ಕೊರೊನಾ ಡೆತ್ ಮೀಟರ್ : 4.52 ಲಕ್ಷ ಬಲಿ, 84.08 ಲಕ್ಷ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜೂ.18- ಲೋಕಕಂಟಕ ಕೋವಿಡ್-19 ದಾಳಿಯಿಂದ ಬಹುತೇಕ ದೇಶಗಳು ಕಂಗೆಟ್ಟಿದ್ದು, ಸಾವಿನ ಸಂಖ್ಯೆ 4.51 ಲಕ್ಷ ಹಾಗೂ ಸೋಂಕಿತರ ಸಂಖ್ಯೆ 84.07 ಲಕ್ಷ ಮೀರಿದೆ.  ಇದರ ನಡುವೆಯೂ ವಿಶ್ವದಲ್ಲಿ ಸುಮಾರು 44.17 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ಈವರೆಗೆ 4,51,439 ಮಂದಿ ಸಾವಿಗೀಡಾಗಿದ್ದು, 84,07,373 ಸೋಂಕು ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 35.38 ಲಕ್ಷ ದಾಟಿದೆ. ಅಲ್ಲದೇ ಇನ್ನೂ 54,450 ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ.

ನಾಳೆ ವೇಳೆಗೆ ಸಾವಿನ ಸಂಖ್ಯೆ 4.55 ಲಕ್ಷ ಮತ್ತು ಸಾಂಕ್ರಾಮಿಕ ರೋಗಿಗಳ ಪ್ರಮಾಣ 86 ಲಕ್ಷ ದಾಟುವ ಆತಂಕವಿದೆ. ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ. ವಿಶ್ವದಲ್ಲಿ ಈವರೆಗೆ 44,17,509 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಗುಣಮುಖರಾಗಿದ್ದಾರೆ.

ಅಮೆರಿಕ, ಬ್ರೆಜಿಲ್, ರಷ್ಯಾ, ಭಾರತ ಮತ್ತು ಇಂಗ್ಲೆಂಡ್ ಕೊರೊನಾ ಕೇಸ್‍ಗಳಲ್ಲಿ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ. ಭಾರೀ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಲ್ಲಿ ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನಿ, ಮತ್ತು ಟರ್ಕಿ ದೇಶಗಳಿವೆ.  ಏಷ್ಯಾ ಖಂಡದಲ್ಲಿ ಚೀನಾ, ದಕ್ಷಿಣ ಕೊರಿಯಾ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕೊರೊನಾ ವೈರಸ್ ಕೇಂದ್ರ ಬಿಂದು ಚೀನಾದ ವುಹಾನ್ ನಗರದಲ್ಲಿಯೂ ಹೊಸ ಪಾಸಿಟಿವ್ ಕೇಸ್‍ಗಳು ದಿನೇ ದಿನೇ ಹೆಚ್ಚಾಗಿವೆ. ಚೀನಾದಲ್ಲಿ ಕೊರೊನಾ ವೈರಸ್ ಮರು ದಾಳಿ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿ ಬೀಜಿಂಗ್ ಸೇರಿದಂತೆ ಅನೇಕ ನಗರಗಳಲ್ಲಿ ವಿಮಾನ ಮತ್ತು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಅಮೆರಿಕ, ಯುರೋಪ್, ಆಫ್ರಿಕಾ ಖಂಡಗಳ ಅನೇಕ ರಾಷ್ಟ್ರಗಳೂ ಕೂಡ ವೈರಸ್ ಹಾವಳಿಯಿಂದ ಕಂಗೆಟ್ಟಿವೆ. ಕೆಲವು ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾಗಿದೆ. ನ್ಯೂಜಿಲೆಂಡ್ ಸೇರಿದಂತೆ ಕಿಲ್ಲರ್ ಕೊರೊನಾ ಸೋಂಕಿನಿಂದ ಸಂಪೂರ್ಣ ಮುಕ್ತವಾಗಿವೆ.

Facebook Comments