ಕೊರೋನಾದಿಂದ ಮೃತಪಟ್ಟ ಮುಸ್ಲಿಮರನ್ನು ಗೌರವದಿಂದ ಅಂತ್ಯ ಸಂಸ್ಕಾರ ಮಾಡುವಂತೆ ಔಖಾಫ್ ಮಂಡಳಿಯ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು. 8 : ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಂ ಸಮುದಾಯದ ಶವಗಳನ್ನು ಸಭ್ಯವಾಗಿ ಅಂತ್ಯ ಸಂಸ್ಕಾರ ಮಾಡುವ ಕುರಿತು ಕರ್ನಾಟಕ ರಾಜ್ಯ ಔಖಾಫ್ ಮಂಡಳಿ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯದ ವಕ್ಫ್ ನೋಂದಾಯಿತ ಅಥವಾ ನೋಂದಾಯಿಸಲಾಗದೆ ಇರುವ ಖಬರಸ್ತಾನಗಳ ಆಡಳಿತ ಸಮಿತಿಗಳು/ಮುತವಲ್ಲಿಗಳು/ಆಡಳಿತಾಧಿಕಾರಿಗಳು ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಮರ ಶವಸಂಸ್ಕಾರ ಮಾಡುವುದನ್ನು ತಡೆಯಬಾರದು, ಸದರಿ ಕಾರ್ಯಕ್ಕಾಗಿ ನೇಮಿಸಲಾದಂತಹ ನೋಡಲ್ ಅಧಿಕಾರಿಗಳ ಸಹಯೋಗದೊಂದಿಗೆ ಮೃತ ವ್ಯಕ್ತಿಯ ಸಭ್ಯ ಶವ ಸಂಸ್ಕಾರಕ್ಕೆ ಕ್ರಮ ಕೈಗೊಳ್ಳಬೇಕು.

ಖಬರಸ್ತಾನಗಳ ಆಡಳಿತ ಸಮಿತಿಗಳ ಪ್ರತಿನಿಧಿಗಳಿಂದ ಅಸಹಕಾರ ಅಥವಾ ತಿರಸ್ಕರಣೆಯನ್ನು ಮೃತ ವ್ಯಕ್ತಿಗೆ ಮಾಡಲಾದ ಅವಮಾನ ಎಂದು ಭಾವಿಸಲಾಗುವುದು.

ಸದರಿ ಆದೇಶದ ಉಲ್ಲಂಘನೆಯು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳಡಿ ದಂಡನಾತ್ಮಕವಾಗಿರುತ್ತದೆ ಹಾಗೂ ವಕ್ಫ್ ಕಾಯ್ದೆ 1995 ರ ಪ್ರವಾಧಾನಗಳಡಿ ಆಡಳಿತ ಸಮಿತಿಯಿಂದ ಹೊರ ಹಾಕುವ ಷರತ್ತಿಗೊಳ್ಳಪಟ್ಟಿರುತ್ತದೆ.

ಆಯಾ ಜಿಲ್ಲಾ ವಕ್ಫ್ ಅಧಿಕಾರಿಗಳು, ಖಬರಸ್ತಾನಗಳ ಆಡಳಿತ ಸಮಿತಿಗಳಿಗೆ ಸದರಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಕ್ತ ಕ್ರಮ ಕೈಗೊಳ್ಳುವುದು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಅನುಪಾಲನೆಯನ್ನು ಹೊರತು ಪಡಿಸಿ ಯಾವುದೇ ರೀತಿಯ ಚರ್ಚೆಗೆ ಆಸ್ಪದ ನೀಡಕೂಡದು, ಈ ಆದೇಶವನ್ನು ಉಲ್ಲಂಘಿಸಿದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಇಸ್ಲಾಹುದ್ದೀನ್. ಜೆ. ಗದ್ಯಾಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin