ಕೊರೊನಾ ಹೊಡೆತದಿಂದ ಆರ್ಥಿಕತೆ ನಿಭಾಯಿಸಲಾಗದೆ ಜರ್ಮನಿಯಲ್ಲಿ ಹಣಕಾಸು ಸಚಿವ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಫ್ರಾಂಕ್‌ಫರ್ಟ್‌ : ವಿಶ್ವದಾದ್ಯಂತ ಕೊರೋನಾ ಮಹಾಮಾರಿ ತನ್ನ ಕ್ರೂರತೆಯಿಂದ ಅಟ್ಟಹಾಸ ಮೆರೆಯುತ್ತಿದ್ದು, ಈಗಾಗಲೇ 32 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಕೊರೊನಾ ಎಫೆಕ್ಟ್ ನಿಂದ ಜಗತ್ತಿನಾದ್ಯಂತ ಹಲವು ದೇಶಗಳ ಆರ್ಥಿಕ ಸ್ಥಿತಿ ಪಾತಾಳಕ್ಕೆ ಕುಸಿದಿದೆ. ಅನೇಕ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ, ಕೊರೊನಾದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಯಲ್ಲಿದ್ದ ಜರ್ಮನಿಯ ಹೆಸ್ಸೆ ರಾಜ್ಯದ ಹಣಕಾಸು ಮಂತ್ರಿ ಥಾಮಸ್‌ ಸ್ಕೇಪರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

54 ವರ್ಷ ವಯಸ್ಸಿನ ಥಾಮಸ್ ಸ್ಕೇಫರ್ ರೈಲ್ವೆ ಹಳಿಗೆ ತಲೆಕೊಟ್ಟು ಸಾವಿಗೀಡಾಗಿದ್ದಾರೆ ಎಂದು ವೈಸ್‌ಬಾಡೆನ್ ಪ್ರಾಸಿಕ್ಯೂಷನ್ ಕಚೇರಿ ಹೇಳಿದೆ. ಈ ವಿಚಾರವನ್ನು ಹೆಸ್ಸೆ ರಾಜ್ಯದ ಪ್ರಧಾನಿ ವೋಲ್ಕರ್ ಬೌಫಿಯರ್ ಖಚಿತಪಡಿಸಿದ್ದಾರೆ. 10 ವರ್ಷಗಳ ಕಾಲ ಹೆಸ್ಸೆಯ ಹಣಕಾಸು ಮುಖ್ಯಸ್ಥರಾಗಿದ್ದ ಥಾಮಸ್ ಸ್ಕೇಫರ್, ಕಂಪನಿಗಳು ಮತ್ತು ಕಾರ್ಮಿಕರು ಕೊರೊನಾದಿಂದ ಉಂಟಾದ ಆರ್ಥಿಕ ಕುಸಿತವನ್ನು ಎದುರಿಸಲು ಹಗಲಿರುಳು ಶ್ರಮಿಸಿದ್ದರು ಎಂದು ವೋಲ್ಕರ್ ಬೌಫಿಯರ್ ಅವರನ್ನು ಸ್ಮರಿಸಿದರು.

ಆತ್ಮಹತ್ಯೆ ಮಾಡಿಕೊಂಡ ಥಾಮಸ್‌ ಸ್ಕೇಪರ್‌ ಜರ್ಮನಿಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದರು. ವೋಲ್ಕರ್ ಬೌಫಿಯರ್‌ನ ಉತ್ತರಾಧಿಕಾರಿ ಎಂದು ಹೆಸ್ಸೆ ರಾಜ್ಯದಲ್ಲಿ ಸ್ಕೇಪರ್‌ ಕರೆಸಿಕೊಳ್ಳುತ್ತಿದ್ದರು. ಥಾಮಸ್ ಸ್ಕೇಫರ್ ಸಿಡಿಯು ಪಕ್ಷದಿಂದ ಆಯ್ಕೆಯಾಗಿದ್ದರು. ಸ್ಕೇಪರ್‌ ತಮ್ಮ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಜರ್ಮನಿಯ ಹಣಕಾಸು ರಾಜಧಾನಿ ಎಂದು ಕರೆಸಿಕೊಳ್ಳುವ ಫ್ರಾಂಕ್‌ಫರ್ಟ ಹೆಸ್ಸೆ ರಾಜ್ಯದಲ್ಲಿಯೇ ಇದೆ. ಅಲ್ಲಿ ಪ್ರಮುಖವಾದ ಡ್ಯುಚ್‌ ಬ್ಯಾಂಕ್ ಮತ್ತು ಕಾಮರ್ಸ್‌ ಬ್ಯಾಂಕ್‌ನ ಪ್ರಧಾನ ಕಚೇರಿಗಳಿವೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಕೂಡ ಫ್ರಾಂಕ್‌ಫರ್ಟ್‌ನಲ್ಲಿದೆ.

ಇನ್ನು ಜರ್ಮನಿಯಲ್ಲಿ ಇದುವರಗೆ 52 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗಿದ್ದು, 400 ಕ್ಕೂ ಜನರು ಸಾವನ್ನಪ್ಪಿದ್ದಾರೆ.

Facebook Comments

Sri Raghav

Admin