ಕಳೆದ 10 ದಿನಗಳಲ್ಲಿ ಬೆಂಗಳೂರಲ್ಲಿ 10,774 ಮಂದಿಗೆ ಕೊರೋನಾ ಅಟ್ಯಾಕ್..!
ಬೆಂಗಳೂರು, ಜು.11- ಕಳೆದ 10 ದಿನಗಳಲ್ಲಿ ನಗರದಲ್ಲಿ ಬರೋಬ್ಬರಿ 10,774 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ.
ಜುಲೈನಲ್ಲಿ ಕೊರೊನಾ ಸೋಂಕು ಅಬ್ಬರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಾವಿರಾರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಆತಂಕ ಎದುರಾಗಿದೆ.
ಜೂನ್ನಲ್ಲಿ ನಗರದಲ್ಲಿ 4555 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದರೆ, ಜುಲೈ ತಿಂಗಳಿನ ಕೇವಲ 10 ದಿನಗಳಲ್ಲೇ 10,774 ಪ್ರಕರಣಗಳು ಪತ್ತೆಯಾಗಿವೆ.
ಮುಂದಿನ 20 ದಿನಗಳಲ್ಲಿ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ತಿಂಗಳಾಂತ್ಯಕ್ಕೆ ನಗರದಲ್ಲಿ 30 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾದರೂ ಅಚ್ಚರಿ ಪಡುವಂತಿಲ್ಲ.
ಗಲ್ಲಿ ಗಲ್ಲಿಗೂ ಸೋಂಕು ಹಬ್ಬುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ದೊಡ್ಡ ಗಂಡಾಂತರ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯರು ಇನ್ನೂ ಕೆಲ ದಿನಗಳ ಕಾಲ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.
# 85 ಕಾರ್ಮಿಕರಿಗೆ ಕೊರೊನಾ:
ಪ್ರತಿಷ್ಠಿತ ಎಲ್ ಅಂಡ್ ಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 85 ಕೂಲಿ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಬಾಗಲೂರಿನ ಕಣ್ಣೂರು ಬಳಿ ಇರುವ ಎಲ್ ಅಂಡ್ ಟಿ ಸಂಸ್ಥೆಯಲ್ಲಿ ಇತ್ತೀಚೆಗೆ ಕಾರ್ಮಿಕನೊಬ್ಬನಿಗೆ ಸೋಂಕು ಕಾಣಿಸಿಕೊಂಡಿತ್ತು.
ಹೀಗಾಗಿ ಸಂಸ್ಥೆಯವರು ಎಲ್ಲ ಕಾರ್ಮಿಕರಿಗೂ ಸಾಮೂಹಿಕ ಸ್ವಾಬ್ ಟೆಸ್ಟ್ಗೆ ಒಳಪಡಿಸಿದಾಗ 85 ಮಂದಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಎಲ್ಲ ಸೋಂಕಿತರನ್ನೂ ಜಿಕೆವಿಕೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ತಾತ್ಕಾಲಿಕವಾಗಿ ಎಲ್ ಅಂಡ್ ಟಿ ಸಂಸ್ಥೆಯ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಇಡೀ ಸಂಸ್ಥೆಯನ್ನು ಸ್ಯಾನಿಟೈಜರ್ ಮಾಡಲಾಗುತ್ತಿದೆ.