ಬೆಂಗಳೂರಿಗರೇ ಹುಷಾರ್..ಹುಷಾರ್.. ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.5- ಸಿಲಿಕಾಲ್ ಸಿಟಿ ನಾಗರೀಕರೆ ಎಚ್ಚರ… ಜೂನ್ ತಿಂಗಳಿನಲ್ಲಿ ನೀವು ಮೈ ಮರೆತರೆ ಕೊರೊನಾ ಮಹಾಮಾರಿಯನ್ನು ಮೈಮೇಲೆ ಎಳೆದುಕೊಳ್ಳುವುದು ಗ್ಯಾರಂಟಿ. ಲಾಕ್‍ಡೌನ್ ತೆರವುಗೊಳಿಸಿದ ನಂತರವೂ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ ಮನೆಯಿಂದ ಹೊರ ಬಾರದಿದ್ದರೆ ಸೋಂಕಿನಿಂದ ಬಚಾವ್ ಆಗಬಹುದು.

ಜೂನ್ ತಿಂಗಳಿನಲ್ಲಿ ನಗರದ 40 ಕಂಟೇನ್ಮೆಂಟ್ ಜೋನ್‍ಗಳಲ್ಲಿ ಕೊರೊನಾ ಆ್ಯಕ್ಟಿವ್ ಆಗಿದೆ. ಇದುವರೆಗೂ 148ಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದಾರೆ. 40 ಕಂಟೇನ್ಮೆಟ್ ಜೋನ್‍ಗಳಲ್ಲಿ ಪಾದರಾಯನಪುರ, ಹೊಂಗಸಂದ್ರ, ಮಲ್ಲೇಶ್ವರಂ, ಮಂಗಮ್ಮನಪಾಳ್ಯ ಸೇರಿದಂತೆ 8 ವಾರ್ಡ್‍ಗಳ ಕಂಟೇನೆಟ್ ಜೋನ್‍ಗಳ ದಿನಾಂಕವನ್ನು ವಿಸ್ತರಿಸಲಾಗಿದೆ.

ಇನ್ನುಳಿದ 32 ಜೋನ್‍ಗಳಲ್ಲೂ ಕೊರೊನಾ ಆ್ಯಕ್ಟಿವ್ ಆಗಿರುವುದರಿಂದ ಜೂ.29ರವರೆಗೂ ಕಂಟೇನ್ಮಟ್ ದಿನಗಳು ಮುಗಿಯುವ ಲಕ್ಷಣಗಳು ಇಲ್ಲ. ಹೊರ ರಾಜ್ಯ ಹಾಗೂ ದೇಶಗಳಿಂದ ಬರುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಅವರಲ್ಲಿ ಯಾರಿಗಾದರು ಸೋಂಕು ಕಾಣಿಸಿಕೊಂಡರೆ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ.

ಹೀಗಾಗಿ ನಗರದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಸೋಂಕಿನಿಂದ ಬಚಾವ್ ಆಗಬೇಕಾದರೆ ಮನೆಯಿಂದ ಹೊರ ಬಾರದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಾಗಿದೆ.

ಹೊರ ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಮನೆಗೆ ಹೋದ ಕೂಡಲೇ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಮೂಲಕ ಸೋಂಕು ತಗುಲದಂತೆ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಲಾಕ್‍ಡೌನ್ ಮುಗಿಯಿತು. ಜನ ಮತ್ತು ವಾಹನ ಸಂಚಾರ ಮಾಮೂಲಾಗಿದೆ. ಇಂತಹ ಸಮಯದಲ್ಲಿ ಹೊರ ಹೋದರೆ ಯಾವುದೇ ಅಪಾಯವಿಲ್ಲ ಎಂದು ಭಾವಿಸಿದರೆ ಅದು ಮಹಾಪ್ರಮಾದಕ್ಕೆ ಎಡೆಮಾಡಿಕೊಡುವುದರಲ್ಲಿ ಸಂಶಯವೇ ಇಲ್ಲ.

ಜೂನ್ ತಿಂಗಳಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಿದರೆ ಮಾತ್ರ ಸೋಂಕಿನಿಂದ ದೂರ ಉಳಿಯಬಹುದಾಗಿದೆ. ಹೀಗಾಗಿ ಸಿಲಿಕಾನ್ ಸಿಟಿಯ ನಾಗರೀಕರು ಅನಾವಶ್ಯಕವಾಗಿ ಹೊರ ಬಂದು ಕಾಲಹರಣ ಮಾಡುವುದರ ಜತೆಗೆ ಮಹಾಮಾರಿಯನ್ನು ಮೈ ಮೇಲೆ ಎಳೆದುಕೊಳ್ಳುವುದಕ್ಕಿಂತ ಕ್ಷೇಮವಾಗಿ ಮನೆಯಲ್ಲಿರುವುದೇ ಸೂಕ್ತ.

Facebook Comments