ವಿಶ್ವದಲ್ಲಿ 67000 ದಾಟಿದ ಕೊರೊನಾ ಸಾವಿನ ಸಂಖ್ಯೆ, 12 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ಇಂಗ್ಲೆಂಡ್/ಮಿಲಾನ್, ಏ.5-ಕಿಲ್ಲರ್ ಕೋವಿಡ್-19 ಕ್ರೌರ್ಯಕ್ಕೆ 205ಕ್ಕೂ ಹೆಚ್ಚು ದೇಶಗಳಲ್ಲಿ ಸಾವು-ನೋವಿನ ಸರಣಿ ಮುಂದುವರಿದಿದೆ. ವಿಶ್ವದಾದ್ಯಂತ ಈವರೆಗೆ 67,000ಕ್ಕೂ ಮಂದಿ ಬಲಿಯಾಗಿದ್ದು, ಸೋಂಕಿತ ಸಂಖ್ಯೆ 12 ಲಕ್ಷ ದಾಟಿದೆ.

ಕೊರೊನಾ ಹೆಮ್ಮಾರಿಯಿಂದಾಗಿ ಇಡೀ ವಿಶ್ವವೇ ಹಿಂದೆಂದೂ ಕಂಡು ಕೇಳರಿಯದಂಥ ವಿಪ್ಲವಕ್ಕೆ ಸಿಲುಕಿದ್ದು, ಸಹಸ್ರಾರು ಸಾವು ಮತ್ತು ಲಕ್ಷಾಂತರ ಜನರ ಸೋಂಕಿನೊಂದಿಗೆ ಊಹಾತೀಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೇ ಹೊಸ ವೈರಸ್ ದಾಳಿಯಿಂದ ಜರ್ಝರಿತವಾಗಿವೆ.

ಸಾಂಕ್ರಾಮಿಕ ಪೀಡೆಯಿಂದ ಬಾಧಿತರಾಗಿರುವವರಲ್ಲಿ ನೂರಾರು ಜನರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಕಳವಳ ವ್ಯಕ್ತಪಡಿಸಿದೆ.

ಈಗಿನ ಅಂಕಿಅಂಶಗಳ ಪ್ರಕಾರ ಜಗತ್ತಿನಾದ್ಯಂತ ಈವರೆಗೆ 64,753 ಮಂದಿ ಮೃತರಾಗಿದ್ದು, 11,97,400 ಮಂದಿ ಸೋಂಕು ಪೀಡಿತರಾಗಿದ್ದಾರೆ. ಇದು ಕಳೆದ 12 ತಾಸುಗಳ ಹಿಂದಿನ ಅಂಕಿಅಂಶವಾಗಿದ್ದು, ಮರಣ ಮತ್ತು ಸೋಂಕು ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ.

ಅತ್ಯಂತ ಬಲಿಷ್ಠ ದೇಶ ಅಮೆರಿಕವೇ ಕೊರೊನಾ ದಾಳಿಯಿಂದ ಕಂಗಲಾಗಿದೆ. ಅಮೆರಿಕದಲ್ಲಿ ಪ್ರತಿದಿನ ಸರಾಸರಿ 1000 ಮಂದಿ ಅಸುನೀಗಿದ್ದಾರೆ. ಮೃತರ ಸಂಖ್ಯೆ 10,000ಕ್ಕೇರಿದೆ. ವಿಶ್ವದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳು ಸಹ ಅಮೆರಿಕದಲ್ಲಿ ದಾಖಲಾಗಿದೆ. ಅಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಈಗಾಗಲೇ 3.10 ಲಕ್ಷ ಸಮೀಪದಲ್ಲಿದೆ.

ಗಗನಚುಂಬಿ ನಗರಿ ನ್ಯೂಯಾರ್ಕ್ ಸಾವಿನ ಮನೆಯಾಗಿದ್ದು, ಅಲ್ಲಿ ಸಾವು ಮತ್ತು ಸೋಂಕು ಪ್ರಕರಣಗಳು ಪುನರಾವರ್ತನೆಯಾಗುತ್ತಲೇ ಇವೆ. ಅಲ್ಲಿ ಸುಮಾರು 3000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.  ಕಿಲ್ಲರ್ ಕೊರೊನಾದಿಂದ ಘನಘೋರ ಪರಿಸ್ಥಿತಿ ಎದುರಿಸುತ್ತಿರುವ ಇಟಲಿ ಮತ್ತು ಸ್ಪೇನ್ ಸೇರಿದಂತೆ ಯುರೋಪ್ ಖಂಡದಲ್ಲಿ ಮೃತಪಟ್ಟವರ ಸಂಖ್ಯೆ 35,000 ದಾಟಿದೆ.

ಅಮೆರಿಕ ರಾಜಧಾನಿ ವಾಷಿಂಗ್ಟನ್‍ನ ಜಾನ್ಸ್ ಹಾಪ್‍ಕೀನ್ಸ್ ವಿಶ್ವವಿದ್ಯಾಲಯದ ಕೊರೊನಾ ರಿಸೋರ್ಸ್ ಸೆಂಟರ್ ನಿನ್ನೆ ಸಂಜೆ ನೀಡಿರುವ ಹೊಸ ಅಂಕಿ-ಅಂಶಗಳು ಕಳವಳಕ್ಕೆ ಕಾರಣವಾಗಿದೆ. ಸುಮಾರು 11 ಸಾವಿರ ಸಾವಿನೊಂದಿಗೆ ಸ್ಪೇನ್‍ನಲ್ಲಿ ಈಗ 1,26,168 ಸೋಂಕಿತರು ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದಾರೆ.

ಇಟಲಿಯಲ್ಲಿ ಈಗಾಗಲೇ 10,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೊನಾ ಹೆಮ್ಮಾರಿಯಿಂದ 1,24,632 ಜನರು ಸೋಂಕು ಪೀಡಿತರಾಗಿದ್ದರೆ. ಜರ್ಮನಿ ಮತ್ತು ಫ್ರಾನ್ಸ್‍ನಲ್ಲಿ ಅನುಕ್ರಮವಾಗಿ 92,150 ಮತ್ತು 83,031 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇಂಗ್ಲೆಂಟ್‍ನಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿ ಸಾವು ನೋವು ಮತ್ತು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುತ್ತಲೇ ಇವೆ.

ಚೀನಾ, ದಕ್ಷಿಣ ಕೊರಿಯಾ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಮತ್ತಷ್ಟು ಆತಂಕಕಾರಿಯಾಗಿದೆ.ವಿನಾಶಕಾರಿ ಕೊರೊನಾದಿಂದ ಇಡೀ ವಿಶ್ವ ಹಿಂದೆಂದೂ ಕಂಡು ಕೇಳರಿಯದಂಥ ಭಾರೀ ಆತಂಕ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೇ ಅನೇಕ ದೇಶಗಳಲ್ಲಿ ವೈರಾಣು ಪೀಡೆ ತೀವ್ರವಾಗಿ ಹೆಚ್ಚಾಗಿ ಸಾವು ಪ್ರಕರಣಗಳು ಏರುತ್ತಲೇ ಇರುವುದು ಪ್ರಪಂಚದ ಜನರನ್ನು ಕಂಗೆಡಿಸಿದೆ.

Facebook Comments

Sri Raghav

Admin