ಬೆಂಗಳೂರಿಗೆ ಆಗಸ್ಟ್‌ನಲ್ಲಿ ಕಾದಿದೆ ಕೊರೋನಾ ಗಂಡಾಂತರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.31- ನಗರದಲ್ಲಿ ಕೊರೊನಾ ಮಹಾಮಾರಿ ರಣಕೇಕೆ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ 50 ಸಾವಿರದತ್ತ ಮುಖ ಮಾಡಿದ್ದು, ಆಗಸ್ಟ್ ತಿಂಗಳಿನಲ್ಲಿ ಸೋಂಕಿಗೆ ತುತ್ತಾಗುವವರ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ನಿನ್ನೆಯವರೆಗೆ ನಗರದಲ್ಲಿ 48,769 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 50 ಸಾವಿರ ಗಡಿ ದಾಟಲು 1231 ಕೇಸುಗಳು ಮಾತ್ರ ಬಾಕಿ ಇವೆ. ಇಂದು ಸಂಜೆ ವೇಳೆಗೆ ಬಿಡುಗಡೆಯಾಗಲಿರುವ ಹೆಲ್ತ್ ಬುಲೆಟಿನ್‍ನಲ್ಲಿ 1500ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜುಲೈ ಅಂತ್ಯದ ವೇಳೆಗೆ ಸೋಂಕಿತರ ಸಂಖ್ಯೆ 50 ಸಾವಿರ ಗಡಿ ದಾಟಲಿದೆ.

ಜುಲೈ ಅಂತ್ಯದ ವೇಳೆಗೆ ನಗರದಲ್ಲಿ 30 ರಿಂದ 35 ಸಾವಿರ ಪಾಸಿಟಿವ್ ಕೇಸ್‍ಗಳು ದಾಖಲಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಆದರೆ, ತಜ್ಞರ ಅಂದಾಜನ್ನು ಮೀರಿ ಸೋಂಕಿತರ ಸಂಖ್ಯೆ 50 ಸಾವಿರ ಮೀರಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕಳೆದ ಮಾರ್ಚ್‍ನಿಂದ ಜೂನ್‍ವರೆಗೆ ದಾಖಲಾಗಿದ್ದು ಕೇವಲ 4555 ಪ್ರಕರಣಗಳು ಮಾತ್ರ. ಜುಲೈ ತಿಂಗಳಲ್ಲೇ 45 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಜನ ಎಚ್ಚರಿಕೆ ವಹಿಸುತ್ತಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದೆ.

# ಆಗಸ್ಟ್ ಡೇಂಜರ್:
ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚಾಗುತ್ತಿರುವುದರ ಜತೆಗೆ ಹವಾಮಾನ ಬದಲಾವಣೆಯಿಂದ ಜ್ವರ, ಶೀತ, ಕೆಮ್ಮಿನಂತಹ ಕಾಯಿಲೆಗಳು ಕಾಣಿಸಿಕೊಂಡು ಅವರಿಗೂ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ಜನ ನಾಳೆಯಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ನಗರದ 177 ವಾರ್ಡ್‍ಗಳಲ್ಲಿ ನೂರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. 10 ವಾರ್ಡ್‍ಗಳಲ್ಲಿ 80ಕ್ಕೂ ಅಧಿಕ ಮಂದಿಗೆ, ಉಳಿದ 10 ವಾರ್ಡ್‍ಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನಗರದಲ್ಲಿ ಇನ್ನೂ 36,224 ಕೊರೊನಾ ಪ್ರಕರಣಗಳು ಆಕ್ಟೀವ್ ಆಗಿವೆ.

ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವವರು ಕ್ವಾರಂಟೈನ್‍ನಲ್ಲಿದ್ದು, ಅವರಲ್ಲೂ ಪಾಸಿಟಿವ್ ಕಾಣಿಸಿಕೊಂಡರೆ ಆಗಸ್ಟ್ ತಿಂಗಳು ಡೇಂಜರ್ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

20 ಸಾವಿರದತ್ತ ಕಂಟೈನ್ಮೆಂಟ್ ಝೋನ್: ಜುಲೈ ಆರಂಭದಲ್ಲಿ ಕೇವಲ 550 ಇದ್ದ ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ ತಿಂಗಳಾಂತ್ಯಕ್ಕೆ 20 ಸಾವಿರದತ್ತ ದಾಪುಗಾಲಿಡುತ್ತಿದೆ.

ಇದುವರೆಗೂ ನಗರದಲ್ಲಿ 19,649 ಕಂಟೈನ್ಮೆಂಟ್ ಝೋನ್‍ಗಳಿದ್ದು, ಇವುಗಳಲ್ಲಿ 12,668 ಝೋನ್‍ಗಳು ಆಕ್ಟೀವ್ ಆಗಿವೆ. ಇದುವರೆಗೂ 3,07,586 ಜನರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, 48,769 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಶೇ.17.34ರಷ್ಟು ಕೇಸ್‍ಗಳು ಪಾಸಿಟಿವ್ ಆಗಿರುವುದರಿಂದ ಕಂಟೈನ್ಮೆಂಟ್ ಝೋನ್‍ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

Facebook Comments

Sri Raghav

Admin