ಕೊರೋನಾಗೆ ಹೆದರಿ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.26- ನಗರದಲ್ಲಿ ಕೊರೊನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದರೂ ಸಾವಿನ ಪ್ರಮಾಣ ಕಡಿಮೆ ಇದೆ. ಗುಣಮುಖರಾಗುತ್ತಿ ರುವವರು ಹೆಚ್ಚಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೋಂಕು ತಗುಲಿತು ಎಂಬ ಕಾರಣಕ್ಕೆ ಯಾರೂ ದುಡುಕಿನ ನಿರ್ಧಾರ ಕೈಗೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ.

ಸಮಸ್ಯೆ ಬಂದ ಮೇಲೆ ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ತಾಳ್ಮೆ ಇರಬೇಕು. ತೊಂದರೆ ಎದುರಾಯಿತು ಎಂದು ಪ್ರಾಣ ಕಳೆದುಕೊಂಡರೆ ಅದರ ಪರಿಣಾಮವನ್ನು ನಿಮ್ಮ ಕುಟುಂಬದವರೇ ಎದುರಿಸಬೇಕಾಗುತ್ತದೆ. ಹೀಗಾಗಿ ತಪ್ಪು ನಿರ್ಧಾರ ಕೈಗೊಳ್ಳುವ ಮುನ್ನ ಸ್ವಲ್ಪ ಯೋಚಿಸುವುದು ಒಳಿತು.

ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಆಟೋ ಚಾಲಕನೊಬ್ಬ ವಿಕ್ಟೋರಿಯಾ ಆಸ್ಪತ್ರೆಯ ಮೂರನೆ ಮಹಡಿಯ ಕಿಟಕಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಸೋಂಕು ಕಾಣಿಸಿಕೊಂಡ ಕೆಎಸ್‍ಆರ್‍ಪಿ ಹೆಡ್‍ಕಾನ್ಸ್‍ಟೆಬಲ್ ಒಬ್ಬರನ್ನು ಹೋಂ ಕ್ವಾರಂಟೈನ್‍ನಿಂದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಪೊಲೀಸ್ ವಾಹನದಲ್ಲೇ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದರು.

ಮತ್ತೆ ಇದೀಗ 60 ವರ್ಷದ ವೃದ್ಧೆಯೊಬ್ಬರಿಗೆ ಸೋಂಕು ಕಾಣಿಸಿಕೊಂಡು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಸೋಂಕು ತಗುಲಿತು ಎಂಬ ಕಾರಣಕ್ಕೆ ಮಧ್ಯರಾತ್ರಿ ಆಸ್ಪತ್ರೆ ಶೌಚಾಲಯದ ಕಿಟಕಿ ಸರಳಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ದಿನೇ ದಿನೇ ಕೊರೊನಾ ಸೋಂಕು ದ್ವಿಗುಣಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸೋಂಕು ಎಷ್ಟೇ ಉಲ್ಬಣಗೊಂಡರೂ ಸಾವಿನ ಪ್ರಮಾಣ ತೀರಾ ಕಡಿಮೆ.

ಇದರ ಜತೆಗೆ ಕೊರೊನಾ ಮಹಾಮಾರಿ ವಿರುದ್ಧ ಗೆದ್ದು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಹೀಗಾಗಿ ಸೋಂಕಿಗೆ ಹೆದರಿ ಜೀವವನ್ನೇ ಕಳೆದುಕೊಳ್ಳುವಂತಹ ತಪ್ಪು ನಿರ್ಧಾರ ಕೈಗೊಳ್ಳದೆ ಸೋಂಕಿನ ವಿರುದ್ಧ ಗೆದ್ದು ಬೀಗುವ ಆವಶ್ಯಕತೆ ಇದೆ.

Facebook Comments