ಕಲ್ಪತರುನಾಡಿನಲ್ಲಿ ತಂಪೆರೆದ ವರ್ಷಧಾರೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಏ. 29- ಬೇಸಿಗೆಯ ಬಿಸಿಲಿನ ಝಳದಿಂದ ಬಸವಳಿದಿದ್ದ ಕಲ್ಪತರುನಾಡಿನ ಜನರಿಗೆ ಮುಂಜಾನೆಯಿಂದ ಸುರಿದ ವರ್ಷಧಾರೆ ತಂಪೆರೆಯುವ ಮೂಲಕ ಮಂದಹಾಸ ಮೂಡಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ನಸುಕಿನಿಂದ ಸುರಿದ ಮಳೆಯಿಂದ ಭೂಮಿ ತಂಪಾಗಿದ್ದು, ಅಡಿಕೆ, ತೆಂಗು, ಬಾಳೆ ತೋಟಗಳಿಗೆ ತಂಪೆರೆದಿದೆ. ಬಿಸಿಲಿನ ಝಳದಿಂದ ತತ್ತರಿಸಿದ್ದ ತೋಟಗಳು ಇಂದು ಮುಂಜಾನೆಯಿಂದ ಸುರಿದ ಮಳೆಗೆ ತಂಪಾಗಿದ್ದು, ನಳನಳಿಸುತ್ತಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಇಂದು ಸುರಿದ ವರ್ಷಧಾರೆ ಕೃಷಿ ಚಟುವಟಿಕೆಗೆ ಹಸಿರು ನಿಶಾನೆ ತೋರಿದಂತಾಗಿದೆ. ಮಳೆ ನಿಂತು ಭೂಮಿ ಮಳೆ ನೀರಿನಿಂದ ಒಣಗಿದ ನಂತರ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ರೈತ ಸಮೂಹ ತುದಿಗಾಲಲ್ಲಿ ನಿಂತಿದೆ.

# ಜಲಾವೃತ:
ಮುಂಜಾನೆಯಿಂದ ಆರಂಭವಾದ ಮಳೆ ಜಿಲ್ಲೆಯ ಹಲವೆಡೆ ಧಾರಕಾರವಾಗಿ ಸುರಿದಿದ್ದು, ಹಳ್ಳಿಗಳು ಸೇರಿದಂತೆ ನಗರ, ಪಟ್ಟಣ ಪ್ರದೇಶದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ತುಮಕೂರು ನಗರದ ಶೆಟ್ಟಿಗೇಟ್‍ನಲ್ಲಿ ನಿರ್ಮಿಸಲಾಗಿರುವ ಅಂಡರ್‍ಪಾಸ್ ಇಂದು ನಸುಕಿನಲ್ಲಿ ಸುರಿದ ಮಳೆಗೆ ಕೆರೆಯಂತಾಗಿದೆ.

ಈ ಅಂಡರ್‍ಪಾಸ್ ನಿರ್ಮಿಸಿ ಉದ್ಘಾಟನೆಗೊಂಡ ಮರು ದಿನದಿಂದಲೇ ಮಳೆ ನೀರು ಸಂಗ್ರಹವಾಗುತ್ತಲೇ ಇದೆ. ಮಳೆ ಬಂದರೆ ಇಲ್ಲಿ ನೀರು ನಿಂತು ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ಸಂಚರಿಸುವ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಲೇ ಇದೆ.

ಆದರೂ ಇದುವರೆಗೂ ಯಾವೊಬ್ಬ ಅಧಿಕಾರಿಯಾಗಲೀ, ಜನಪ್ರತಿನಿಧಿಯಾಗಲೀ ಇಲ್ಲಿ ಸಂಗ್ರಹವಾಗುವ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವ ಗೋಜಿಗೆ ಹೋಗಿಲ್ಲ.

Facebook Comments

Sri Raghav

Admin