ಬೆಂಗಳೂರಿನಲ್ಲಿ ಮತ್ತೆ ಹೆಚ್ಚುತ್ತಿವೆ ಕೊರೋನಾ ಕೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9-ಲಾಕ್‍ಡೌನ್ ತೆರವು ಮಾಡಿದ ನಂತರ ಮತ್ತೆ ನಗರದಲ್ಲಿ ಕೊರೊನಾ ಸೋಂಕು ಪ್ರಕರಣಗಳಲ್ಲಿ ಏರಿಕೆಯಾಗತೊಡಗಿದೆ. ಮಹದೇವಪುರ ಮತ್ತು ಪೂರ್ವ ವಲಯದಲ್ಲಿ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ ಎಂದು ಸ್ವತಃ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರೆ ಸ್ಪಷ್ಟಪಡಿಸಿದ್ದಾರೆ.

ಇತ್ತಿಚೆಗೆ ನಗರದಲ್ಲಿ ಪ್ರತಿನಿತ್ಯ ಸುಮಾರು 600 ಪ್ರಕರಣಗಳು ಪತ್ತೆಯಾಗುತ್ತಿವೆ. ಅದರಲ್ಲೂ ಪ್ರಮುಖವಾಗಿ ಮಹದೇವಪುರ ಮತ್ತು ಪೂರ್ವ ವಲಯಗಳಲ್ಲಿ ಸೋಂಕು ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸೋಂಕು ಹೆಚ್ಚಳಗೊಂಡಿರುವ ಪ್ರದೇಶಗಳಲ್ಲಿ ಕೊರೊನಾ ಪರೀಕ್ಷೆ ಹೆಚ್ಚು ನಡೆಸಿ ಸೋಂಕಿತರು ಪತ್ತೆಯಾದರೆ ಅಂತವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಕಾಣಿಸಿಕೊಂಡಿರುವ ಡೆಲ್ಟಾ ಮಾದರಿ ಮರು ರೂಪಾಂತರಗೊಳ್ಳುತ್ತಿರುವ ಬಗ್ಗೆ ದೇಶದಲ್ಲಿ ಜೇನೋಮ್ ಸಿಕ್ವೇನ್ಸಿ ಪರೀಕ್ಷೆ ನಡೆಸಲಾಗುತ್ತಿದೆ. ಆದರಂತೆ ನಗರದಲ್ಲೂ ನಾವು ಪ್ರಾಯೋಗಿಕವಾಗಿ ಜೇನೋಮ್ ಸಿಕ್ವೇನ್ಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು.

ಇತ್ತಿಚೆಗೆ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಅನ್‍ಲಾಕ್ ಸಂದರ್ಭದಲ್ಲಿ ಬೇಕಾಬಿಟ್ಟಿ ಓಡಾಡಬಾರದು. ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕಿನಿಂದ ಬಚಾವಾಗಬೇಕು ಎಂದು ಅವರು ಮನವಿ ಮಾಡಿಕೊಂಡರು.

Facebook Comments