ಆಗಸ್ಟ್ ಮೊದಲ ದಿನವೇ ಕೊರೊನಾ ಮಹಾಸ್ಫೋಟ, 24 ಗಂಟೆಯಲ್ಲಿ 57,118 ಪಾಸಿಟಿವ್, 764 ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಆ.1- ಆರೋಗ್ಯ ತಜ್ಞರ ಮುನ್ನೆಚ್ಚರಿಕೆಯಂತೆಯೇ ಆಗಸ್ಟ್‍ನಲ್ಲಿ ಭಾರೀ ಗಂಡಾಂತರದ ಸ್ಪಷ್ಟ ಲಕ್ಷಣಗಳು ಗೋಚರಿಸತೊಡಗಿವೆ. ಈ ತಿಂಗಳ ಮೊದಲ ದಿನವೇ ಕಿಲ್ಲರ್ ಕೊರೊನಾ ಮಹಾ ಸ್ಫೋಟದ ರೀತಿಯಲ್ಲಿ ಉಲ್ಬಣಗೊಂಡಿದ್ದು, 24 ತಾಸುಗಳಲ್ಲಿ ಹೊಸ ದಾಖಲೆ ಪ್ರಮಾಣದಲ್ಲಿ ಅಂದರೆ 57,000ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ.

ಜುಲೈ ತಿಂಗಳಾದ್ಯಂತ ದೇಶದಲ್ಲಿ ಅಬ್ಬರಿಸಿದ್ದ ಡೆಡ್ಲಿ ಕೊರೊನಾ ಆಗಸ್ಟ್‍ನಲ್ಲಿ ದೊಡ್ಡ ಮಟ್ಟದಲ್ಲಿ ಅಪಾಯ ತಂದೊಡ್ಡುವ ಭೀತಿ ಎದುರಾಗಿದೆ. ಸೋಂಕಿನ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿರುವ ಹೆಮ್ಮಾರಿ ನಿನ್ನೆಯಿಂದ ಇಂದು ಬೆಳಗ್ಗೆವರೆಗೆ 57,118 ಜನರಿಗೆ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿದೆ.

ಭಾರತದಲ್ಲಿ ಸೋಂಕು ಪೀಡಿತರ ಪ್ರಮಾಣ 17 ಲಕ್ಷ ಮತ್ತು ಮೃತರ ಸಂಖ್ಯೆ 37,000 ಸನಿಹದಲ್ಲಿರುವುದು ಆಘಾತಕಾರಿಯಾಗಿದೆ. ದೇಶದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಆತಂಕಕಾರಿ ಮಟ್ಟದಲ್ಲೇ ಮುಂದುವರಿದಿದೆ. ವ್ಯಾಪಕ ಸೋಂಕು ಮತ್ತು ಸಾವು ಪ್ರಕರಣಗಳು ದೇಶದ ಎಲ್ಲ ರಾಜ್ಯಗಳಲ್ಲೂ ದಿನನಿತ್ಯದ ಸಾಮಾನ್ಯ ಸಂಗತಿಯಾಗಿದೆ.

ಭಾರತದಲ್ಲಿ ಒಂದೇ ದಿನ 57,000ಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು. ಅಲ್ಲದೇ 55,000+ ಪ್ರಕರಣ ಸತತ ಎರಡನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 10 ದಿನಗಳಿಂದಲೂ ನಿರಂತರವಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 45,000+ ಪ್ರಮಾಣದಲ್ಲೇ ಮುಂದುವರಿದಿರುವುದು ಚಿಂತಾಜನಕ ಸಂಗತಿಯಾಗಿದೆ.

ಆಗಸ್ಟ್‍ನಲ್ಲಿ ಡೆಡ್ಲಿ ಕೊರೊನಾ ಹಾವಳಿ ಮತ್ತಷ್ಟು ಹೆಚ್ಚಾಗಲಿದೆ ಎಂಬ ಮುನ್ಸೂಚನೆಗೆ ಪುಷ್ಟಿ ನೀಡುವಂತೆ ಮೊದಲ ದಿನವೇ ಆಘಾತಕಾರಿ ಮಟ್ಟದಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
24 ತಾಸುಗಳಲ್ಲಿ 764 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 36,511ಕ್ಕೇರಿದೆ.. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17 ಲಕ್ಷ ಸನಿಹದಲ್ಲಿರುವುದು ಆತಂಕಕಾರಿ ವಿದ್ಯಮಾನವಾಗಿದೆ.

ಈವರೆಗೆ ಭಾರತದಲ್ಲಿ ರೋಗಪೀಡಿತರ ಪ್ರಮಾಣ 16,95,988 ಹಾಗೂ ಸಾವಿನ ಸಂಖ್ಯೆ 36,511 ದಾಟಿರುವುದು ಕಳವಳಕಾರಿ ಸಂಗತಿಯಾಗಿದೆ. ನಾಳೆ ವೇಳೆಗೆ ರೋಗ ಪೀಡಿತರ ಸಂಖ್ಯೆ 17 ಲಕ್ಷ ಮತ್ತು ಮೃತರ ಸಂಖ್ಯೆ 37,000 ದಾಟಲಿದೆ.

ದೇಶದಲ್ಲಿ ಈಗ 5,65,103 ಆಕ್ಟಿವ್ ಕೇಸ್‍ಗಳಿದ್ದು, 10,94,374 ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ.64.53ರಷ್ಟು ಮತ್ತು ಸಾವಿನ ಪ್ರಮಾಣ ಶೇ.2.15ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ನಿನ್ನೆವರೆಗೆ 1.93,58,659 ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಸೋಂಕು ಪರೀಕ್ಷೆ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, ರೋಗ ಹರಡುವುದನ್ನು ತಡೆಗಟ್ಟಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸತತ ಆರು ದಿನಗಳಿಂದ ಐದು ಲಕ್ಷಕ್ಕೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ನಿನ್ನೆ ಒಂದೇ ದಿನ 5,25,689 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

ಸದ್ಯದಲ್ಲೇ ಸ್ಯಾಂಪಲ್ ಪರೀಕ್ಷಾ ಸಾಮಥ್ರ್ಯವನ್ನು ಪ್ರತಿದಿನ 10 ಲಕ್ಷಕ್ಕೇರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ತಿಳಿಸಿದ್ದಾರೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 764 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 36,511 ಕ್ಕೇರಿದೆ. ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿಯೂ ಆತಂಕಕಾರಿ ಹೆಚ್ಚಳವಾಗಲಿದೆ ಎಂದು ಆರೋಗ್ಯ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.

# ಆಗಸ್ಟ್‍ನಲ್ಲಿ ಭಾರೀ ಕಂಟಕ :
ಜುಲೈ ತಿಂಗಳಿನಲ್ಲಿ ಏರುಗತಿಯಲ್ಲಿ ಅಬ್ಬರಿಸಿ ಬೊಬ್ಬರಿದಿರುವ ಕೋವಿಡ್-19 ವೈರಸ್ ಆಗಸ್ಟ್‍ನಲ್ಲಿ ಮತ್ತಷ್ಟು ಉಗ್ರ ಸ್ವರೂಪ ತಾಳುವ ಆತಂಕವಿದೆ. ಆರೋಗ್ಯ ತಜ್ಞರು ಎಚ್ಚರಿಕೆ ನೀಡಿರುವಂತೆ ಆಗಸ್ಟ್‍ನಲ್ಲಿ ಪ್ರತಿದಿನ ಸರಾಸರಿ 60,000 ಸೋಂಕು ರೋಗಿಗಳು ವರದಿಯಾಗುತ್ತವೆ.

ಇದೇ ವೇಳೆ ಕೊರೊನಾ ನಿಗ್ರಹ ಲಸಿಕೆ ಅಭಿವೃದ್ದಿಗಾಗಿ ನಿರಂತರ ಪ್ರಯೋಗಗಳು ಅಂತಿಮ ಹಂತದಲ್ಲಿದ್ದು, ಶೀಘ್ರವೇ ಈ ಬಗ್ಗೆ ಪೂರಕ ಫಲಿತಾಂಶ ಲಭಿಸುವ ಆಶಾಭಾವನೆಯೂ ವ್ಯಕ್ತವಾಗಿದೆ.

Facebook Comments

Sri Raghav

Admin