಬೇಕು. ಜನ ಸಂದಣಿ ಇರುವ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.