ಬೆಂಗಳೂರಿನಿಂದ ಹಳ್ಳಿಗಳತ್ತ ‘ಕೊರೋನಾ ಪಯಣ’, ಆತಂಕದಲ್ಲಿ ಜನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.14- ನಗರದಲ್ಲಿದ್ದ ಜನ ಏಕಾಏಕಿ ಹಳ್ಳಿಗಳಿಗೆ ಧಾವಿಸಿರುವುದರಿಂದ ಕೊರೋನಾ ಸೋಂಕು ಗ್ರಾಮೀಣ ಪ್ರದೇಶಗಳಿಗೆ ವ್ಯಾಪಿಸುವ ಆತಂಕ ಎದುರಾಗಿದೆ.

ಅಷ್ಟೋ ಇಷ್ಟೋ ಸುರಕ್ಷಿತವಾಗಿದ್ದ ಹಳ್ಳಿ ಜನರು ಈಗ ನಗರ ಪ್ರದೇಶಗಳಿಂದ ವಲಸೆ ಬರುತ್ತಿರುವವರಿಂದ ಸೋಂಕಿನ ಭೀತಿಗೆ ಒಳಗಾಗಿದ್ದಾರೆ. ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಮತ್ತೊಂದು ಸುತ್ತಿನ ಲಾಕ್‍ಡೌನ್ ಕೊರೋನಾ ನಿಯಂತ್ರಿಸುವ ಬದಲು ಸೋಂಕನ್ನು ಮತ್ತಷ್ಟು ವಿಸ್ತರಿಸುವ ಅಪಾಯ ಎದುರಾಗಿದೆ.

ರಾಜ್ಯದಲ್ಲಿ ಈಗಾಗಲೇ ಪ್ರತಿದಿನ ಎರಡೂವರೆ ಸಾವಿರ ಸೋಂಕಿನ ಪ್ರಕರಣಗಳು ಕಂಡು ಬರುತ್ತಿದ್ದವು. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಒಂದೂವರೆ ಸಾವಿರದಷ್ಟು ಪ್ರಕರಣಗಳು ಪ್ರತಿದಿನ ಬೆಳಕಿಗೆ ಬರುತ್ತಿದ್ದವು.

ಈಗ ರಾಜಧಾನಿ ಬೆಂಗಳೂರಿನಿಂದ ಲಾಕ್‍ಡೌನ್ ಪರಿಣಾಮ ಮತ್ತೆ ಲಕ್ಷಾಂತರ ಮಂದಿ ತಮ್ಮ ತಮ್ಮ ಊರುಗಳತ್ತ ತೆರಳಿರುವ ಪರಿಣಾಮ ಈ ಸೋಂಕು ನಗರದಿಂದ ಗ್ರಾಮೀಣ ಪ್ರದೇಶಕ್ಕೆ ತೀವ್ರವಾಗಿ ವ್ಯಾಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸೋಂಕು ನಿಯಂತ್ರಣಕ್ಕಾಗಿ ಆರಂಭದಲ್ಲಿ ಲಾಕ್‍ಡೌನ್ ಮಾಡಿದಾಗ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಲಾಕ್‍ಡೌನ್ ನಿಯಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.

ಪಂಚಾಯತಿ ಮಟ್ಟದಲ್ಲಿ ಜನರೇ ಮುಂದೆ ನಿಂತು ಯಾರನ್ನೂ ಒಳ ಬಿಡದಂತೆ, ಯಾರನ್ನೂ ಹೊರ ಹೋಗದಂತೆ ಎಚ್ಚರವಹಿಸಿ ಸೋಂಕನ್ನು ನಿಯಂತ್ರಿಸಿದ್ದರು.

ಲಾಕ್‍ಡೌನ್ ತೆರವಾದಂತೆ ಹೊರಗಿನಿಂದ ಬರುವವರು ಹೆಚ್ಚಾದಂತೆ ಸೋಂಕು ಕ್ರಮೇಣ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿತ್ತು. ಆದರೂ ಗ್ರಾಮೀಣ ಪ್ರದೇಶದ ಜನ ಹೆಚ್ಚು ಮುತುವರ್ಜಿ ವಹಿಸಿ ಸೋಂಕಿನಿಂದ ಸಾವು ನೋವುಗಳಾಗದಂತೆ ಎಚ್ಚರ ವಹಿಸಿದ್ದರು.

ಯಾರಾದರೂ ಹೊಸಬರು ಊರಿಗೆ ಬಂದರೆ ಅವರನ್ನು ಗಮನಿಸಿ ಪ್ರತ್ಯೇಕವಾಗಿ ಇರಿಸುವ ವ್ಯವಸ್ಥೆ ಮಾಡುತ್ತಿದ್ದರು. ಬಹುತೇಕವಾಗಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ನಿಯಂತ್ರಣದಲ್ಲಿತ್ತು.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ವ್ಯಾಪಕವಾಗಿ ಹಬ್ಬಿತ್ತು. ಈಗ ಸರ್ಕಾರ ಸೋಂಕು ನಿಯಂತ್ರಣಕ್ಕಾಗಿ ಒಂದು ವಾರ ಕಾಲ ಮತ್ತೊಂದು ಸುತ್ತಿನ ಲಾಕ್‍ಡೌನ್ ಘೋಷಣೆ ಮಾಡಿದೆ.

ಬದುಕಿನ ಆತಂಕದ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ನಗರ ತೊರೆದು ಹಳ್ಳಿಗಳಿಗೆ ತೆರಳಿದ್ದು ಈಗ ಅಲ್ಲಿ ಬದುಕು ಕಟ್ಟಿಕೊಳ್ಳುವ ಸಾಹಸದಲ್ಲಿದ್ದಾರೆ. ಜೊತೆ ಜೊತೆಗೆ ಸೋಂಕನ್ನು ಒಯ್ದಿದ್ದಾರೆ.

ತಮ್ಮ ಹಳ್ಳಿಗಳಿಗೆ ಹೋದಾಗ ಸೂಕ್ತವಾಗಿ ಕ್ವಾರಂಟೈನ್‍ಗೆ ಒಳಗಾಗಿ ಮಾರ್ಗಸೂಚಿಗಳನ್ನು ಪಾಲಿಸಿದರೆ ಸೋಂಕನ್ನು ನಿಯಂತ್ರಿಸಬಹುದು. ಆದರೆ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕಳೆದೆರಡು ದಿನಗಳಿಂದ ಬೆಂಗಳೂರಿನಿಂದ ಬಸ್, ಗೂಡ್ಸ್ ವಾಹನ, ಆಟೋ, ಟೆಂಪೋ, ಮಿನಿ ಲಾರಿ, ಟ್ಯಾಕ್ಸಿ, ಕಾರು, ಬೈಕುಗಳು ಸೇರಿದಂತೆ ಸುಮಾರು 65 ಸಾವಿರಕ್ಕೂ ಹೆಚ್ಚು ವಾಹನಗಳ ಮೂಲಕ 3 ಲಕ್ಷಕ್ಕೂ ಹೆಚ್ಚು ಜನ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಇವರಲ್ಲಿ ಎಷ್ಟು ಜನರಿಗೆ ಸೋಂಕಿದೆ.

# ಎಷ್ಟು ಜನರು ಶಂಕಿತರಿದ್ದಾರೆ ಯಾರಿಗೆ ಗೊತ್ತು?
ಬೀದರ್, ಬಳ್ಳಾರಿ, ಗುಲ್ಬರ್ಗಾ, ಚಾಮರಾಜನಗರ, ಚಿತ್ರದುರ್ಗ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ ಗ್ರಾಮಗಳಿಗೆ ಜನ ತೆರಳಿದ್ದಾರೆ.

ಇಂದೂ ಕೂಡ ತೆರಳಲಿದ್ದಾರೆ. ಬದುಕಿನ ಬಂಡಿ ಎಳೆಯಲಾರದೆ ತಮ್ಮ ಹಳ್ಳಿಗಳಿಗೇನೋ ಜನ ಹೋಗುತ್ತಿದ್ದಾರೆ. ಆದರೆ ಹರಡುವ ಸೋಂಕನ್ನು ತಡೆಗಟ್ಟಲು ಸಾಧ್ಯವೇ? ಈಗ ಹಳ್ಳಿ ಜನರಲ್ಲಿ ಗೊಂದಲ, ಆತಂಕ ಶುರುವಾಗಿದೆ.

ಇತ್ತ ಜನರನ್ನು ಬಿಟ್ಟುಕೊಳ್ಳದಿರುವಂತೆಯೂ ಇಲ್ಲ; ಕಟ್ಟಿಕೊಂಡು ಹೆಣಗುವಂತೆಯೂ ಇಲ್ಲ. ಧರ್ಮ ಸಂಕಟದಲ್ಲಿ ಇದ್ದಾರೆ. ಒಂದು ವಾರದ ತಾತ್ಕಾಲಿಕ ಲಾಕ್‍ಡೌನ್ ಮುಂದುವರೆಯುವ ಸಾಧ್ಯತೆಯೂ ಇದೆ.

ಇತ್ತ ಸೋಂಕಿನ ಪ್ರಮಾಣ ಸುನಾಮಿಯಂತೆ ನುಗ್ಗುತ್ತಿದೆ. ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಪಟ್ಟಣಗಳಂತೆ ಗ್ರಾಮೀಣ ಪ್ರದೇಶಗಳಲ್ಲೂ ವ್ಯಾಪಿಸಿದರೆ ದೇವರೇ ಗತಿ.

Facebook Comments

Sri Raghav

Admin