12 ದಿನಗಳಲ್ಲೇ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಡಬಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.13- ಲಾಕ್‍ಡೌನ್ ಅನ್‍ಲಾಕ್ ಆಗಿದ್ದೇ ರಾಜ್ಯಕ್ಕೆ ಮಾರಕವಾಗಿದೆ. ಕೇವಲ 12 ದಿನಗಳಲ್ಲೇ ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟುಗೊಂಡಿರುವುದು ಜನರನ್ನು ಬೆಚ್ಚಿಬೀಳಿಸಿದೆ.

ಮಾ.8 ರಿಂದ ಮೇ 31ರ ವರೆಗೆ ರಾಜ್ಯದಲ್ಲಿ 3221 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದರೆ, ಜೂ.1 ರಿಂದ ನಿನ್ನೆಯವರೆಗೆ ಬರೋಬ್ಬರಿ 3295 ಪ್ರಕರಣಗಳು ದಾಖಲಾಗಿರುವುದರಿಂದ ಕೇವಲ 12 ದಿನಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದೆ.

ಮಹಾಮಾರಿ ಅಟ್ಟಹಾಸ ಇನ್ನೂ ಮುಂದುವರಿಯಲಿದ್ದು, ಜೂನ್ ಅಂತ್ಯದ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ದಾಟುವ ನಿರೀಕ್ಷೆ ಇದೆ. ರಾಜಧಾನಿ ಬೆಂಗಳೂರಿನಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಕಳೆದ 10 ದಿನಗಳಲ್ಲಿ 239 ಜನರಿಗೆ ಸೋಂಕು ತಗುಲಿದ್ದರೆ, ಮಹಾಮಾರಿಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಅದರಲ್ಲೂ ಮನೆಯಿಂದ ಹೊರಹೋಗುವ ಪುರುಷರು ಅತಿ ಹೆಚ್ಚು ಸೋಂಕಿತರು ಎನ್ನುವುದು ವಿಶೇಷ. 239 ಮಂದಿಯಲ್ಲಿ 142 ಮಂದಿ ಪುರುಷರು ಹಾಗೂ 121 ಮಹಿಳೆಯರಾಗಿದ್ದಾರೆ.

ಯೋಧನಿಗೂ ಕೊರೊನಾ: ಆನೆಕಲ್ ತಾಲ್ಲೂಕಿನ ಅನಂತನಗರದಲ್ಲಿರುವ ತಮ್ಮ ಸಂಬಂಕರ ಮನೆಗೆ ರೈಲಿನಲ್ಲಿ ಆಗಮಿಸಿದ್ದ ದೆಹಲಿ ಮೂಲದ ಬಿಎಸ್‍ಎಫ್ ಯೋಧನಿಗೂ ಕೊರೊನಾ ಕಾಣಿಸಿಕೊಂಡಿದೆ.ಬೆಂಗಳೂರಿಗೆ ಬಂದ ತಕ್ಷಣ ಬೊಮ್ಮಸಂದ್ರ ಬಳಿ ಇರುವ ನಾರಾಯಣ ಹೃದಯಾಲಯದಲ್ಲಿ ಯೋಧ ಪರೀಕ್ಷೆ ಮಾಡಿಸಿಕೊಂಡಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೂಡಲೇ ಯೋಧನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ರೈಲು ನಿಲ್ದಾಣದಿಂದ ಬಂದಿದ್ದ ಆಟೋ ಚಾಲಕ ಮತ್ತು ಆತನ ಜತೆ ಸಂಪರ್ಕವಿಟ್ಟುಕೊಂಡಿದ್ದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.ಕೆಜಿ ಹಳ್ಳಿಯಲ್ಲಿ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

#ಚಿಕ್ಕಪೇಟೆಯಲ್ಲಿ ಆತಂಕ:
ಜನನಿಬಿಡ ಚಿಕ್ಕಪೇಟೆಯಲ್ಲಿರುವ ಖಾಸಗಿ ವೈದ್ಯರೊಬ್ಬರಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಆತಂಕ ಎದುರಾಗಿದೆ. ಜಯನಗರ ನಿವಾಸಿಯಾಗಿರುವ ವೈದ್ಯ ಚಿಕ್ಕಪೇಟೆಯಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದರು. ಇತ್ತೀಚೆಗೆ ಜ್ವರದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಿದ್ದರು ಎನ್ನಲಾಗಿದೆ.

ಆ ವ್ಯಕ್ತಿಯಿಂದಲೇ ವೈದ್ಯರಿಗೂ ಸೋಂಕು ತಗುಲಿರುವ ಸಾಧ್ಯತೆ ಇದ್ದು, ಡಾಕ್ಟರ್‍ರೊಂದಿಗೆ ಸಂಪರ್ಕವಿರಿಸಿಕೊಂಡಿದ್ದ ವ್ಯಕ್ತಿಗಳ ಪತ್ತೆಗೆ ಆರೋಗ್ಯ ಇಲಾಖೆ ಅಕಾರಿಗಳು ಮುಂದಾಗಿದ್ದಾರೆ.

# 31 ಸಾವು:
ನಗರದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ನಿನ್ನೆಯಿಂದೀಚೆಗೆ ಇಬ್ಬರು ರೋಗಿಗಳು ಮಹಾಮಾರಿಗೆ ಬಲಿಯಾಗಿದ್ದಾರೆ.

ಮುನಿರೆಡ್ಡಿ ಪಾಳ್ಯದಲ್ಲಿ ಸೋಂಕು ಕಾಣಿಸಿಕೊಂಡಿದ್ದ ವ್ಯಕ್ತಿಯೊಬ್ಬ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಇಲಾಖೆ ಅಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಿನ್ನೆಯವರೆಗೂ 29 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದೀಗ ಮತ್ತಿಬ್ಬರು ಮೃತಪಡುವ ಮೂಲಕ ಕೊರೊನಾಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

Facebook Comments

Sri Raghav

Admin