ಬೆಂಗಳೂರಲ್ಲಿ ಕೊರೋನಾ ರಣಕೇಕೆ, ಗಲ್ಲಿಗಲ್ಲಿಯೂ ಸೀಲ್‍ಡೌನ್, ಊರಿನತ್ತ ಕಾಲ್ಕಿತ್ತ ಜನ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.11- ಜನರು ಬೆಂಗಳೂರು ತೊರೆಯುತ್ತಿರುವುದು ಮುಂದುವರೆದಿದೆ. ಕೊರೋನಾ ಸೋಂಕು ಮತ್ತು ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ನಗರದಲ್ಲಿ ಗಲ್ಲಿ ಗಲ್ಲಿಗೂ ಸೀಲ್‍ಡೌನ್, ಬ್ಯಾರಿಕೇಡ್‍ಗಳು ರಾರಾಜಿಸುತ್ತಿರುವುದು ಬೀದಿ ಬೀದಿಯಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನ ಈ ಬೆಂಗಳೂರು ಸಹವಾಸವೇ ಬೇಡ ಎಂದು ತಮ್ಮ ಲಗೇಜುಗಳೊಂದಿಗೆ ನಗರವನ್ನು ತೊರೆಯುತ್ತಿದ್ದಾರೆ.

ಕಳೆದ ವಾರದಿಂದ ವಲಸೆ ಹೋಗುತ್ತಿರುವವರ ಪ್ರಮಾಣ ಹೆಚ್ಚಾಗಿತ್ತು. ಅದು ನಿರಂತರವಾಗಿ ಮುಂದುವರೆದಿದೆ. ಇಂದು ಕೂಡ ಬೆಂಗಳೂರನ್ನು ಖಾಲಿ ಮಾಡಿಕೊಂಡು ಹೋಗುತ್ತಿರುವವರ ಸಂಖ್ಯೆಯೇನೂ ಕಡಿಮೆಯಿರಲಿಲ್ಲ. ಬೆಂಗಳೂರು ನಗರದಲ್ಲಿ ಈಗ ಎಲ್ಲಿ ನೋಡಿದರೂ ಮನೆ ಬಾಡಿಗೆಗೆ ಇದೆ ಎಂಬ ಬೋರ್ಡ್‍ಗಳು ಕಾಣಸಿಗುತ್ತವೆ. ಪ್ರತಿ ಗಲ್ಲಿಗಳಲ್ಲೂ ಈ ಫಲಕಗಳು ರಾರಾಜಿಸುತ್ತಿವೆ.

ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಬೆಂಗಳೂರು ನಗರದಲ್ಲಿ ಬಾಡಿಗೆ ಮನೆ ಸಿಗುವುದೇ ಕಷ್ಟವಾಗಿತ್ತು. ಒಳ್ಳೆಯ ಏರಿಯಾದಲ್ಲಿ ಮನೆ ಮಾಡುವುದು ದುಸ್ತರವಾಗಿತ್ತು. ಯಾವಾಗ ಕೊರೋನಾ ವಕ್ಕರಿಸಿ, ವ್ಯಾಪಿಸಿ ಲಾಕ್‍ಡೌನ್ ಘೋಷಣೆಯಾಗಿ ಬದುಕು ಅತಂತ್ರವಾಯಿತೋ ಜನ ಬೆಂಗಳೂರು ತೊರೆಯಲಾರಂಭಿಸಿದರು.

ಲಾಕ್‍ಡೌನ್ ತೆರವಾದ ಸಂದರ್ಭದಲ್ಲಿ ಹೊರ ರಾಜ್ಯದ ಲಕ್ಷಾಂತರ ಕಾರ್ಮಿಕರು ರಾಜಧಾನಿ ಬೆಂಗಳೂರು ಬಿಟ್ಟು ತಮ್ಮ ರಾಜ್ಯಗಳಿಗೆ ಹಿಂದಿರುಗಿದ್ದರು. ಪರಿಸ್ಥಿತಿ ಈಗ, ಆಗ ಸುಧಾರಿಸಬಹುದು ಎಂದು ನಂಬಿ ಇಲ್ಲೇ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದ ನಮ್ಮ ರಾಜ್ಯದ ವಿವಿಧ ಜಿಲ್ಲೆಯ ಜನರು ಕೂಡ ಈಗ ಭೀತಿಗೊಳಗಾಗಿ ಬೆಂಗಳೂರು ಬಿಡುತ್ತಿರುವ ಕೆಲಸ ಮುಂದುವರೆದೇ ಇದೆ.

ಎಲ್ಲಿ ಏನಾಗುತ್ತದೆಯೋ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆಯೋ ನಮ್ಮ ಬದುಕಿಗೇನು ಮಾಡುವುದು? ಎಂಬ ಭವಿಷ್ಯದ ಚಿಂತನೆಯಲ್ಲಿ ಜನ ತಮ್ಮ ಮಕ್ಕಳ ಮರಿಗಳೊಂದಿಗೆ ಊರು ತೊರೆಯುತ್ತಿದ್ದಾರೆ. ಸರ್ಕಾರ ಲಾಕ್‍ಡೌನ್ ಮಾಡುವುದಿಲ್ಲ. ಯಾರೂ ಬೆಂಗಳೂರು ಬಿಟ್ಟು ಹೋಗಬೇಡಿ.

ನೀವೆಲ್ಲಾ ನಗರ ಬಿಟ್ಟು ಗ್ರಾಮೀಣ ಪ್ರದೇಶಗಳಿಗೆ ಹೋಗುವುದರಿಂದ ಸೋಂಕು ಆ ಭಾಗಕ್ಕೂ ವ್ಯಾಪಿಸುತ್ತದೆ ಎಂಬ ಎಚ್ಚರಿಕೆಯನ್ನು ನೀಡಿರುವುದರ ನಡುವೆಯೂ ಜನರು ತಮ್ಮ ಪ್ರಾಣ ಉಳಿದರೆ ಸಾಕೆಂಬ ನಿಟ್ಟಿನಲ್ಲಿ ಊರು ತೊರೆಯುತ್ತಿದ್ದಾರೆ. ಬಹುತೇಕರ ಬದುಕಿಗೆ ಬೆಂಗಳೂರು ಆಶ್ರಯವಾಗಿದ್ದು ಬಡ ಹಾಗೂ ಮಧ್ಯಮ ವರ್ಗದ ಜನ ಇಲ್ಲಿ ಬದುಕು ಕಟ್ಟಿಕೊಂಡಿದ್ದರು.

ಆಟೋ ಡ್ರೈವರ್, ಟ್ಯಾಕ್ಸಿ ಡ್ರೈವರ್, ಪಾನಿಪುರಿ ವ್ಯಾಪಾರಿಗಳು, ಹಣ್ಣು ತರಕಾರಿ ವ್ಯಾಪಾರಿಗಳಿಗೆಲ್ಲಾ ಆಶ್ರಯವಾಗಿದ್ದ ಬೆಂಗಳೂರಿನಲ್ಲಿ ಈಗ ಕೊರೋನಾ ನಿಯಂತ್ರಣಕ್ಕೆ ಬಾರದ ಪರಿಸ್ಥಿತಿ ಸೃಷ್ಠಿಯಾಗಿರುವುದರಿಂದ ಜನರ ವಲಸೆ ನಿರಂತರವಾಗಿದೆ.

ವಲಸೆ ತಪ್ಪಿಸಲು ಸರ್ಕಾರ ಸಾಕಷ್ಟು ಹರಸಾಹಸ ಪಡುತ್ತಿದೆಯಾದರೂ ಕೂಡ ಜನರ ಮನಸ್ಸಿನ ಆತಂಕವನ್ನು ದೂರ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಮತ್ತು ಸಾವಿನ ಸಂಖ್ಯೆ ಏರುತ್ತಿರುವುದರ ಜೊತೆಗೆ ರಾಜಧಾನಿ ಬೆಂಗಳೂರಿನಲ್ಲೂ ಈ ಪ್ರಮಾಣ ಗಣನೀಯವಾಗಿ ಏರುತ್ತಲೇ ಇದೆ. ಹೀಗಾಗಿ ಹಳ್ಳಿ ಹಳ್ಳಿಗಳಲ್ಲಿ ಬಂದು ಇಲ್ಲಿ ನೆಲೆಸಿದ್ದ ಜನ ತಮ್ಮ ಹಳ್ಳಿಗಳಿಗೆ ಹಿಂದಿರುಗುತ್ತಿದ್ದಾರೆ.

ಐಟಿ-ಬಿಟಿ ನೌಕರರಿಂದ ಹಿಡಿದು ಫುಟ್‍ಪಾತ್ ವ್ಯಾಪಾರಿಗಳವರೆಗೆ ಬಹುತೇಕರು ಈಗಾಗಲೇ ಬೆಂಗಳೂರನ್ನು ಖಾಲಿ ಮಾಡಿರುವುದರಿಂದ ಬಹಳಷ್ಟು ಮನೆಗಳು ಕೂಡ ಖಾಲಿಯಾಗಿಯೇ ಉಳಿದಿವೆ. ಒಂದು ಅಂದಾಜಿನ ಪ್ರಕಾರ 25 ಲಕ್ಷ ಮನೆಗಳು ಬೆಂಗಳೂರಿನಲ್ಲಿದ್ದು ಅರ್ಧಕ್ಕಿಂತ ಹೆಚ್ಚು ಮನೆಗಳಲ್ಲಿ ಬಾಡಿಗೆದಾರರು ವಾಸವಾಗಿದ್ದರು.

ಬೆಂಗಳೂರು ನಗರ ಕಾಸ್ಮೋಪಾಲಿಟನ್ ಸಿಟಿ ಯಾಗಿದ್ದುದರಿಂದ ಮೂಲ ನಿವಾಸಿಗಳಿಗಿಂತ ವಲಸಿಗರೇ ಹೆಚ್ಚಾಗಿದ್ದುದು. ವಲಸಿಗರಿಂದ ನಗರ ತುಂಬಿ ತುಳುಕುತ್ತಿತ್ತು. ಕೊರೋನಾ ಸೋಂಕಿನ ಭೀತಿಯಿಂದ ಬಹುತೇಕರು ಖಾಲಿ ಮಾಡುತ್ತಿದ್ದಾರೆ. ಶೇ. 10ಕ್ಕಿಂತ ಹೆಚ್ಚು ಮನೆಗಳು ಅಂದರೆ 3 ರಿಂದ 4 ಲಕ್ಷ ಮನೆಗಳು ಖಾಲಿಯಾಗಿವೆ ಎಂದು ತಿಳಿದುಬಂದಿದೆ.

ಬಾಡಿಗೆದಾರರನ್ನು ನಂಬಿ ಮಾಲೀಕರು ಬದುಕುತ್ತಿದ್ದರು. ಈಗ ಏಕಾಏಕಿ ಖಾಲಿ ಮಾಡಿಕೊಂಡು ಜನ ತೆರಳುತ್ತಿರುವುದರಿಂದ ಮನೆಗಳು ಖಾಲಿಯಾಗಿ ಉಳಿದು ಅವರಿಗೆ ಬರುವ ಬಾಡಿಗೆಗೂ ಕುತ್ತು ಬಂದಿದೆ. ಒಟ್ಟಾರೆ ಕೊರೋನಾ ಎಲ್ಲರಿಗೂ ಸಂಕಷ್ಟವನ್ನು ತಂದೊಡ್ಡುತ್ತಲೇ ಇದೆ.

Facebook Comments

Sri Raghav

Admin