ಸಮುದಾಯ ಭವನ, ಕಲ್ಯಾಣ ಮಂಟಪಗಳಲ್ಲಿ ಕಾರ್ಮಿಕರಿಗೆ ವಸತಿ ಊಟೋಪಚಾರ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.29- ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಪ್ರತಿ ವಾರ್ಡಿಗೆ ಒಂದರಂತೆ ಸಮುದಾಯ ಭವನ ಅಥವಾ ಕಲ್ಯಾಣ ಮಂಟಪಗಳಲ್ಲಿ ಕಾರ್ಮಿಕರಿಗೆ ವಸತಿ ಊಟೋಪಚಾರ ಒದಗಿಸಲು ಸರ್ಕಾರ ಆದೇಶಿಸಿದೆ.

ಕಟ್ಟಡ ಮತ್ತು ವಲಸೆ ಕಾರ್ಮಿಕರಿಗಾಗಿ ಎಲ್ಲ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ‌ ಕಲ್ಯಾಣ ಮಂಟಪಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು. ಹಾಗೆಯೇ ಪ್ರತಿ ತಾಲೂಕಿಗೆ ಒಂದರಂತೆ ಕಲ್ಯಾಣ ಮಂಟಪವನ್ನು ಕಾರ್ಮಿಕರ ವಸತಿ ಹಾಗೂ ಊಟೋಪಚಾರಕ್ಕೆ ಒದಗಿಸಬೇಕೆಂದು ಕಾರ್ಮಿಕ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸೂಚಿಸಲಾಗಿದೆ.

ಜಿಲ್ಲಾಧಿಕಾರಿಗಳು ಕಲ್ಯಾಣ ಮಂಟಪ, ಸಮುದಾಯ ಭವನಗಳನ್ನು ವಶಕ್ಕೆ ಪಡೆದು ಕಾರ್ಮಿಕರಿಗೆ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಕಲ್ಪಿಸಲು ನಿರ್ದೇಶಿಸಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಕರ್ನಾಟಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯ ಅನುದಾನದಲ್ಲಿ ಭರಿಸಲು ಸೂಚಿಸಲಾಗಿದೆ.

ರೋಗವು ತೀವ್ರತರವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ. ವಲಸೆ ಕಾರ್ಮಿಕರನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಈಗಾಗಲೇ ಹೊರಡಿಸಿರುವ ಆದೇಶವನ್ನು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ಕಾರ್ಮಿಕ ಇಲಾಖೆಯ ಉಪ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Facebook Comments

Sri Raghav

Admin