ಕಂಡ ಕಂಡಲ್ಲಿ ಶ್ರದ್ಧಾಂಜಲಿ ಫಲಕಗಳು, ಜೀವ-ಜೀವನದ ನಡುವೆ ಕೋವಿಡ್ ಸಂಘರ್ಷ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.20- ಕೊರೊನಾ ಸೋಂಕು ಹೆಚ್ಚಳದ ಜತೆಗೆ ಮರಣದ ಪ್ರಮಾಣಕೂಡ ಗಣನೀಯವಾಗಿ ಹೆಚ್ಚಿದ್ದು, ಜನಜೀವನ ಬೆಚ್ಚಿಬೀಳುವಂತಾಗಿದೆ. ನಿನ್ನೆ ಒಂದೇ ದಿನ ಇತ್ತೀಚಿನ ಎಲ್ಲಾ ದಾಖಲೆಗಳನ್ನು ಮೀರಿ ಹೆಚ್ಚು ಸಾವು ಸಂಭವಿಸಿವೆ. ರಾಜ್ಯದಲ್ಲಿ 146 ಮಂದಿ ಪ್ರಾಣ ಕಳೆದುಕೊಂಡಿದ್ದು, ಮೃತಪಟ್ಟವರ ಶೇಕಡವಾರು ಪ್ರಮಾಣ 0.92ರಷ್ಟಿದೆ. ಇದು ಇತ್ತೀಚಿನ ದಿನಗಳಲ್ಲೇ ಅತಿ ಹೆಚ್ಚು ಎಂದು ವರದಿಯಾಗಿರುವುದು ಗಮನಾರ್ಹ.

ಕಳೆದ ಒಂದು ವರ್ಷದಿಂದ ಕೊರೊನಾದಿಂದಾಗಿ ಬೆಂಗಳೂರಿನ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಉದ್ಯೋಗ ಸಿಗದೆ ಜನ ಒಪ್ಪತ್ತಿನ ಊಟಕ್ಕೂ ಪರದಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿ ನಗರವನ್ನು ಖಾಲಿ ಮಾಡಿ ತವರಿಗೆ ಹೋಗಿದ್ದಾರೆ. ಈ ಮೊದಲು ಒಂದು ರಸ್ತೆಯಲ್ಲಿ ಐದಾರು ಕಡೆ ಮನೆ ಖಾಲಿ ಇವೆ ಎಂಬ ಬೋರ್ಡ್‍ಗಳು ನೇತಾಡುತ್ತಿದ್ದವು. ಈಗ ಒಂದು ರಸ್ತೆಗೆ ಸುಮಾರು ಒಂದರಿಂದ ಎರಡು ಭಾವಪೂರ್ಣ ಶ್ರದ್ಧಾಂಜಲಿ ಫಲಕಗಳು ನೇತಾಡುತ್ತಿವೆ.

ಜೀವನ ಮತ್ತು ಜೀವ ಈ ಎರಡೂ ಬೆಂಗಳೂರಿನಲ್ಲಿ ಹೈರಾಣಾಗಿ ಹೋಗಿದೆ. ಆದಾಯ ಕುಸಿತಗೊಂಡು ಜೀವನ ದುಸ್ತರವಾಗಿದ್ದರೆ, ಕೊರೊನಾ ದಿಂದ ಪ್ರಾಣ ಹಾನಿ ಹೆಚ್ಚಾಗಿ ಜೀವ ಸಂಕಷ್ಟದಲ್ಲಿದೆ. ಬೆಂಗಳೂರು ಹೊರತುಪಡಿಸಿ ಉಳಿದ ನಗರಗಳಲ್ಲೂ ಬಹುತೇಕ ಇದೇ ಸಮಸ್ಯೆ ಇದೆ. ಆದರೆ, ಅತಿ ಹೆಚ್ಚು ನಗರೀಕರಣಕ್ಕೆ ಸಿಲುಕಿರುವ ಬೆಂಗಳೂರಿನಲ್ಲಿ ವಲಸಿಗರ ಪ್ರಮಾಣ ಹೆಚ್ಚಾಗಿದೆ. ದಿನದ ದುಡಿಮೆ ಆಶ್ರಯಿಸಿ ಬದುಕುತ್ತಿದ್ದವರ ಸಂಖ್ಯೆ ಶೇ.60ರಷ್ಟಿತ್ತು. ಕೊರೊನಾದಿಂದಾಗಿ ಶೇ.30ರಷ್ಟು ಜನ ನಗರ ಖಾಲಿ ಮಾಡಿದ್ದಾರೆ.

ಮಾರ್ಚ್ ಕೊನೆಯ ಭಾಗದಲ್ಲಿ ಸೋಂಕಿನ ಏರಿಕೆ ಹೆಚ್ಚಾಗಲು ಪ್ರಾರಂಭವಾಯಿತಾದರೂ ಏಪ್ರಿಲ್ ಮೊದಲ ವಾರದಿಂದ ರಣಭೀಕರ ಪರಿಸ್ಥಿತಿ ಎದುರಾಗಿದೆ. ಇದಕ್ಕೂ ಮೊದಲು ಸೋಂಕಿನ ಏರಿಕೆ ಪ್ರಮಾಣ ಶೇ.2ರಿಂದ 5ರ ದರದಲ್ಲಿ ನಿಯಂತ್ರದಲ್ಲಿತ್ತು. ಏ.10ರ ಬಳಿಕವಂತು ಶೇ.7ಕ್ಕೆ ಏರಿಕೆ ಯಾಗಿದ್ದು, ಈಗ ಶೇ.13ರಷ್ಟಕ್ಕೆ ತಲುಪಿದೆ. ದಿನದ ಸೋಂಕಿನ ಏರಿಕೆ ಹೆಚ್ಚಾದಂತೆ ಸಾವಿನ ಪ್ರಮಾಣ ಕೂಡ ತೀವ್ರಗೊಳ್ಳುತ್ತಿದೆ. ಮಾರ್ಚ್ ತಿಂಗಳವರೆಗೂ 8-10 ಸಾವು ಆಗುತ್ತಿದ್ದವು. ಏಪ್ರಿಲ್ ಮೊದಲ ವಾರದಿಂದ 15ರ ಮೇಲ್ಪಟ್ಟು ಸಾವುಗಳ ಸಂಖ್ಯೆ ಏರಿಕೆಯಾಗಿದ್ದು, ಕಳೆದ ಎರಡು ದಿನಗಳ ಹಿಂದಷ್ಟೇ 81 ಮಂದಿ ಸಾವನ್ನಪ್ಪಿದ್ದರು. ನಿನ್ನೆ ಒಂದೇ ದಿನ 146 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಾವಿನ ಸಂಖ್ಯೆ 13,497ರಷ್ಟಾಗಿದೆ.

ಬೆಂಗಳೂರಿನಲ್ಲೂ ಸಾವಿನ ಸಂಖ್ಯೆ ತೀವ್ರವಾಗಿದ್ದು, ನಿನ್ನೆ 97 ಜೀವ ಹಾನಿಯಾಗಿದ್ದರೆ, ಒಟ್ಟು ಪ್ರಾಣ ಕಳೆದುಕೊಂಡವರ ಸಂಖ್ಯೆ 5220ರಷ್ಟಾಗಿದೆ.
ಅಕೃತವಾಗಿ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಈ ಪ್ರಮಾಣದಲ್ಲಿದ್ದರೆ, ಸಾವಿನ ಸಂಖ್ಯೆ ಇದಕ್ಕೂ ಮೀರಿ ನಾಲ್ಕು ಪಟ್ಟು ಹೆಚ್ಚಿದೆ. ಸರ್ಕಾರ ಉದ್ದೇಶ ಪೂರ್ವಕವಾಗಿ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

ಮೊದಲ ಹಂತದ ಕೊರೊನಾ ಅಲೆಯಲ್ಲಿ ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಶೇ.1.45ನ್ನು ದಾಟಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಖುದ್ದು ಮಧ್ಯ ಪ್ರವೇಶ ಮಾಡಿ ಸಾವಿನ ಸಂಖ್ಯೆಯನ್ನು ಶೇ.1ರ ಒಳಗೆ ನಿಯಂತ್ರಿಸುವಂತೆ ಸೂಚನೆ ನೀಡಿದ್ದರು. ಅನಂತರ ಬಿಬಿಎಂಪಿ ಹಾಗೂ ಸರ್ಕಾರ ಹಗಲು ರಾತ್ರಿ ಶ್ರಮಿಸಿದ ಪರವಾಗಿ ಮರಣದ ಪ್ರಮಾಣ ನಿಯಂತ್ರಣಕ್ಕೆ ಬಂದಿತ್ತು. ಸೋಂಕು ಪ್ರಮಾಣ ಹದ್ದುಬಸ್ತಿನಲ್ಲಿತ್ತು.

ಬೆಂಗಳೂರಿನಲ್ಲಿ ಜನವರಿ ತಿಂಗಳಲ್ಲಿ ಶೇ.0.96ರಷ್ಟು, ಫೆಬ್ರವರಿಯಲ್ಲಿ ಶೇ.0.63ರಷ್ಟು, ಮಾರ್ಚ್‍ನಲ್ಲಿ ಶೇ.0.51ರಷ್ಟು ಮಾಸಿಕ ಮರಣ ಪ್ರಮಾಣವಿತ್ತು. ಆದರೆ, ಏಪ್ರಿಲ್‍ನಲ್ಲಿ ಇದು ಶೇ.1ರ ಗರಿಷ್ಠ ಮಿತಿಯನ್ನು ದಾಟುವ ಆತಂಕ ಎದುರಾಗಿದೆ. ಆದರೆ, ಇತ್ತೀಚೆಗೆ ಜನ ಮೈ ಮರೆತಿದ್ದರ ಪ್ರರಿಣಾಮ ಸೋಂಕು ತೀವ್ರವಾಗಿ ಹೆಚ್ಚಳವಾಗಿದೆ. ಸಾವಿನ ಪ್ರಮಾಣ ಕೂಡ ಆತಂಕಕಾರಿಯಾಗಿ ಬದಲಾಗಿದೆ.

@ಉಮೇಶ್ ಕೋಲಿಗೆರೆ 

Facebook Comments