ಬೆಂಗಳೂರಿಗರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ ಈ ಬೆಳವಣಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.4- ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವುದೇ ಹೊಸ ರೋಗಿಗಳಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಬೆಡ್ ಸಿಗದಿರಲು ಪ್ರಮುಖ ಕಾರಣವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಸೋಂಕು ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೂ ಬೆಡ್ ಸಿಗದಿರುವುದೇ ಕಾರಣ ಎಂಬುದು ಸ್ಪಷ್ಟ.

ಕಳೆದ 7 ದಿನಗಳಲ್ಲಿ ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 5238 ಮಂದಿಯಾದರೆ; ಡಿಸ್ಚಾರ್ಜ್ ಆದವರ ಸಂಖ್ಯೆ ಕೇವಲ 244. 7 ದಿನಗಳಲ್ಲಿ 3 ದಿನ ಶೂನ್ಯ ಡಿಸ್ಚಾರ್ಜ್ ಕೂಡ ದಾಖಲಾಗಿದೆ.

ಜೂ.27ರಂದು 596 ಕೊರೋನಾ ಪ್ರಕರಣಗಳು ದಾಖಲಾದರೆ ಡಿಸ್ಚಾರ್ಜ್ ಆದವರು ಕೇವಲ 7 ಮಂದಿ. 28 ಮತ್ತು 29ರಂದು ಕ್ರಮವಾಗಿ 738 ಪ್ರಕರಣಗಳು ದಾಖಲಾದರೂ ಯಾರೊಬ್ಬರೂ ಡಿಸ್ಚಾರ್ಜ್ ಆಗಿಲ್ಲ. ಜೂ.30ರಂದು 503 ಕೇಸ್ ದಾಖಲಾದರೆ ಡಿಸ್ಚಾರ್ಜ್ ಆದವರು ಕೇವಲ 10 ಮಂದಿ. ಜುಲೈ 1ರಂದು 735 ಕೇಸ್ ಆದರೆ; ಡಿಸ್ಚಾರ್ಜ್ ಬರೀ ಶೂನ್ಯ.

ಜು.2ರಂದು 889 ಕೇಸ್ ದಾಖಲಾದರೆ ಕೇವಲ 30 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ನಿನ್ನೆ ಮಾತ್ರ 994 ಕೇಸ್‍ಗಳಲ್ಲಿ ಬರೋಬ್ಬರಿ 197 ಮಂದಿ ಮಾತ್ರ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿಗೆ ಗುರಿಯಾಗಿ ಆಸ್ಪತ್ರೆ ಸೇರಿ ಗುಣಮುಖರಾಗಿ ಮನೆಗೆ ವಾಪಸ್ಸಾಗುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಪ್ರತಿನಿತ್ಯ ನೂರಾರು ಮಂದಿಗೆ ಸೋಂಕು ತಗುಲುತ್ತಿರುವುದೇ ಆಸ್ಪತ್ರೆಗಳಲ್ಲಿ ಬೆಡ್ ಸಿಗದಿರಲು ಕಾರಣವಾಗಿದೆ.

# ಗಲ್ಲಿ ಗಲ್ಲಿಗೂ ಕೊರೋನಾ:
ದಿನೇ ದಿನೇ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಕೊರೋನಾ ಮಹಾಮಾರಿ ನಗರದ ಗಲ್ಲಿ ಗಲ್ಲಿಗೂ ಹರಡುತ್ತಲೇ ಇದೆ. ನಗರದಲ್ಲಿ 7173 ಕೇಸ್‍ಗಳಿದ್ದು, ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾದರೂ ಅಚ್ಚರಿ ಪಡುವಂತಿಲ್ಲ.

ದಕ್ಷಿಣ ವಲಯದಲ್ಲಿ 1884 ಪ್ರಕರಣಗಳು ದಾಖಲಾಗಿದ್ದರೆ, 46 ಮಂದಿ ಮಾತ್ರ ಗುಣಮುಖರಾಗಿದ್ದು 15 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಪೂರ್ವ ವಲಯದಲ್ಲಿ 1530 ಕೇಸ್‍ಗಳಿದ್ದು 92 ಮಂದಿ ಡಿಸ್ಚಾರ್ಜ್ ಆಗಿದ್ದರೆ, 18 ಮಂದಿ ಸಾವನ್ನಪ್ಪಿದ್ದಾರೆ.

ಪಶ್ಚಿಮ ವಲಯದಲ್ಲಿ 1340 ಪ್ರಕರಣಗಳಲ್ಲಿ 120 ಮಂದಿ ಗುಣಮುಖರಾಗಿದ್ದಾರೆ. 18 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಬೊಮ್ಮನಹಳ್ಳಿಯಲ್ಲಿ 591 ಪ್ರಕರಣಗಳಲ್ಲಿ 78 ಮಂದಿ ಡಿಸ್ಚಾರ್ಜ್ ಆಗಿದ್ದರೆ, 6 ಮಂದಿ ಸಾವನ್ನಪ್ಪಿದ್ದಾರೆ.

ಆರ್.ಆರ್.ನಗರದಲ್ಲಿ 403ಕೇಸ್, 7 ಡಿಸ್ಚಾರ್ಜ್, 5 ಸಾವು; ಮಹದೇವಪುರದಲ್ಲಿ 397 ಕೇಸ್, 37 ಡಿಸ್ಚಾರ್ಜ್, 1 ಸಾವು; ಯಲಹಂಕದಲ್ಲಿ 237 ಕೇಸ್, 7 ಡಿಸ್ಚಾರ್ಜ್, 5 ಸಾವು; ದಾಸರಹಳ್ಳಿ ವಲಯದಲ್ಲಿ ಒಟ್ಟು 62 ಪ್ರಕರಣಗಳು ದಾಖಲಾಗಿದ್ದು ಕೇವಲ ಇಬ್ಬರು ಮಾತ್ರ ಗುಣಮುಖರಾಗಿದ್ದು, ಯಾರೊಬ್ಬರೂ ಸೋಂಕಿಗೆ ಬಲಿಯಾಗಿಲ್ಲ. ಈ ಅಂಕಿ-ಅಂಶಗಳನ್ನು ಗಮನಿಸಿದರೆ ಮಹಾಮಾರಿ ಎಲ್ಲಾ 8 ವಲಯಗಳಿಗೂ ಹಬ್ಬಿರುವುದರಿಂದ ಜನ ಎಚ್ಚರ ವಹಿಸುವುದು ಅನಿವಾರ್ಯ.

ಮೂಲವೇ ತಿಳಿಯುತ್ತಿಲ್ಲ: ನಗರದಲ್ಲಿ 7 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದರೂ 5 ಸಾವಿರ ಮಂದಿಯ ಸೋಂಕಿನ ಮೂಲವೇ ಪತ್ತೆಯಾಗದಿರುವುದು ಬಿಬಿಎಂಪಿ ಅಕಾರಿಗಳ ನಿದ್ದೆಗೆಡಿಸಿದೆ.

ಸೋಂಕಿತರಿಗೆ ಕೊರೋನಾ ತಗುಲಿರುವ ಬಗ್ಗೆ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಕಾರಿಗಳು ಪರಿಶೀಲನೆ ನಡೆಸುತ್ತಿದ್ದರು ಮೂಲ ಮಾತ್ರ ಪತ್ತೆಯಾಗುತ್ತಿಲ್ಲ. ಹೀಗಾಗಿ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗದೇ ಅಕಾರಿಗಳು ಕೈ ಚೆಲ್ಲಿ ಕುಳಿತಿದ್ದಾರೆ.

Facebook Comments