ಭಾರತದಲ್ಲಿ ಅಬ್ಬರಿಸುತ್ತಿದೆ ಕೊರೋನಾ, ಒಂದೇ ದಿನ 9,887 ಪಾಸಿಟಿವ್ ಕೇಸ್, 294 ಡೆತ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 6-ದೇಶದಲ್ಲಿ ವಿನಾಶಕಾರಿ ಕೊರೊನಾ ವೈರಸ್ ಹಾವಳಿ ಆತಂಕಕಾರಿ ಮಟ್ಟದಲ್ಲಿ ಉಲ್ಬಣಗೊಂಡಿದ್ದು, ದೇಶದ ಜನತೆ ಪ್ರಾಣ ಭೀತಿಯಿಂದ ಮತ್ತಷ್ಟು ಹೆದರಿ ಕಂಗಲಾಗಿದ್ದಾರೆ. 24 ತಾಸುಗಳ ಅವಧಿಯಲ್ಲಿ ಹೊಸ ದಾಖಲೆ ಮಟ್ಟದಲ್ಲಿ ಅಂದರೆ ಅತ್ಯಧಿಕ 9.887 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 294 ರೋಗಿಗಳು ಬಲಿಯಾಗಿದ್ದಾರೆ. ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 2.37 ಲಕ್ಷಕ್ಕೇರಿದ್ದು, ಒಟ್ಟು 6,650 ಮಂದಿ ಮೃತಪಟ್ಟಿದ್ದಾರೆ.

ಪರಿಸ್ಥಿತಿ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಇನ್ನೆರಡು ದಿನಗಳಲ್ಲಿ ಭಾರತವು ಈಗಿರುವ ಆರನೇ ಸ್ಥಾನದಿಂದ ಐದನೇ ಸ್ಥಾನಕ್ಕೇರಲಿದೆ. ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ದೇಶದಲ್ಲಿ ಸತತ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ 9,000 ದಾಟಿದ್ದು ನಿನ್ನೆ ಒಂದೇ ದಿನ 9,887 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ನಿನ್ನೆ 9,851 ಮತ್ತು ಮೊನ್ನೆ 9,304 ಸೋಂಕು ಕೇಸ್‍ಗಳು ವರದಿಯಾಗಿದೆ.

ಇದು ವಿಶ್ವದಲ್ಲೇ ಮೂರನೇ ಅಧಿಕ ಸೋಂಕು ಪ್ರಕರಣವಾಗಿದೆ. ರಷ್ಯಾ ಮತ್ತು ಬ್ರೆಜಿಲ್, ಸೋಂಕು ತೀವ್ರ ಹೆಚ್ಚಳದ ದೇಶಗಳಲ್ಲಿ ಒಂದು ಮತ್ತು ಎರಡನೇ ಸ್ಥಾನದಲ್ಲಿದೆ. ಹೆಮ್ಮಾರಿ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಹೋರಾಟ ನಡೆಸುತ್ತಿದ್ದರೂ ಹೆಮ್ಮಾರಿಯ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ಜೂನ್ ತಿಂಗಳ ಆರನೇ ದಿನವೂ ಆತಂಕಕಾರಿ ಮಟ್ಟದಲ್ಲಿ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ. ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ 6,950 ಮತ್ತು ಸೋಂಕು ಬಾಧಿತರ ಸಂಖ್ಯೆ 2.41 ಲಕ್ಷ ತಲುಪುವ ಆತಂಕವಿದೆ.

ದೇಶದಲ್ಲಿ ಒಂದೇ ದಿನ 9,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಇದು ಸತತ ಮೂರನೇ ದಿನ. ಸತತ 16 ದಿನ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೇ 7,000ಕ್ಕೂ ಅಧಿಕ ಪಾಸಿಟಿವ್ ಕೇಸ್‍ಗಳು ಪತ್ತೆಯಾದ ಒಂಭತ್ತನೇ ದಿನವಾಗಿದ್ದು ದೇಶದ ಗಂಭೀರ ಸ್ಥಿತಿಗೆ ಸಾಕ್ಷಿಯಾಗಿದೆ. ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಸತತ ಏಳನೇ ದಿನ 8,000ಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದೆ.

24 ತಾಸುಗಳ ಅವಧಿಯಲ್ಲಿ 9,887 (ಗುರುವಾರ 9,851, ಬುಧವಾರ 9,304, ಮಂಗಳವಾರ 8.910 ಸೋಮವಾರ 8,171, ಭಾನುವಾರ 8,932, ಶನಿವಾರ 8,380, ಶುಕ್ರವಾರ 7.964, ಗುರುವಾರ 7,466, ಬುಧವಾರ 6,566 ಮಂಗಳವಾರ 6,387, ಸೋಮವಾರ 6,535, ಭಾನುವಾರ 6,977, ಶನಿವಾರ 6,767, ಶುಕ್ರವಾರ 6,654, ಮತ್ತು ಗುರುವಾರ 6,088 ಕೇಸ್‍ಗಳು) ಜನರಿಗೆ ಸೋಂಕು ದೃಢಪಟ್ಟಿದೆ.

ಸಾಂಕ್ರಾಮಿಕ ರೋಗ ಉಲ್ಬಣದಲ್ಲಿ ನಿರಂತರ 16 ದಿನದ ಭಾರೀ ಜಿಗಿತ ಇದಾಗಿದೆ. ಅಲ್ಲದೇ ಕಳೆದ ಎರಡು ವಾರಗಳಲ್ಲಿ 13 ದಿವಸಗಳಿಂದಲೂ 6,500ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 294 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 6,642ಕ್ಕೇರಿದೆ ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 2,36,657 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

24 ಗಂಟೆಗಳಲ್ಲಿ ದೇಶದ ವಿವಿಧೆಡೆ ಸಂಭವಿಸಿದ 294 ಮರಣ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ 139, ದೆಹಲಿ 58, ಗುಜರಾತ್ 35, ಉತ್ತರಪ್ರದೇಶ ಮತ್ತು ತಮಿಳುನಾಡು ತಲಾ 12, ಪಶ್ಚಿಮ ಬಂಗಾಳ 11, ತೆಲಂಗಾಣ 8, ಮಧ್ಯಪ್ರದೇಶ 7, ರಾಜಸ್ತಾನ 5, ಆಂದ್ರಪ್ರದೇಶ 3 ಹಾಗೂ ಜಮ್ಮು-ಕಾಶ್ಮೀರ, ಓಡಿಶಾ, ಪಂಜಬ್, ಜರ್ಖಂಡ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಒಂದು ಸಾವು ಪ್ರಕÀರಣ ವರದಿಯಾಗಿದೆ.

ಈವರೆಗೆ ಸಂಭವಿಸಿರುವ 6,642 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದ್ದು, ಅಲ್ಲಿ ಮರಣ ಪ್ರಮಾಣ 3,000 ಸನಿಹದಲ್ಲಿದೆ… ಆ ರಾಜ್ಯದಲ್ಲಿ ಈವರೆಗೆ 2,849 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿಯೂ ಭಾರೀ ಏರಿಕೆ ಕಂಡುಬಂದಿದೆ. 80,000ಕ್ಕೂ ಹೆಚ್ಚು ಮಂದಿ ರೋಗ ಪೀಡಿತರಾಗಿದ್ದಾರೆ.
ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 1,190 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ದೆಹಲಿ (708), ಮಧ್ಯಪ್ರದೇಶ (384), ಪಶ್ಚಿಮ ಬಂಗಾಳ (366), ಉತ್ತರ ಪ್ರದೇಶ (257), ತಮಿಳುನಾಡು (232), ರಾಜಸ್ಥಾನ (218), ತೆಲಂಗಾಣ (113), ಆಂಧ್ರಪ್ರದೇಶ (73), ಕರ್ನಾಟಕ(57), ಹಾಗೂ ಪಂಜಬ್ (48) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ 36, ಬಿಹಾರ 29, ಹರಿಯಾಣ 24, ಕೇರಳ 14, ಉತ್ತರಾಖಂಡ 11, ಒಡಿಶಾ 8, ಜÁರ್ಖಂಡ್ 7, ಹಿಮಾಚಲ ಪ್ರದೇಶ ಮತ್ತು ಚಂಡೀಗಢ ತಲಾ 5, ಅಸ್ಸಾಂ ನಾಲ್ಕು, ಛತ್ತೀಸ್‍ಗಢ 2 ಹಾಗೂ ಪುದುಚೇರಿ, ಲಡಾಕ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.  ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 1,15,942ಕ್ಕೇರಿದೆ. ಈವರೆಗೆ 1,14,672 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.48.20ರಷ್ಟು ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.  ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣದಲ್ಲಿ ಚೀನಾವನ್ನು ಹಿಂದಿಕ್ಕಿರುವ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್-19 ಪ್ರಕರಣಗಳಲ್ಲಿ ಏಳನೇ ಸ್ಥಾನಕ್ಕೇರಿದೆ. ಒಂಭತ್ತನೇ ಸ್ಥಾನದಲ್ಲಿದ್ದ ಭಾರತ ಫ್ರಾನ್ಸ್, ಜರ್ಮನಿಯನ್ನು ಹಿಂದಿಕ್ಕಿ ಏಳನೇ ಸ್ಥಾನದಲ್ಲಿದೆ. ಭಾರತದಲ್ಲಿ ಕೊರೊನಾ ಪ್ರಕರಣಗಳ ತೀವ್ರತೆಯನ್ನು ಗಮನಿಸಿದರೆ ಇನ್ನೆರಡು ದಿನಗಳಲ್ಲಿ ದೇಶವು ಆರನೇ ಸ್ಥಾನದಿಂದ ಐದನೇ ಸ್ಘಾನಕ್ಕೇರುವ ಸಾಧ್ಯತೆ ಇದೆ.

ಜೂನ್ ಕೊನೆ ವಾರಗಳಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಲಿದೆ ಎಂಬ ವರದಿಗಳಿದ್ದು, ಅದಕ್ಕೆ ಮುನ್ಸೂಚನೆಯಾಗಿ ಮೊದಲ ವಾರದಲ್ಲೇ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದು ಆಘಾತಕಾರಿಯಾಗಿದೆ.

Facebook Comments