4 ಲಕ್ಷ ಸನಿಹದಲ್ಲಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜೂ.5-ಅಗೋಚರ ವೈರಾಣು ವಿಶ್ವಕ್ಕೆ ಮಹಾಮಾರಿಯಾಗಿ ಕಾಡುತ್ತಿದ್ದು, ಪೀಡೆ ಪಿಡುಗಿಗೆ ಸಾವಿನ ಸಂಖ್ಯೆ 4 ಲಕ್ಷ ಸನಿಹದಲ್ಲಿದೆ. . ಡೆಡ್ಲಿ ಕೊರೊನಾ ಹಾವಳಿಯಿಂದ ಜಗತ್ತಿನ ನಾನಾ ದೇಶಗಳಲ್ಲಿ ಸೋಂಕು ಮತ್ತು ಸಾವು ಸಂಖ್ಯೆಯಲ್ಲಿ ಮತ್ತೆ ಭಾರೀ ಏರಿಕೆ ಕಂಡುಬಂದಿದೆ. ಈ ಹೆಮ್ಮಾರಿ ತೊಲಗುವ ಯಾವುದೇ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿಲ್ಲ.

ವಿಶ್ವದ ಸುಮಾರು 250 ದೇಶಗಳಲ್ಲಿ ಕೋವಿಡ್-19 ವೈರಸ್‍ಗೆ ಈವರೆಗೆ 3.94 ಲಕ್ಷ ಮಂದಿ ಬಲಿಯಾಗಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ 67 ಲಕ್ಷಕ್ಕೇರಿದೆ. ಅಲ್ಲದೇ ಇನ್ನೂ 55,458 ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ. ನಾಳೆ ವೇಳೆಗೆ ಸಾವಿನ ಸಂಖ್ಯೆ 4 ಲಕ್ಷ ಮತ್ತು ಗೋಗಿಗಳ ಪ್ರಮಾಣ 70 ಲಕ್ಷ ದಾಟುವ ಆತಂಕವಿದೆ.

ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ.. ವಿಶ್ವದಲ್ಲಿ ಈವರೆಗೆ 32,52,378 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಗುಣಮುಖರಾಗಿದ್ದಾರೆ. ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ಈವರೆಗೆ 3,93,227 ಮಂದಿ ಸಾವಿಗೀಡಾಗಿದ್ದು, 67,03,095 ಸೋಂಕು ಪ್ರಕರಣಗಳು ವರದಿಯಾಗಿವೆ.

ಅಮೆರಿಕ, ಬ್ರೆಜಿಲ್, ರಷ್ಯಾ, ಸ್ಪೇನ್, ಮತ್ತು ಇಂಗ್ಲೆಂಡ್ – ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿದ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ ಭಾರೀ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಲ್ಲಿ ಇಟಲಿ, ಭಾರತ, ಫ್ರಾನ್ಸ್, ಜರ್ಮನಿ, ಮತ್ತು ಟರ್ಕಿ ದೇಶಗಳಿವೆ. ಅತಿ ಹೆಚ್ಚು ಸೋಂಕು ಮತ್ತು ಸಾವು ಪಟ್ಟಿಯಲ್ಲಿ ಈ ಹಿಂದೆ 9ನೇ ಸ್ಥಾನದಲ್ಲಿದ್ದ ಭಾರತ ಫ್ರಾನ್ಸ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ 7ನೇ ಸ್ಥಾನದಲ್ಲಿದೆ. ವಿಶ್ವದ ಇತರ 110 ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿರುವುದು ಗಮನಾರ್ಹ.

ಏಷ್ಯಾ ಖಂಡದಲ್ಲಿ ಚೀನಾ, ದಕ್ಷಿಣ ಕೊರಿಯಾ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್ ಕೇಂದ್ರ ಬಿಂದು ಚೀನಾದ ವುಹಾನ್ ನಗರದಲ್ಲಿಯೂ ಹೊಸ ಪಾಸಿಟಿವ್ ಕೇಸ್‍ಗಳು ಕಂಡುಬರುತ್ತಿವೆ. ಅಮೆರಿಕ, ಯುರೋಫ್, ಆಫ್ರಿಕಾ ಖಂಡಗಳ ಅನೇಕ ರಾಷ್ಟ್ರಗಳೂ ಕೂಡ ವೈರಸ್ ಹಾವಳಿಯಿಂದ ಕಂಗೆಟ್ಟಿವೆ.

ಜೂನ್‍ನಲ್ಲಿ ವಿಶ್ವದಾದ್ಯಂತ ಕೊರೊನಾ ವೈರಸ್ ಹಾವಳಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಆರೋಗ್ಯ ತಜ್ಞರು ಮನ್ಸೂಚನೆ ನೀಡಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಸೋಂಕು ಮತ್ತು ಸಾವು ಪ್ರಕರಣಗಳು ಉಲ್ಬಣಗೊಳ್ಳುತ್ತಿದೆ. ಮುಂದೇನು ಎಂಬ ಪ್ರಶ್ನೆ ಜಗತ್ತಿನ ಜನರನ್ನು ಕಾಡುತ್ತಿದೆ.

Facebook Comments