ದೇಶದಲ್ಲಿ ಮುಂದುವರೆದ ಕೊರೊನಾ ಹಾವಳಿ, 686 ಸಾವು, 21,393 ಸೋಂಕಿತರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ,ಏ.23-ಜಗತ್ತಿಗೇ ಸವಾಲಾಗಿರುವ ಕೊರೊನಾ ವೈರಸ್ ಅಟ್ಟಹಾಸ ಭಾರತದಲ್ಲಿ ಇಂದೂ ಕೂಡ ಮತ್ತಷ್ಟು ತೀವ್ರಗೊಂಡಿದೆ. ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಮೃತರ ಸಂಖ್ಯೆ 700ರ ಸನಿಹದಲ್ಲಿರುವುದ ಆತಂಕಕಾರಿಯಾಗಿದೆ. ಮತ್ತೊಂದಡೆ 21,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ.

ಕೇಂದ್ರ ಆರೋಗ್ಯ ಸಚಿವಾಲಯದ ನಿನ್ನೆ ಮಧ್ಯರಾತ್ರಿವರೆಗಿನ ಅಧಿಕೃತ ವರದಿ ಪ್ರಕಾರ, ಡೆಡ್ಲಿ ವೈರಸ್ ಈವರೆಗೆ ದೇಶಾದ್ಯಂತ 681 ಜನರನ್ನು ಬಲಿ ಪಡೆದಿದ್ದು, ಸೋಂಕಿತರ ಸಂಖ್ಯೆ 21,393ಕ್ಕೇರಿದೆ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 16,454 ಈವರೆಗೆ 4,257 ಮಂದಿ ಗುಣಮುಖರಾಗಿ ಮನೆಗಳಿಗೆ ಮರಳಿದ್ದಾರೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ತಾಸುಗಳ ಅವಧಿಯಲ್ಲಿ ಒಟ್ಟು 47 ಮಂದಿಯನ್ನು ಕೊರೊನಾ ಬಲಿ ಪಡೆದಿದೆ.

ನಿನ್ನೆ ಸಂಜೆಯಿಂದ ಇಂದು ನಸುಕಿನವರೆಗಿನ ಮಾಹಿತಿ ಪ್ರಕಾರ, ಒಟ್ಟು 29 ಸಾವುಗಳು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ 18, ಗುಜರಾತ್ 8, ರಾಜಸ್ತಾನ ಇಬ್ಬರು ಮತ್ತು ದೆಹಲಿಯಲ್ಲಿ ಒಬ್ಬರು ಬಲಿಯಾಗಿದ್ದಾರೆ. ಈವರೆಗೆ ಸಂಭವಿಸಿರುವ 681 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ ಒಟ್ಟು 269 ಸಾವುಗಳು ವರದಿಯಾಗಿವೆ.

ನಂತರದ ಸ್ಥಾನಗಳಲ್ಲಿ ಗುಜರಾತ್ (103), ಮಧ್ಯಪ್ರದೇಶ (80), ದೆಹಲಿ (48), ರಾಜಸ್ತಾನ(27), ಆಂದ್ರಪ್ರದೇಶ (23), ತೆಲಂಗಾಣ(23), ಉತ್ತರ ಪ್ರದೇಶ (21), ತಮಿಳುನಾಡು (18), ಕರ್ನಾಟಕ (17), , ಪಂಜಾಬ್ (16), ಪಶ್ಚಿಮ ಬಂಗಾಳದಲ್ಲಿ (15) ರಾಜ್ಯಗಳಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಐದು, ಕೇರಳ ಮತ್ತು ಹರಿಯಾಣ ತಲಾ ಮೂರು, ಜಾರ್ಖಂಡ್ ಮತ್ತು ಬಿಹಾರ ತಲಾ ಎರಡು, ಮೇಘಾಲಯ, ಹಿಮಾಚಲ ಪ್ರದೇಶ, ಒಡಿಶಾ ಮತ್ತು ಅಸ್ಸಾಂ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.
ಮತ್ತೊಂದು ಮೂಲಗಳ ಪ್ರಕಾರ ಈವರೆಗೆ ದೇಶದ ವಿವಿಧೆಡೆ 693 ಸಾವುಗಳು ಸಂಭವಿಸಿವೆ.

ಇನ್ನು ಹಲವು ರಾಜ್ಯಗಳಲ್ಲಿ ಕಳೆದ 12 ತಾಸುಗಳ ಅವಧಿಯಲ್ಲಿ ಹೊಸ ಸೋಂಕು ಮತ್ತು ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ. ರಾಜಸ್ತಾನದಲ್ಲಿ ಇಂದು ಬೆಳಗ್ಗೆವರೆಗೆ 47 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.

ಇದರೊಂದಿಗೆ ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಪೀಡಿತರ ಸಂಖ್ಯೆ 1,936ಕ್ಕೇರಿದೆ.  ಇನ್ನೂ ಕೆಲವು ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆಯೂ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

Facebook Comments

Sri Raghav

Admin