ನಿರೀಕ್ಷೆಯಂತೆ ಕೆಲಸ ಮಾಡದ ಅಷ್ಟದಿಕ್ಪಾಲಕರು : ಸಿಎಂ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.20- ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಿಸಲು ನೇಮಿಸಿದ್ದ ಸಚಿವರು ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೆ ಇರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೇಸರ ಹೊರಹಾಕಿದ್ದಾರೆ.

ನಾನು ಬಹಳಷ್ಟು ನಂಬಿಕೆ ಇಟ್ಟುಕೊಂಡು ವಲಯಗಳನ್ನು ವಿಂಗಡಣೆ ಮಾಡಿ ಸಚಿವರು ಹಾಗೂ ಅಧಿಕಾರಿಗಳನ್ನು ಉಸ್ತುವಾರಿಗೆ ನೇಮಿಸಿದ್ದೆ. ಆದರೆ, ಈ ವರೆಗೂ ಒಂದೇ ಒಂದು ವಲಯದಲ್ಲೂ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ.

ಬದಲಿಗೆ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಯಾವ ಸಚಿವರು ಏನು ಮಾಡುತ್ತಿದ್ದಾರೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಬಿಎಸ್‍ವೈ ಅಸಮಾಧಾನ ಹೊರಹಾಕಿದ್ದಾರೆ.

ಈ 10 ದಿನಗಳಲ್ಲಿ ನಿರೀಕ್ಷೆ ಮಾಡಿರುವ ಮಟ್ಟಕ್ಕೆ ಪ್ರಗತಿ ಸಾಧಿಸಿಲ್ಲ. ಅಲ್ಲದೆ, ಕೊರೊನಾ ನಿಯಂತ್ರಣ ವಿಚಾರದಲ್ಲಿ ವಲಯವಾರು ಸಾಧನೆ ಆಗಿಲ್ಲ ಎಂದು ಸಿಎಂ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಕೆಲವು ಉಸ್ತುವಾರಿ ಸಚಿವರು ಫೀಲ್ಡ್‍ಗಿಳಿಯದೆ ಅಧಿಕಾರಿಗಳಿಂದಲೇ ಮಾಹಿತಿ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸಿಎಂ ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದರೆ ಎಂದು ಮೂಲಗಳು ಖಚಿತ ಪಡಿಸಿವೆ.

ಇನ್ನು ಎಂಟು ವಲಯಗಳ ಉಸ್ತುವಾರಿ ಸಚಿವರು 10 ದಿನಗಳ ಕಾಲ ತಮ್ಮ ತಮ್ಮ ವಲಯಗಳಲ್ಲಿ ಕೊರೊನಾ ನಿಂಯಂತ್ರಣಕ್ಕೆ ಕೈಗೊಂಡಿರುವ ಪ್ರಗತಿಯ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದಾರೆ.

10 ದಿನಗಳಲ್ಲಿ ವಲಯವಾರು ಕೊರೊನಾ ನಿಯಂತ್ರಣ, ನಿರ್ವಹಣೆಗೆ ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಸಚಿವರ ಕಾರ್ಯ ವೈಖರಿ ತೃಪ್ತಿ ತಂದಿಲ್ಲ ಎಂದು ಕಿಡಿಕಾರಿದ್ದಾರೆ.

ದಕ್ಷಿಣ, ಪೂರ್ವ ಮತ್ತು ಪಶ್ಚಿಮ, ಬೊಮ್ಮನಹಳ್ಳಿ ವಲಯದಲ್ಲಿ ಕೊರೊನಾ ನಿಯಂತ್ರಣಾ ಕ್ರಮಗಳು ಸಮಾಧಾನ ತಂದಿಲ್ಲ. ಈ ವಲಯಗಳಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸುತ್ತಿವೆ.

ಸರ್ಕಾರಿ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ರೋಗಿಗಳಿಗೆ ಮೂಲಸೌಕರ್ಯಗಳ ಕೊರತೆ ನೀಗಿಲ್ಲ. ಸೋಂಕಿತರನ್ನು ಆಸ್ಪತ್ರೆಗೆ, ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸುವ ಪ್ರಕ್ರಿಯೆಯಲ್ಲಿ ವೇಗ ಬಂದಿಲ್ಲ.

ಸೋಂಕಿತರು ಕರೆ ಮಾಡಿದ 2 ಗಂಟೆಯೊಳಗೆ ಅಂಬುಲೆನ್ಸ್‍ಗಳು ತಲುಪುತ್ತಿಲ್ಲ. ಕಂಟೈನ್ಮೆಂಟ್ ವಲಯಗಳಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚಳವಾಗಿಲ್ಲ.

ಪ್ರತಿ ವಲಯಗಳಲ್ಲೂ ಸಹಾಯವಾಣಿಗಳಿದ್ದರೂ ಸಕಾಲಕ್ಕೆ ಸ್ಪಂದನೆ ದೊರಕುತ್ತಿಲ್ಲ ಎಂಬ ಆರೋಪ ಹೆಚ್ಚಾಗಿದೆ. ವಲಯವಾರು ವೈದ್ಯ ಸಿಬ್ಬಂದಿ ಕೊರತೆ ಇದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಕ್ರಮ ಆಗಿಲ್ಲ.

ಸ್ವಯಂ ಸೇವಕರ ನೇಮಕ ಹೇಳಿಕೊಳ್ಳುವಂತಿಲ್ಲ. ಬಹುತೇಕ ಸಚಿವರು ಕೆಲಸ ಮಾಡುವ ಬಗ್ಗೆ ಆಸಕ್ತಿಯನ್ನೇ ತೋರುತ್ತಿಲ್ಲ ಎನ್ನುವ ಅಸಮಾಧಾನವೂ ಇದೆ.

# ಉಸ್ತುವಾರಿ ಸಚಿವರು:
1. ಪಶ್ವಿಮ ವಲಯ- ಡಿಸಿಎಂ ಡಾ.ಅಶ್ವಥ್ ನಾರಾಯಣ್
2. ಪೂರ್ವ ವಲಯ ಸಚಿವ ವಿ.ಸೋಮಣ್ಣ
3. ದಕ್ಷಿಣ ವಲಯ- ಸಚಿವ ಆರ್.ಅಶೋಕ್
4. ಬೊಮ್ಮನಹಳ್ಳಿ ವಲಯ- ಸಚಿವ ಸುರೇಶ್ ಕುಮಾರ್
5. ಮಹದೇವಪುರ ವಲಯ- ಸಚಿವ ಬೈರತಿ ಬಸವರಾಜು
6. ಯಲಹಂಕ ವಲಯ- ಎಸ್.ಆರ್.ವಿಶ್ವನಾಥ್
7. ಆರ್ ಆರ್ ನಗರವಲಯ – ಸಚಿವ ಎಸ್.ಟಿ.ಸೋಮಶೇಖರ್
8. ದಾಸರಹಳ್ಳಿ ವಲಯ- ಸಚಿವ ಗೋಪಾಲಯ್ಯ

Facebook Comments

Sri Raghav

Admin