ಚಿತ್ರರಂಗಕ್ಕೆ ಮತ್ತೆ ಕೊರೊನಾಘಾತ..!

ಈ ಸುದ್ದಿಯನ್ನು ಶೇರ್ ಮಾಡಿ

-ಎನ್.ಎಸ್.ರಾಮಚಂದ್ರ
ಅಪೂರ್ಣವಾಗಿ ಉಳಿದಿದ್ದ ಸಿನಿಮಾಗಳು ಹಾಗೂ ಹೊಸ ಸೀರಿಯಲ್‍ಗಳ ಚಿತ್ರೀಕರಣವನ್ನು ಮುಂದುವರಿಸಬಹುದು ಎಂದು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ ನಂತರ ಚಿತ್ರರಂಗದಲ್ಲಿ ಅಲ್ಪ ಪ್ರಮಾಣದ ಚಟುವಟಿಕೆ ಕಂಡುಬಂತು. ಸ್ಟಾರ್ ಕಲಾವಿದರು ಮಾತ್ರ ಚಿತ್ರೀಕರಣದಲ್ಲಿ ಭಾಗವಹಿಸಲು ಒಲವು ತೋರಲಿಲ್ಲ. ಈಗ ಲಾಕ್‍ಡೌನ್ ನೆಪದಲ್ಲಿ ಎಲ್ಲವೂ ಪುನಃ ಸ್ಥಗಿತ.

ಸೀರಿಯಲ್‍ಗಳ ಚಿತ್ರೀಕರಣವೂ ತಾತ್ಕಾಲಿಕವಾಗಿ ಸ್ತಬ್ಧಗೊಂಡಿದೆ.
ಕೋವಿಡ್-19ರ ರಣಭೀಕರ ದಾಳಿಯಿಂದ ಮತ್ತೊಮ್ಮೆ ಲಾಕ್‍ಡೌನ್ ಘೋಷಣೆ ಆಗಿದೆ. ಚಿತ್ರೀಕರಣದಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದ ಜನಪ್ರಿಯ ಕಲಾವಿದರು ಈಗ ಲಾಕ್‍ಡೌನ್ ನೆಪ ಹೇಳಿ ತಮ್ಮ ತಮ್ಮ ಮನೆಗಳಲ್ಲೇ ಸುರಕ್ಷಿತವಾಗಿ ಉಳಿಯುವ ನಿರ್ಧಾರ ಮಾಡಿದ್ದಾರೆ.

ಕೋವಿಡ್ ಹಾವಳಿ ಪ್ರಾರಂಭವಾದ ನಂತರ ಇಲ್ಲಿಯವರೆಗೆ ಭಾರತೀಯ ಚಿತ್ರರಂಗದ ಸುಮಾರು 25 ಮಂದಿ ಅಸುನೀಗಿದ್ದಾರೆ. ಚಿರಂಜೀವಿ ಸರ್ಜಾ, ಬುಲೆಟ್ ಪ್ರಕಾಶ್, ಮೈಕಲ್ ಮಧು, ಮಿಮಿಕ್ರಿ ರಾಜಗೋಪಾಲ್, ಎಸ್.ಎಲ್.ಎನ್.ಮೂರ್ತಿ, ಸುಶೀಲ್‍ಗೌಡ, ಎಂ.ವಿ.ಸುಬ್ರಹ್ಮಣ್ಯ, ಮೋಹನ್ ವಕ್ಕೋಡಿ, ನಾಗೇಶ್‍ಕುಮಾರ್ (ಕುಂದಾಪುರ), ರಿಷಿ ಕಪೂರ್, ಇರ್ಫಾನ್ ಖಾನ್, ವಾಜಿದ್, ಸುಶಾಂತ್ ಸಿಂಗ್ ರಜಪೂತ್, ಸರೋಜ್‍ಖಾನ್, ಜಗದೀಪ್, ಪೆÇೀಕುರಿ ರಾಮರಾವ್ ಮುಂತಾದವರನ್ನು ಉದಾಹರಿಸಬಹುದು.

ಇವರ ಪೈಕಿ ಹಲವರ ಸಾವಿಗೆ ಕೋವಿಡ್ ಹೊರತಾಗಿ ಬೇರೆ ಬೇರೆ ಕಾರಣಗಳಿವೆ. ಆದರೂ ಕೋವಿಡ್ ಆತಂಕದ ನಡುವೆ ಇವರೆಲ್ಲ ಪ್ರಾಣ ಕಳೆದುಕೊಂಡರು ಎಂಬ ವಾಸ್ತವವು ಚಿತ್ರರಂಗದವರನ್ನು ಕಾಡುತ್ತಿದೆ. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಆರಾಧ್ಯ ಮುಂತಾದವರು ಕೋವಿಡ್ ವ್ಯಾಧಿ ಪೀಡಿತರಾದ ನಂತರವಂತೂ ಇತರ ಕಲಾವಿದರ ಜಂಘಾಬಲ ಉಡುಗಿ ಹೋಗಿದೆ.

ಕನ್ನಡದ ಸ್ಟಾರ್ ಕಲಾವಿದರಾದ ಸುದೀಪ್ (ಫ್ಯಾಂಟಮ್), ಯಶ್ (ಕೆಜಿಎಫ್-2), ಶ್ರೀಮುರಳಿ (ಮದಗಜ), ಗಣೇಶ್ (ಗಾಳಿಪಟ-2) ಮುಂತಾದವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಧೈರ್ಯ ಮಾಡಿದ್ದರು.

ಫ್ಯಾಂಟಮ್ ಚಿತ್ರದ ಚಿತ್ರೀಕರಣವು ಹೈದರಾಬಾದ್‍ನಲ್ಲಿ, ಕೆಜಿಎಫ್-2ಗೆ ಕರ್ನಾಟಕದಲ್ಲಿ, ಮದಗಜಕ್ಕೆ ಬೆಂಗಳೂರಿನ ಮಿನರ್ವಮಿಲ್ ಆವರಣದಲ್ಲಿ ಚಿತ್ರೀಕರಣ ಮುಂದುವರಿಸಲು ನಿರ್ಧರಿಸಲಾಗಿತ್ತು. ನೀನಾಸಂ ಸತೀಶ್ ಅವರ ದಸರಾ ಎಂಬ ಚಿತ್ರದ ಶೂಟಿಂಗ್ ಕೂಡ ಮುಂದುವರಿಯಬೇಕಾಗಿತ್ತು.

ಇಂತಹ ಎಲ್ಲ ಯೋಜನೆಗಳೂ ಏರುಪೇರಾಗಿವೆ. ನಾಳೆ ಏನು, ಹೇಗೆ ಎಂಬಂತಹ ಗೊಂದಲಮಯ ಪರಿಸ್ಥಿತಿ ಉಂಟಾಗಿದ್ದು, ಎಲ್ಲರನ್ನೂ ಕೊರೊನಾ ರಕ್ಕಸನು ಕಟ್ಟಿಹಾಕಿದ್ದಾನೆ.

ಒಂದು ವಾರ ಅವಧಿಯ ಲಾಕ್‍ಡೌನ್ ಮುಗಿದ ಮರುಕ್ಷಣದಿಂದಲೇ ಸಿನಿಮಾ ಚಟುವಟಿಕೆಗಳು ಪ್ರಾರಂಭವಾಗಲು ಸಾಧ್ಯವಿಲ್ಲ. ನಿರ್ಮಾಪಕರ ಹತ್ತಿರ ಹಣಕಾಸು ಮತ್ತಿತರ ಸಂಪನ್ಮೂಲಗಳಿದ್ದರೂ ಕೂಡ ಕಲಾವಿದರಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ.

ಕೆಜಿಎಫ್-2 ಚಿತ್ರದ ಶೂಟಿಂಗ್ ಎಂದಿನಿಂದ ಮುಂದುವರಿಯಲಿದೆ ಎಂಬುದನ್ನು ಈಗಲೇ ತಿಳಿಸಲು ಸಾಧ್ಯವಿಲ್ಲ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳುತ್ತಾರೆ.

ಈ ನಡುವೆ ಚಿತ್ರಮಂದಿರಗಳ ಪರಿಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿದೆ. ಕೆಲ ಸಿನಿಮಾಗಳು ಥಿಯೇಟರ್‍ನಲ್ಲಿ ತೆರೆ ಕಾಣುವ ಮೊದಲೇ ಡಿಜಿಟಲ್ ಪ್ಲಾಟ್‍ಫಾರಂನಲ್ಲಿ ಪ್ರದರ್ಶನವಾಗುತ್ತಿರುವುದು ಥಿಯೇಟರ್‍ಗಳಿಗೆ ದೊಡ್ಡ ಹಿನ್ನಡೆಯಾಗಿದೆ.

ಕರ್ನಾಟಕದಲ್ಲಿ ಸುಮಾರು 615 ಏಕಪರದೆ ಚಿತ್ರಮಂದಿರಗಳು ಹಾಗೂ ನೂರಾರು ಮಲ್ಟಿಪ್ಲೆಕ್ಸ್‍ಗಳಿದ್ದು, ಇವುಗಳ ಪರಿಸ್ಥಿತಿ ಡೋಲಾಯಮಾನವಾಗಿದೆ. ಭಾರೀ ಬಜೆಟ್ ಸಿನಿಮಾಗಳೂ ಕೂಡ ಡಿಜಿಟಲ್ ಮೀಡಿಯಾ ಕಡೆ ಒಲವು ತೋರುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಚಿತ್ರವೊಂದನ್ನು ಥಿಯೇಟರ್‍ನಲ್ಲಿ ಬಿಡುಗಡೆ ಮಾಡುವ ಸಲುವಾಗಿ ಸೂಕ್ತ ಪ್ರಚಾರ ಮಾಡಬೇಕಾಗುತ್ತದೆ. ಈ ಬಾಬತ್ತಿಗೆ ಹತ್ತಾರು ಲಕ್ಷ ಖರ್ಚಾಗುತ್ತದೆ. ಡಿಜಿಟಲ್ ಮೀಡಿಯಾ ವಿಷಯದಲ್ಲಿ ಈ ಸಮಸ್ಯೆ ಇಲ್ಲ. ಆದರೆ, ಇದಕ್ಕೆ ಹೋಲಿಸಿದರೆ ಚಿತ್ರಮಂದಿರದಿಂದ ಬರುವ ಆದಾಯ ಹೆಚ್ಚು. ಹಾಗಾಗಿ ಯುವರತ್ನ, ರಾಬರ್ಟ್, ಪೆÇಗರು, ಸಲಗ, ಕೋಟಿಗೊಬ್ಬ-3 ಮುಂತಾದ ಸಿನಿಮಾಗಳ ನಿರ್ಮಾಪಕರು ಡಿಜಿಟಲ್ ಮೀಡಿಯಾದತ್ತ ಒಲವು ತೋರುವುದಿಲ್ಲ. ಪರಿಸ್ಥಿತಿ ತಿಳಿಗೊಂಡು ಚಿತ್ರಮಂದಿರಗಳ ಬಾಗಿಲು ತೆರೆಯುವವರೆಗೂ ಕಾಯುತ್ತೇವೆ ಅನ್ನುತ್ತಾರೆ.

ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಕೃಷ್ಣ ಅವರು ಹೇಳುವ ಪ್ರಕಾರ ವಿವಿಧ ಸಿನಿಮಾಗಳ ಮೇಲೆ ಹೂಡಿರುವ ಸುಮಾರು 600-700 ಕೋಟಿ ಹಣ ನಿಂತ ನೀರಿನಂತಾಗಿದೆ.

ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷನಾದ ನಾನು ಎರಡು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ. ಥಿಯೇಟರ್‍ಗಳ ಪುನರಾರಂಭಕ್ಕೆ ಅನುಮತಿ ಕೊಡಿ ಎಂದು ಕೇಳಲಿಲ್ಲ. ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ ಪರಿಹಾರ ನೀಡಿ ಎಂದು ಮನವಿ ಮಾಡಿದೆ.

ಆದರೆ, ನಮ್ಮ ಮನವಿಗೆ ಸರ್ಕಾರ ಇದುವರೆಗೂ ಸ್ಪಂದಿಸಿಲ್ಲ. ಸದ್ಯದಲ್ಲೇ ಥಿಯೇಟರ್‍ಗಳನ್ನು ನಡೆಸಲು ಅನುಮತಿ ಕೊಡಬಹುದು ಎಂದು ಭಾವಿಸಿದ್ದೆವು. ಆದರೆ, ಎರಡನೆ ಲಾಕ್‍ಡೌನ್‍ನಿಂದಾಗಿ ಆ ಆಸೆಯೂ ಬತ್ತಿಹೋಗಿದೆ ಎನ್ನುತ್ತಾರೆ.

ಈ ನಡುವೆ ಅಕ್ರಮವಾಗಿ ಡ್ರೈವ್ ಇನ್ ಥಿಯೇಟರ್ ದಂಧೆ ಪ್ರಾರಂಭವಾಗಿದೆ. ಒಂದು ವಾರದಿಂದ ನಡೆಯುತ್ತಿರುವ ಈ ಕಾನೂನು ಬಾಹಿರ ಚಟುವಟಿಕೆಯನ್ನು ತಡೆಯಲು ಸರ್ಕಾರವು ಕ್ರಮ ತೆಗೆದುಕೊಂಡಿಲ್ಲ. ನಾವು ತಿಂಗಳಿಗೆ ಶೇ.2ರಷ್ಟು ಆಸ್ತಿ ತೆರಿಗೆ ಕಟ್ಟುತ್ತೇವೆ. ಲಾಕ್‍ಡೌನ್‍ನಿಂದಾಗಿ ನಮಗೆ ಆದಾಯವೇ ಇಲ್ಲ.

ಆದರೂ ತೆರಿಗೆ ಕಟ್ಟಬೇಕು. ಲಾಕ್‍ಡೌನ್ ಮಾಡಿ ಎಂದು ಹೇಳುವ ಸರ್ಕಾರವು ತೆರಿಗೆ ಕಟ್ಟಿ ಎಂದು ಕೂಡ ಹೇಳುತ್ತದೆ. ಇದ್ಯಾವ ನ್ಯಾಯ? ಒಟ್ಟಿನಲ್ಲಿ ನಮ್ಮನ್ನು ಕೇಳುವವರೇ ಇಲ್ಲ ಎಂದು ಕೆ.ವಿ.ಚಂದ್ರಶೇಖರ್ ಹೇಳುತ್ತಾರೆ.

ತುಸು ಚೇತರಿಸಿಕೊಳ್ಳಬಹುದು ಎಂಬ ಆಶಾಭಾವನೆಯ ನಡುವೆಯೇ ಚಿತ್ರರಂಗದ ಮೇಲೆ ಮತ್ತೊಂದು ಕೊರೊನಾಘಾತ ಆಗಿರುವುದು ವಿಪರ್ಯಾಸ.

ಸುದೀರ್ಘ ಬಿಡುವಿನ ನಂತರ ಚಿತ್ರರಂಗಕ್ಕೆ ತಕ್ಕಮಟ್ಟಿನ ಆಶಾಕಿರಣ ಮೂಡಿತ್ತು. ಭಾರೀ ಬಂಡವಾಳದ ಸಿನಿಮಾಗಳ ಚಿತ್ರೀಕರಣ ಮುಂದುವರಿಸಲು ಸಕಲ ಸಿದ್ಧತೆ ನಡೆದಿತ್ತು. ಸ್ಟಾರ್ ಕಲಾವಿದರು ಕೂಡ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಮನಸ್ಸು ಮಾಡಿದ್ದರು. ಆದರೆ, ಇದಕ್ಕೆಲ್ಲ ಬ್ರೇಕ್ ಬಿದ್ದಿದೆ.

ಮತ್ತೆ ವೇದಿಕೆ ಆಗಿರುವ ಲಾಕ್‍ಡೌನ್‍ನಿಂದ ಚಿತ್ರರಂಗದವರಿಗೆ ದಾರಿ ಕಾಣದಂತಾಗಿದೆ. ಅವರು ಹೂಡಿರುವ ಕೋಟಿಗಟ್ಟಲೆ ಬಂಡವಾಳವು ನಿಂತ ನೀರಿನಂತಾಗಿದೆ. ಈ ಸಂಕಷ್ಟ ಯಾವಾಗ ಬಗೆಹರಿಯುತ್ತದೆಯೋ ಎಂದು ಅವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

Facebook Comments

Sri Raghav

Admin