ಕೊರೋನಾದಿಂದ ಸಾವನ್ನಪ್ಪಿದವರ ಶವಸಂಸ್ಕಾರ ನಡೆಸುವ ಸಿಬ್ಬಂದಿಗೆ ಪ್ರೋತ್ಸಾಹ ಧನ, 4 ಚಿತಾಗಾರ ಮೀಸಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.25- ಕೊರೊನಾ ಸೋಂಕಿನಿಂದ ಮೃತಪಟ್ಟ ಶವ ಸಂಸ್ಕಾರಕ್ಕೆ ನಾಲ್ಕು ಚಿತಾಗಾರಗಳನ್ನು ಬಿಬಿಎಂಪಿ ಮೀಸಲಿಟ್ಟಿದೆ. ಮಾತ್ರವಲ್ಲ, ಸಂಸ್ಕಾರ ನಡೆಸುವವರಿಗೆ ಹಲವು ರೀತಿಯ ಪ್ರೋತ್ಸಾಹ ಧನವನ್ನೂ ಘೋಷಿಸಿದೆ.

ಕೊರೊನಾ ಸೋಂಕಿನಿಂದ ಮೃತಪಟ್ಟ ಶವಗಳನ್ನು ಕೆಂಗೇರಿ, ಮೇಡಿ ಅಗ್ರಹಾರ, ಕೂಡ್ಲು ಹಾಗೂ ಪಣತ್ತೂರು ಚಿತಾಗಾರಗಳಲ್ಲಿ ಸಂಸ್ಕಾರ ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಆದೇಶ ಹೊರಡಿಸಿದ್ದಾರೆ.

ನಗರದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿದ್ದು, ಹಲವಾರು ಸೋಂಕಿತರು ಮೃತಪಡುತ್ತಿರುವುದರಿಂದ ಮೃತ ದೇಹಗಳನ್ನು ಸ್ಪರ್ಶ ಮತ್ತು ನಿರ್ವಹಣೆ ಮಾಡುವ ವ್ಯಕ್ತಿಗಳಿಗೂ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ಸೋಂಕಿನಿಂದ ಮೃತಪಟ್ಟ ಶವಗಳ ಸಂಸ್ಕಾರಕ್ಕೆ ನಾಲ್ಕು ಚಿತಾಗಾರಗಳನ್ನು ಮೀಸಲಿಡಲು ತೀರ್ಮಾನಿಸಲಾಗಿದೆ.

ಈ ಚಿತಾಗಾರಗಳಲ್ಲಿ ಶವ ಸಂಸ್ಕಾರ ನಡೆಸುವ ಸಿಬ್ಬಂದಿಗಳು ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸುವುದು ಹಾಗೂ ಕೈಗಳ ಶುಚಿತ್ವಕ್ಕೆ ಆದ್ಯತೆ ನೀಡಬೇಕು.

ಸಂಸ್ಕಾರ ಸಮಯದಲ್ಲಿ ಉಪಯೋಗಿಸುವ ಚೀಲ, ಮೃತ ದೇಹ ಇಡುವ ಸ್ಟ್ರಕ್ಚರ್, ಲಿನೇನ್ ಮತ್ತಿತರ ಸಲಕರಣೆಗಳಿಗೆ ಸೋಂಕು ನಿವಾರಣಾ ದ್ರವ ಸಿಂಪಡಿಸಬೇಕು.

ಶವ ಸಾಗಿಸುವ ಚಿರಶಾಂತಿ ವಾಹನವನ್ನು ಸಂಸ್ಕಾರದ ನಂತರ ಸೋಂಕು ನಿವಾರಣಾ ದ್ರವದಿಂದ ಶುಚಿಗೊಳಿಸುವುದು, ಕೊರೊನಾ ಸೋಂಕಿತ ಶವ ಸಂಸ್ಕಾರದ ಸಂದರ್ಭದಲ್ಲಿ ಈ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಬಂಧಪಟ್ಟ ವಲಯ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಆರೋಗ್ಯ ಪರಿವೀಕ್ಷಕರು ಪರಿಶೀಲನೆ ನಡೆಸುವಂತೆ ರಂದೀಪ್ ಸೂಚನೆ ನೀಡಿದ್ದಾರೆ.

# ಪ್ರೋತ್ಸಾಹ ಧನ:
ಕೊರೊನಾ ಸೋಂಕಿನಿಂದ ಮೃತಹೊಂದಿದ ಶವ ಸಂಸ್ಕಾರಕ್ಕೆ ತಗುಲುವ ದಹನ ಶುಲ್ಕ 250ರೂ.ಗಳಿಗೆ ವಿನಾಯಿತಿ ನೀಡಲಾಗಿದೆ. ಶವ ಸಂಸ್ಕಾರಕ್ಕೆ ಬಳಸುವ ಪ್ರತಿ ಚಟ್ಟಕ್ಕೆ 900ರೂ., ಸಂಸ್ಕಾರದ ನಂತರ ಬೂದಿಯನ್ನು ಸಂಗ್ರಹಿಸುವ ಮಡಿಕೆಗೆ 100ರೂ.ಗಳನ್ನು ಪಾವತಿಸಬೇಕಿದೆ.

ಶವ ಸಂಸ್ಕಾರ ನಡೆಸುವ ಸಿಬ್ಬಂದಿಗಳಿಗೆ ಪ್ರತಿ ದಹನ ಕ್ರಿಯೆಗೆ 500ರೂ.ಗಳ ಪ್ರೋತ್ಸಾಹ ಧನ ನೀಡಲು ಬಿಬಿಎಂಪಿ ತೀರ್ಮಾನಿಸಿದೆ. ಶವ ಸಂಸ್ಕಾರ ನಡೆಸುವ ಸಿಬ್ಬಂದಿಗಳಿಗೆ ಪ್ರತಿ ತಿಂಗಳ ದಹನ ಕ್ರಿಯೆಗಳ ಆಧಾರದ ಮೇಲೆ ಡಿಸಿ ಬಿಲ್ ಮೂಲಕ ಈ ಪ್ರೋತ್ಸಾಹ ಧನ ನೀಡಲಾಗುವುದು ಎಂದು ರಂದೀಪ್ ತಿಳಿಸಿದ್ದಾರೆ.

Facebook Comments

Sri Raghav

Admin