ಅಮೆರಿಕದಲ್ಲಿ ಕಂಟ್ರೋಲ್‍ಗೆ ಸಿಗದ ಕೊರೊನಾ, 1.18 ಲಕ್ಷ ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಜೂ. 14-ಕಿಲ್ಲರ್ ಕೋವಿಡ್-19 ವೈರಸ್ ಹೆಮ್ಮಾರಿ ದಾಳಿಯಿಂದ ಹೈರಾಣಾಗಿರುವ ಅಮೆರಿಕನ್ನರಲ್ಲಿ ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಯಾವ ನಿಯಂತ್ರಣಕ್ಕೂ ನಿಲುಕದೇ ಮಹಾಮಾರಿ ಅಟ್ಟಹಾಸ ಮುಂದುವರಿದಿದೆ.

ಅಮೆರಿಕದಲ್ಲಿ ಮೃತರ ಸಂಖ್ಯೆ 1.18 ಲಕ್ಷ ಹಾಗೂ ರೋಗ ಪೀಡಿತರ ಸಂಖ್ಯೆ 21.43 ಲಕ್ಷ ಸನಿಹದಲ್ಲಿದೆ..ಅಗೋಚರ ವೈರಸ್ ವಿಶ್ವದ ಮಹಾ ಶಕ್ತಿಶಾಳಿ ದೇಶವನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದು, ಸೋಂಕು ಮತ್ತು ಸಾವು ಪ್ರಮಾಣದಲ್ಲಿ ಏರಿಳಿತಗಳ ನಡುವೆಯೂ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈವರೆಗೆ 1,17,528 ಮಂದಿ ಮೃತಪಟ್ಟಿದ್ದು, ಇಂದು ಬೆಳಗಿನ ಮಾಹಿತಿ ಪ್ರಕಾರ ಮರಣ ಪ್ರಮಾಣ 1.18 ಲಕ್ಷ ದಾಟುತ್ತಿದೆ. ಅಲ್ಲದೇ ಈವರೆಗೆ 21,42,224 ಅಮೆರಿಕನ್ನರು ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ.

ಇವರಲ್ಲಿ ಸುಮಾರು 17,000 ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಮುಂದುವರಿದಿದೆ. . ಅಮೆರಿಕದಲ್ಲಿ ಈವರೆಗೆ ಸುಮಾರು 8.54,106 ಕೊರೊನಾ ಸೋಂಕು ರೋಗಿಗಳು ಚೇತರಿಸಿಕೊಂಡಿದ್ಧಾರೆ/ಗುಣಮುಖರಾಗಿದ್ದಾರೆ.

ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕ ಕೊರೊನಾ ಸೋಂಕು ಮತ್ತು ಸಾವಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ.

ಸಾಂಬಾ ರಾಷ್ಟ್ರದಲ್ಲಿ ಸುಮಾರು 8.51 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 42,791ಕ್ಕೇರಿದೆ. ನಂತರದ ಸ್ಥಾನಗಳಲ್ಲಿ ರಷ್ಯಾ, ಭಾರತ ಮತ್ತು ಬ್ರಿಟನ್ ದೇಶಗಳಿವೆ.

Facebook Comments

Sri Raghav

Admin