ಭಾರತದಲ್ಲಿ ಕೊರೋನಾ ಮೃತರ ಸಂಖ್ಯೆ 280ಕ್ಕೇರಿಕೆ, 8500ಕ್ಕೂ ಹೆಚ್ಚು ಮಂದಿಗೆ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಏ.12-ಅಗೋಚರ ವೈರಸ್ ಕಾಟ ದೇಶದಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದೂ ಕೂಡ ಅನೇಕ ರಾಜ್ಯಗಳಲ್ಲಿ ಸಾವು ಮತ್ತು ಮಾರಕ ಸೋಂಕು ಪ್ರಕರಣಗಳು ಮರು ಕಳಿಸಿವೆ.ದೇಶದಲ್ಲಿ ಮೃತರ ಸಂಖ್ಯೆ 280ಕ್ಕೇರಿದ್ದು, 8,500ಕ್ಕೂ ಹೆಚ್ಚು ಮಂದಿ ಸೋಂಕು ಪೀಡಿತರು ಕಂಟಕದಲ್ಲಿದ್ದಾರೆ.

ಕೊರೊನಾ ವೈರಸ್ ಸುನಾಮಿಯಂತೆ ವ್ಯಾಪಕ ದುಷ್ಪರಿಣಾಮ ಬೀರುತ್ತಿದ್ದು , ದೇಶದ ವಿವಿಧೆಡೆ 24 ತಾಸುಗಳಲ್ಲಿ 1,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ 50ಕ್ಕೂ ಅಧಿಕ ಮಂದಿ ಸೋಂಕು ಪೀಡಿತರು ಮೃತಪಟ್ಟಿರುವುದು ಕೊರೊನಾ ವೈರಾಣು ದಾಳಿಯ ತೀವ್ರತೆಗೆ ನಿದರ್ಶನವಾಗಿದೆ. ದೇಶದ ವಿವಿಧೆಡೆ ಕ್ಷಣ ಕ್ಷಣಕ್ಕೂ ಹೊಸ ಹೊಸ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು , ಕ್ಷಿಪ್ರ ವೇಗದಲ್ಲಿ ಸಾಂಕ್ರಾಮಿಕ ರೋಗ ಪಸರಿಸುತ್ತಿರುವುದು ದೇಶ ವಾಸಿಗಳನ್ನು ಮತ್ತಷ್ಟು ಭಯಭೀತಗೊಳಿಸಿದೆ.

ಇಂದು ಬೆಳಗ್ಗೆ ಕೂಡ ಕೆಲವರನ್ನು ಕೊರೊನಾ ಹೆಮ್ಮಾರಿ ಬಲಿ ತೆಗೆದುಕೊಂಡಿದೆ. ಅಲ್ಲದೇ ಸೋಂಕಿತರ ಸಂಖ್ಯೆಯೂ ಕಳವಳಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, 8,500ಕ್ಕೂ ಹೆಚ್ಚು ಮಂದಿ ಸಾಂಕ್ರಾಮಿಕ ರೋಗದಿಂದ ಬಾಧಿತರಾಗಿದ್ದಾರೆ. ಇಂದು ಗುಜರಾತ್, ಮಹಾರಾಷ್ಟ್ರ , ಜಾರ್ಖಂಡ್ ಸೇರಿದಂತೆ ಕೆಲವೆಡೆ ಸಾವು ಸಂಭವಿಸಿವೆ. ಅಲ್ಲದೆ ಸೋಂಕಿತರ ಸಂಖ್ಯೆಯೂ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.

ಕಳೆದ 12 ತಾಸುಗಳ ಅವಧಿಯಲ್ಲಿ ದೇಶದ ಕೆಲವೆಡೆ ಸಾವು ಮತ್ತು ಸೋಂಕಿನ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಮತ್ತೆ ಸಾವು ಮತ್ತು ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಕೋಲಾ ಜಿಲ್ಲೆಯಲ್ಲಿ ಕೊರೊನಾ ಕಾಟದಿಂದ ಯುವಕನೊಬ್ಬ ಸಾವಿಗೆ ಶರಣಾಗಿದ್ದಾನೆ.

30 ವರ್ಷದ ಈತ ದೆಹಲಿಯ ನಿಜಾಮುದ್ಧೀನ್ ಪ್ರದೇಶದಲ್ಲಿ ನಡೆದ ಬೃಹತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಹಿಂದಿರುಗಿದ್ದ. ಈತನಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಈ ಭಯದಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾರಾಷ್ಟ್ರದಲ್ಲಿ ಈವರೆಗ 170ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಸೋಂಕಿತರ ಸಂಖ್ಯೆ 1600ರ ಸನಿಹದಲ್ಲಿದೆ.

ಜಗತ್ತಿನ ಅತಿದೊಡ್ಡ ಕೊಳಗೇರಿ ಪ್ರದೇಶವೆಂದೇ ಕುಖ್ಯಾತಿ ಪಡೆದಿರುವ ಧಾರವಿ ಸ್ಪಂ ಕೊರೊನಾ ವೈರಸ್‍ನ ಹಾಟ್‍ಸ್ಪಾಟ್ ಆಗುತ್ತಿದೆ. ಅಲ್ಲಿ ಈವರೆಗೆ ಮೂವರು ಬಲಿಯಾಗಿದ್ದಾರೆ ಅಲ್ಲಿ ಮತ್ತೆ 15 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.  ಗಾಂಧಿ ನಾಡು ಗುಜರಾತ್ ಅಹಮದಾಬಾದ್‍ನಲ್ಲಿ 75 ವರ್ಷದ ವೃದ್ದರೊಬ್ಬರನ್ನು ಕೊರೊನಾ ಬಲಿ ಪಡೆದಿದೆ.

ಇದರೊಂದಿಗೆ ಆ ರಾಜ್ಯದಲ್ಲಿ ಮೃತ ಸಂಖ್ಯೆ 23ಕ್ಕೇರಿದೆ. ಅಲ್ಲದೇ ಇಂದು ಮತ್ತೆ 25 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವ್ ಕೇಸ್‍ಗಳು 532ಕ್ಕೇರಿದೆ. ರಾಜಸ್ತಾನದಲ್ಲಿ ಸೋಂಕು ಪ್ರಕರಣ ಹೆಚ್ಚಳ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ.

ಇಂದು ಮತ್ತೆ 51 ಜನರಲ್ಲಿ ಪಾಸಿಟಿವ್ ಕೇಸ್‍ಗಳು ದೃಢಪಟ್ಟಿದ್ದು, ಬಾಧಿತರ ಸಂಖ್ಯೆ 751ಕ್ಕೇರಿದೆ. ಅಲ್ಲಿ ಈವರೆಗೆ 9 ರೋಗಿಗಳು ಅಸು ನೀಗಿದ್ದಾರೆ. ಜಾರ್ಖಂಡ್‍ನಲ್ಲಿ ಇಂದು ಬೆಳಗ್ಗೆ 60 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಹಿಂದೂಪುರಿ ಪ್ರದೇಶದ ಇವರು ಕಳೆದ ಕೆಲವು ದಿನಗಳಿಂದ ಸೋಂಕಿನಿಂದ ಬಳಲುತ್ತಿದ್ದರು. ಇದು ಜಾರ್ಖಂಡ್‍ನಲ್ಲಿ ಎರಡನೆ ಸಾವು ಪ್ರಕರಣವಾಗಿದೆ.

ಒಡಿಶಾದಲ್ಲೂ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರೋಗಿಗಳ ಸಂಖ್ಯೆ 54ಕ್ಕೇರಿದೆ. ಕೇಂದ್ರ ಸರ್ಕಾರ ವಿಧಿಸಿರುವ ಲಾಕ್‍ಡೌನ್ ಅವಧಿ ಏ.14ರಂದು ಕೊನೆಗೊಳ್ಳಲಿದ್ದು, ಕಿಲ್ಲರ್ ಕೊರೊನಾ ಕಂಟಕ ಮತ್ತಷ್ಟು ತೀವ್ರವಾಗುತ್ತಿದ್ದು, ಏರಡನೇ ಹಂತದ ಲಾಕ್‍ಡೌನ್ ಏ.30ವರೆಗೂ ವಿಸ್ತರಣೆಯಾಗಲಿದೆ.

Facebook Comments

Sri Raghav

Admin