ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶತಕ ದಾಟಿದ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಳ್ಳೇಗಾಲ, ಜು.6 – ಚಾಮರಾಜನಗರ ಗಡಿ ಜಿಲ್ಲಾಯಲ್ಲಿ ನಿನ್ನೆ 19 ಮಂದಿಗೆ ಕೊರೊನಾ ಸೋಂಕು ಇರುವುದು ವರದಿಯಾಗಿದ್ದು, ಇದುವರೆಗೆ ಒಟ್ಟು 102 ಪ್ರಕರಣಗಳು ದಾಖಲಾಗುವ ಮೂಲಕ ಶತಕ ದಾಟಿದೆ.

ಜಿಲ್ಲಾಯಲ್ಲಿ ಜೂ.8 ರಂದು ಕೋವಿಡ್-19 ಪ್ರಕರಣ ಮೊದಲ ವರದಿಯಾಗಿತ್ತು. ಶನಿವಾರದವರೆಗೆ 83 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. 27 ದಿನಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ಶತಕ ದಾಟಿದೆ.

606 ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 587 ಮಾದರಿಗಳ ವರದಿ ನೆಗೆಟಿವ್ ಬಂದಿದೆ. 776 ಗಂಟಲು ದ್ರವ ಮಾದರಿಗಳನ್ನು ಕೋವಿಡ್ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಒಟ್ಟು 1204 ಮಂದಿಯ ವರದಿ ಬರಬೇಕಿದೆ.

ಈ ಪೈಕಿ ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ ತಲಾ ಒಬ್ಬರಿಗೆ, ಯಳಂದೂರು ತಾಲ್ಲೂಕಿನಲ್ಲಿ ಇಬ್ಬರು, ಹನೂರು ತಾಲ್ಲೂಕಿನಲ್ಲಿ ಇಬ್ಬರಿಗೆ, ಉಳಿದ 13 ಮಂದಿ ಗುಂಡ್ಲುಪೇಟೆಯವರು.

ಹನೂರು ತಾಲ್ಲೂಕಿನ ಲೊಕ್ಕನಹಳ್ಳಿಯ 24 ವರ್ಷದ ಗರ್ಭಿಣಿ, ಚಾಮರಾಜನಗರದ ಎರಡು ವರ್ಷದ ಹೆಣ್ಣು ಮಗು ಸೇರಿದಂತೆ 19 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲಾಯಲ್ಲಿ ಇದುವರೆಗೆ 102 ಮಂದಿಗೆ ಕೋವಿಡ್-19 ತಗುಲಿದೆ. ನಾಲ್ವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. 98 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೂ.8ರಂದು ಮುಂಬೈನಿಂದ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿಯಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲಾಯ ಮೊದಲ ಪ್ರಕರಣ. ಜೂ.19ರಂದು ಗುಂಡ್ಲುಪೇಟೆ ಚಾಲಕರೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಎರಡನೆ ಪ್ರಕರಣ. ಅದಾಗಿ ಎರಡು ವಾರಗಳಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 100 ದಾಟಿದೆ.

ಸದ್ಯ ಜಿಲ್ಲಾಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ 98 ಹಾಸಿಗೆಗಳಿದ್ದು, ಅಷ್ಟೇ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ತಗುಲಿದ್ದರೂ, ರೋಗ ಲಕ್ಷಣ ಇಲ್ಲದವರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ವರ್ಗಾಯಿಸಲು ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿದೆ.

ಇದರ ಜತೆಗೆ 17 ಮಂದಿ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದು, ಅವರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ವರದಿ ನೆಗೆಟಿವ್ ಬಂದರೆ ಅವರು ಮನೆಗೆ ತೆರಳಲಿದ್ದಾರೆ.

ಸಂಪರ್ಕಿತರ ಸಂಖ್ಯೆ 980ಕ್ಕೆ: ಈ ಮಧ್ಯೆ, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಸಂಖ್ಯೆ 980ಕ್ಕೆ ಏರಿದೆ. ನಿನ್ನೆ 106 ಮಂದಿಯನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಲಾಗಿದ್ದು, ಇವರ ಒಟ್ಟು ಸಂಖ್ಯೆ 543ಕ್ಕೆ ತಲುಪಿದೆ.

ಹೊಸದಾಗಿ 35 ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದ್ದು, ಒಟ್ಟು ಸಂಖ್ಯೆ 437ಕ್ಕೆ ತಲುಪಿದೆ. ಎಲ್ಲರನ್ನೂ ಮನೆ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದು, ಆರೋಗ್ಯದ ಮೇಲೆ ಜಿಲ್ಲಾಡಳಿತ ನಿಗಾ ಇಟ್ಟಿದೆ.

ಹನೂರು ತಾಲ್ಲೂಕಿನ ಗೋಪಿಶೆಟ್ಟಿಯೂರು, ಲೊಕ್ಕನಹಳ್ಳಿ ಹಾಗೂ ಮಂಗಲ ಗ್ರಾಮಗಳಲ್ಲಿ ಕೋವಿಡ್-19 ದೃಢಪಟ್ಟಿರುವುದರಿಂದ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಮೂರು ಗ್ರಾಮಗಳಲ್ಲಿ ಸೋಂಕಿತರು ಇದ್ದ ಬಡಾವಣೆಯನ್ನು ಸೀಲ್‍ಡೌನ್ ಮಾಡಿದ್ದಾರೆ.

ಗೋಪಿಶೆಟ್ಟಿಯೂರು ಗ್ರಾಮದ ನಿವಾಸಿಗೆ ಮೂರು ದಿನಗಳ ಹಿಂದೆ ಜ್ವರ ಕಂಡು ಬಂದಿದ್ದರಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾಗ ಚಿಕಿತ್ಸೆ ನೀಡಿ ಆತನ ರಕ್ತ ಹಾಗೂ ಗಂಟಲಿನ ದ್ರವ ಪರೀಕ್ಷೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

ಶುಕ್ರವಾರ ಪಾಸಿಟಿವ್ ವರದಿ ಬಂದಿರುವುದರಿಂದ ಆತನಿಗೆ ಚಿಕಿತ್ಸೆ ನೀಡಿದ್ದ ರಾಮಾಪುರ ವೈದ್ಯಾಧಿಕಾರಿ ಸೇರಿದಂತೆ 4 ಜನ ವೈದ್ಯಕೀಯ ಸಿಬ್ಬಂದಿಗಳನ್ನು ದ್ವಿತೀಯ ಸಂಪರ್ಕದಲ್ಲಿದ್ದವರು ಎಂದು ಗುರುತಿಸಿ ಕೋವಿಡ್ ತಪಾಸಣೆ ನಡೆಸಿ, ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಹಿಸಿಕೊಡಲಾಗಿತ್ತು. ಇವರ ವರದಿ ನೆಗಟಿವ್ ಬಂದಿದೆ.

Facebook Comments