ವಿದೇಶದಿಂದ ಕರ್ನಾಟಕಕ್ಕೆ ಬಂದ 3000 ಮಂದಿಗೆ ಮನೆಯಲ್ಲೇ ಕರೋನ ಬಂಧನ, ಬೀಟ್ ಪೊಲೀಸರಿಂದ ನಿಗಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.20- ಈವರೆಗೆ ವಿಮಾನಗಳ ಮೂಲಕ ರಾಜ್ಯಕ್ಕೆ 1.2 ಲಕ್ಷ ಪ್ರಯಾಣಿಕರು ಆಗಮಿಸಿದ್ದು, ಕೊರೊನಾ ವೈರಸ್ ಶಂಕೆ ಹಿನ್ನೆಲೆಯಲ್ಲಿ ಸುಮಾರು 3 ಸಾವಿರ ಮಂದಿಗೆ ಮನೆಯಲ್ಲಿಟ್ಟು ತಪಾಸಣೆ ಮಾಡಲಾಗುತ್ತಿದ್ದು, ಇವರ ಬಗ್ಗೆ ನಿಗಾ ವಹಿಸಲು ಬೀಟ್ ಪೊಲೀಸರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.

ಕೋವಿಡ್-19 ಎರಡನೆ ಮತ್ತು ಮೂರನೆ ಹಂತ ತಲುಪಿದರೆ ಎದುರಿಸಬೇಕಾದ ಗಂಭೀರ ಪರಿಸ್ಥಿತಿಯ ಬಗ್ಗೆ ವೈದ್ಯರು ಮತ್ತು ನರ್ಸ್‍ಗಳಿಗೆ ಕೈಗೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದೇಶಗಳಿಂದ ಆಗಮಿಸಿದ ಸುಮಾರು 3 ಸಾವಿರ ಜನರನ್ನು ಕ್ವಾರೆಂಟೈನ್ ಮಾಡಲಾಗಿದೆ. ಅವರು ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ರೋಗ ಉಲ್ಬಣವಾಗುವ ಸಾಧ್ಯತೆ ಇರುತ್ತದೆ.

ಹಾಗಾಗಿ ಅವರ ಮೇಲೆ ನಿಗಾ ವಹಿಸಲು ಬೀಟ್ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಶೀತ, ಜ್ವರ, ಉಸಿರಾಟದ ಸಮಸ್ಯೆ ಇರುವವರನ್ನು ಗಮನದಲ್ಲಿಟ್ಟುಕೊಂಡು ಕ್ವಾರೆಂಟೈನ್ ಮಾಡಲಾಗಿದೆ. ಮನೆಯಲ್ಲೇ ಇದ್ದು ರೋಗ ಹರಡದಂತೆ ನೋಡಿಕೊಳ್ಳಬೇಕು. ಸ್ವಯಂ ನಿಯಂತ್ರಣದಿಂದ ಮಾತ್ರ ರೋಗ ಉಲ್ಬಣವಾಗದಂತೆ ನೋಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಸಿಂಗಾಪುರದಲ್ಲಿ ಸ್ವಯಂ ನಿಯಂತ್ರಣ, ಶುಚಿತ್ವ ಮುಂತಾದ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಂಡಿದ್ದರಿಂದ ರೋಗ ಹತ್ತಿರ ಸುಳಿಯದಂತೆ ನೋಡಿಕೊಳ್ಳಲಾಯಿತು. ಆದರೆ ಚೀನಾದಲ್ಲಿ ಪಬ್ಬು ಮತ್ತು ಬಾರ್‍ಗಳನ್ನು ತೆರೆದ ಪರಿಣಾಮ ಅಲ್ಲಿ ಜನ ಸೇರಿ ರೋಗ ಹರಡಲು ಕಾರಣವಾಯಿತು. ನಮ್ಮ ದೇಶದಲ್ಲಿ ಸಿಂಗಾಪುರ್ ಮಾದರಿಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಅಪಾರ್ಟ್‍ಮೆಂಟ್ ಮತ್ತು ಪ್ರತಿಷ್ಠಿತ ಬಡಾವಣೆಗೆ ಹೋಗಿ ಹೊರ ದೇಶದಿಂದ ಬಂದಿರುವ ಜನರ ಬಗ್ಗೆ ಮಾಹಿತಿ ಸಂಗ್ರಹಿಸಲ ಬೀಟ್ ಪೊಲೀಸರಿಗೆ ತಿಳಿಸಲಾಗಿದೆ. ಹೊರದೇಶದಿಂದ ಬಂದಿದ್ದರೆ ಅವರು ಮನೆ ಬಿಟ್ಟು ಹೊರಬರದಂತೆ ಸೂಚಿಸಲಾಗಿದೆ.

ಎಲ್ಲರೂ ಮಾಸ್ಕ್ ಬಳಸುವ ಅಗತ್ಯವೇನಿಲ್ಲ. ಕೊರೋನಾ ಬಂದಿರುವವರು, ಶೀತದಿಂದ ಬಳಲುತ್ತಿರುವವರು ಮಾಸ್ಕ್ ಬಳಕೆ ಮಾಡಿಕೊಂಡರೆ ಸಾಕು. ಅಕ್ಕಪಕ್ಕದ ಮನೆಯಲ್ಲಿ ರೋಗಿಗಳಿದ್ದಲ್ಲಿ ಹೊರಬರದಂತೆ ಸೂಚನೆ ನೀಡಲಾಗಿದೆ ಎಂದರು. ಮಾ.1ರೊಳಗೆ ಬೇರೆ ದೇಶದಿಂದ ಬಂದವರು ಸೇಫ್. ಒಂದರ ನಂತರ ಬಂದವರನ್ನು ಹೋಂ ಕ್ವಾರಂಟೈನ್ ಮಾಡಿರುವುದಲ್ಲದೇ ಅವರ ಜೊತೆ ಬಂದ ಸಹ ಪ್ರಯಾಣಿಕರ ಮೇಲೂ ಕೂಡ ನಿಗಾ ವಹಿಸಲಾಗಿದೆ ಎಂದು ಹೇಳಿದರು.

ಮೇಯರ್ ಗೌತಮ್ ಕುಮಾರ್ ಜೈನ್ ಮಾತನಾಡಿ, ವಿಮಾನದ ಮೂಲಕ ಬಂದವರನ್ನು ಮಾತ್ರ ನಾವು ಗಮನಿಸುತ್ತಿದ್ದೇವೆ. ಕೊಳೆಗೇರಿ ಪ್ರದೇಶಗಳಲ್ಲಿ ಹೆಚ್ಚು ಜÁಗೃತಿ ಮೂಡಿಸಲು ಅಗತ್ಯವಿದೆ. ವೈದ್ಯರ ಸೇವೆ ಸಮಾಜಕ್ಕೆ ಅತ್ಯಗತ್ಯವಾಗಿದೆ. ಎಲ್ಲರಲ್ಲೂ ಭಯದ ವಾತಾವರಣವಿದ್ದು ಅದನ್ನು ಹೋಗಲಾಡಿಸಬೇಕು. ಬಿಬಿಎಂಪಿಯಿಂದ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.ಬಿಬಿಎಂಪಿ ವಿಶೇಷ ಆಯುಕ್ತ ರವಿ ಸುರಪರ್, ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments