ಬಳ್ಳಾರಿಯಲ್ಲಿ ಜಿಂದಾಲ್ ಕಾರ್ಖಾನೆಯ 27 ಮಂದಿಗೆ ಕೊರೊನಾ ಪಾಸಿಟಿವ್..!
ಬಳ್ಳಾರಿ, ಜೂ.11- ಜಿಲ್ಲಾಯ ಜಿಂದಾಲ್ ಕಾರ್ಖಾನೆಗೆ ಮಹಾಮಾರಿ ಕೊರೊನಾ ವಕ್ಕರಿಸಿದೆ. ಕಂಪೆನಿಯ 27 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಆತಂಕ ಉಲ್ಬಣಗೊಂಡಿದೆ.
ಇಂದು ದೃಢಪಟ್ಟ 34 ಪ್ರಕರಣಗಳ ಪೈಕಿ 27 ಮಂದಿ ಜಿಂದಾಲ್ ನವರಾಗಿದ್ದು, ಉಳಿದ ಐದು ಮಂದಿ ಮಹಾರಾಷ್ಟ್ರದಿಂದ ಬಳ್ಳಾರಿಗೆ ವಾಪಸಾದವರಾಗಿದ್ದಾರೆ. ಇದರಿಂದ ಪ್ರಸ್ತುತ ಜಿಲ್ಲಾಯಲ್ಲಿ ಸೋಂಕಿತರ ಸಂಖ್ಯೆ 128ಕ್ಕೆ ಏರಿದೆ.
ಲಾಕ್ಡೌನ್ ಘೋಷಣೆಯಾದ ದಿನದಿಂದಲೇ ಜಿಂದಾಲ್ನಲ್ಲಿ ಕೆಲಸ ಸ್ಥಗಿತಗೊಳಿಸುವಂತೆ ಜಿಲ್ಲಾಯ ಜನತೆ ಒತ್ತಾಯಿಸಿದ್ದರೂ ಇದನ್ನು ಬದಿಗೊತ್ತಿ ಕೆಲಸ ಆರಂಭಿಸಿರುವುದರಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತದೆ.
ಜಿಂದಾಲ್ನಲ್ಲಿ ಒಟ್ಟು 30 ಸಾವಿರ ಕಾರ್ಮಿಕರಿದ್ದು, ಈಗ ಅವರಲ್ಲೂ ಮತ್ತು ಅವರ ಕುಟುಂಬದ ಸದಸ್ಯರೂ ಸೇರಿದಂತೆ ಸುತ್ತಮುತ್ತಲಿನ ಜನರಲ್ಲಿ ಆತಂಕ ಮನೆ ಮಾಡಿದೆ.
ಜಿಲ್ಲೆಯ ಹಲವೆಡೆ ಕೊರೊನಾ ಸೋಂಕು ವ್ಯಾಪಿಸಿದ್ದರೂ ಪ್ರತಿಷ್ಠಿತ ಜಿಂದಾಲ್ ಸಂಸ್ಥೆಗೆ ಕಾಲಿಟ್ಟಿರಲಿಲ್ಲ. ಆದರೆ, ಇಂದು 27 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಸಂಸ್ಥೆಯ ನೌಕರರಲ್ಲಿ ಭೀತಿ ಉಂಟುಮಾಡಿದೆ. 27 ಮಂದಿಯಲ್ಲಿ ಸೋಂಖು ಪತ್ತೆಯಾಗುತ್ತಿದ್ದಂತೆ ಜಿಲ್ಲಾಡಳಿತ ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಿರುವುದಲ್ಲದೆ, ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಿದೆ.