ಪಾದರಾಯನಪುರವಾದ ತುಮಕೂರಿನ ಪಿಎಚ್ ಕಾಲೋನಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಏ.24- ಇಲ್ಲಿಯ ತನಕ ತುಮಕೂರಿನ ಜನರು ನೆಮ್ಮದಿಯಿಂದ ಇದ್ದರು. ಅದರೆ, ಈಗ ನಗರದಲ್ಲಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದು, ಜಿಲ್ಲಾಡಳಿತ ಬೆಚ್ಚಿ ಬಿದ್ದಿದೆ.ಗುಜರಾತ್‍ನ ಸೂರತ್ ಹಾಗೂ ಅಲಹಾಬಾದ್‍ನಿಂದ ರಾಜ್ಯಕ್ಕೆ ಧರ್ಮ ಪ್ರಚಾರಕ್ಕೆ ಬಂದಿದ್ದ 44 ಮಂದಿಯಲ್ಲಿ ಜಿಲ್ಲೆಗೆ 14 ಮಂದಿ ಆಗಮಿಸಿದ್ದರು.

ಗುಬ್ಬಿ ಗೇಟ್‍ಗೆ ಹೊಂದಿಕೊಂಡಿರುವ ಮುಸ್ಲಿಮರೇ ಹೆಚ್ಚಾಗಿ ವಾಸವಾಗಿರುವ ಪಿಎಚ್ ಕಾಲೋನಿಯಲ್ಲಿ ಧರ್ಮ ಪ್ರಚಾರ ನಡೆಸುತ್ತಿದ್ದರು. ತಮ್ಮ ಕಾರ್ಯ ಮುಗಿಸಿ ವಾಪಸಾಗುವಷ್ಟರಲ್ಲಿ ಕೊರೊನಾ ಭೀತಿಯಿಂದ ಲಾಕ್‍ಡೌನ್ ಘೋಷಿಸಿದ ಕಾರಣ 14 ಮಂದಿ ಕಾಲೋನಿಯಲ್ಲೇ ಉಳಿದುಕೊಂಡಿದ್ದಾರೆ.

ವಿಷಯ ತಿಳಿದ ಪೊಲೀಸರು 14 ಮಂದಿಯನ್ನು ಪಿಎಚ್ ಕಾಲೋನಿಯ ಮಸೀದಿಯಲ್ಲಿ ಕ್ವಾರಂಟೈನ್‍ನಲ್ಲಿಟ್ಟಿದ್ದರು. ಅವರಲ್ಲಿ 34 ವರ್ಷದ ಒಬ್ಬ ವ್ಯಕ್ತಿಗೆ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಅತನ ರಕ್ತ, ಗಂಟಲು ದ್ರವವನ್ನು ಪರೀಕ್ಷೆಗೆ ಬೆಂಗಳೂರಿಗೆ ರವಾನಿಸಿದ್ದರು. ಮೊದಲ ಹಂತದ ವರದಿಯಲ್ಲಿ ಆತನಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿರುವುದರಿಂದ ಜಿಲ್ಲೆಯಲ್ಲಿ ಕೊರೊನಾ ಭೀತಿ ಆವರಿಸಿಕೊಂಡಿದೆ.

# ಹೈ ಅಲರ್ಟ್:
ಗುಜರಾತ್ ಮೂಲದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಆತನನ್ನು ಜಿಲ್ಲಾಸ್ಪತ್ರೆಯ ಕೋವಿಡ್ ಘಟಕಕ್ಕೆ ಶಿಫ್ಟ್ ಮಾಡಿ ಉಳಿದ 13 ಜನರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ತಡರಾತ್ರಿ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ತುರ್ತುಸಭೆ ನಡೆಸಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳುವುದರ ಜತೆಗೆ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.

# ಸೀಲ್‍ಡೌನ್:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ಆರೋಗ್ಯ ಇಲಾಖೆ ಅಧಿಕಾರಿ ಚಂದ್ರಕಲಾ ಮತ್ತಿತರರೊಂದಿಗೆ ಸಭೆ ನಡೆಸಿದ ಡಿಸಿಯವರು ಸೋಂಕಿತನ ಮತ್ತೊಂದು ವರದಿಯನ್ನು ಕಾಯುತ್ತಿದ್ದು, ಅದರಲ್ಲೂ ಪಾಸಿಟಿವ್ ಬಂದರೆ ತಕ್ಷಣ ಕೈಗೆತ್ತಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ಮತ್ತೊಂದು ವರದಿಯಲ್ಲೂ ಪಾಸಿಟಿವ್ ಬಂದರೆ ಮಸೀದಿ ಇರುವ ಪಿಎಚ್ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮಾತ್ರವಲ್ಲ, ಕಾಲೋನಿಯಲ್ಲಿ 150ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‍ಗೆ ನಿಯೋಜನೆ ಮಾಡಲಾಗಿದೆ. ಜಿಲ್ಲಾಡಳಿತದ ಆದೇಶದ ಮೇರೆಗೆ ತಿಲಕ್‍ಪಾರ್ಕ್ ಪೊಲೀಸರು ಪಿಎಚ್ ಕಾಲೋನಿಯಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಪ್ರದೇಶವನ್ನು ಸೀಲ್‍ಡೌನ್ ಮಾಡಿದ್ದಾರೆ.

# ಧರ್ಮಪ್ರಚಾರಕರೇ ಕಾರಣ:
ಶಿರಾದ ವೃದ್ಧ ದೆಹಲಿಯ ಜಮಾತ್ ಹೋಗಿ ಬಂದಿದ್ದು ಅತನಲ್ಲಿ ಕೊರೊನಾ ಸೋಂಕು ವೈರಸ್ ಪತ್ತೆಯಾಗಿದ್ದು, ಅತ ಮೃತಪಟ್ಟಿದ್ದ. ಅಲ್ಲದೆ, ಅತನ 14 ವರ್ಷದ ಮಗನಿಗೆ ಪಾಸಿಟಿವ್ ಬಂದಿತ್ತು. ಅದೃಷ್ಟವಶಾತ್ ಮಗನಿಗೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗಿ ನಂತರ ನೆಗೆಟಿವ್ ಬಂದಿತ್ತು. ಈ ಪ್ರಕರಣ ಬಿಟ್ಟರೆ ತುಮಕೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ.

ಆದರೆ, ಗುಜರಾತ್‍ನಿಂದ ಧರ್ಮ ಪ್ರಚಾರಕ್ಕಾಗಿ ಬಂದು ಮಸೀದಿಯಲ್ಲಿ ಆಶ್ರಯ ಪಡೆದವರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಭೀತಿ ಆರಂಭವಾಗಿದೆ.
ಧರ್ಮ ಪ್ರಚಾರಕ್ಕೆ ಬಂದವರು ನಗರದ ಯಾವ ಯಾವ ಪ್ರದೇಶಗಳಿಗೆ ತೆರಳಿ ಪ್ರಚಾರ ಮಾಡಿದ್ದಾರೆ, ಯಾವ ವ್ಯಕ್ತಿಗಳೊಂದಿಗೆ ಸಂಪರ್ಕವಿರಿಸಿಕೊಂಡಿದ್ದರು ಎಂಬುದನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.

Facebook Comments

Sri Raghav

Admin