ಭಾರತದಲ್ಲಿ ಕೊರೊನಾ ಹೊಸ ದಾಖಲೆ : 24 ಗಂಟೆಗಳಲ್ಲಿ 9,983 ಪಾಸಿಟಿವ್, 206 ಡೆತ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಜೂ. 8-ದೇಶದಲ್ಲಿ ವಿನಾಶಕಾರಿ ಕೊರೊನಾ ವೈರಸ್ ಹಾವಳಿ ಆತಂಕಕಾರಿ ಮಟ್ಟದಲ್ಲಿಯೇ ಮುಂದುವರಿದಿದ್ದು, ಮುಂದೇನು ಎಂಬ ದೊಡ್ಡ ಚಿಂತೆ ಭಾರತೀಯರನ್ನು ಕಾಡುತ್ತಿದೆ. ಕಳೆದ 16 ದಿನಗಳಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದ್ದು ದೇಶದ ಜನತೆ ಪ್ರಾಣ ಭೀತಿಯಿಂದ ಮತ್ತಷ್ಟು ಹೆದರಿ ಕಂಗಲಾಗಿದ್ದಾರೆ.

24 ತಾಸುಗಳ ಅವಧಿಯಲ್ಲಿ ಹೊಸ ದಾಖಲೆ ಮಟ್ಟದಲ್ಲಿ ಅಂದರೆ ಅತ್ಯಧಿಕ 9.983 ಮಂದಿಗೆ ಸೋಂಕು ತಗುಲಿದೆ. ಇದೇ ಅವಧಿಯಲ್ಲಿ 206 ರೋಗಿಗಳು ಬಲಿಯಾಗಿದ್ದಾರೆ. ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 2.57 ಲಕ್ಷಕ್ಕೇರಿದ್ದು, ಒಟ್ಟು 7,135 ಮಂದಿ ಮೃತಪಟ್ಟಿದ್ದಾರೆ.

ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ದೇಶದಲ್ಲಿ ಸತತ ಐದು ದಿನಗಳಿಂದ ಸೋಂಕಿತರ ಸಂಖ್ಯೆ 9,000+ ಪ್ರಮಾಣದಲ್ಲೇ ಮುಂದುವರಿದಿದೆ. ನಿನ್ನೆ ಒಂದೇ ದಿನ 9,983 (9,971 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಶನಿವಾರ 9,971, ಶುಕ್ರವಾರ 9,887, ಗುರುವಾರ 9,851 ಮತ್ತು ಬುಧವಾರ 9,304 ಸೋಂಕು ಕೇಸ್‍ಗಳು ವರದಿಯಾಗಿದೆ.

ಭಾರತದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚಾಗುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಇನ್ನೆರಡು ದಿನಗಳಲ್ಲಿ ಭಾರತವು ಈಗಿರುವ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೇರಲಿದೆ. ಅಲ್ಲದೇ, ಇನ್ನು ಕೆಲವೇ ದಿನಗಳಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿರುವ ಅಮೆರಿಕ, ಬ್ರೆಜಿಲ್, ರಷ್ಯಾ ಮತ್ತು ಇಂಗ್ಲೆಂಡ್ ದೇಶಗಳನ್ನು ಹಿಂದಿಕ್ಕುವ ಆತಂಕವೂ ಇದೆ.

ಹೆಮ್ಮಾರಿ ನಿಗ್ರಹಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತ ಹೋರಾಟ ನಡೆಸುತ್ತಿದ್ದರೂ ಹೆಮ್ಮಾರಿಯ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದ್ದು, ಜೂನ್ ತಿಂಗಳ ಏಳನೇ ದಿನವೂ ಆತಂಕಕಾರಿ ಮಟ್ಟದಲ್ಲಿ ನಿರಂತರವಾಗಿ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ. ನಾಳೆ ವೇಳೆಗೆ ದೇಶದಲ್ಲಿ ಸಾವಿನ ಪ್ರಮಾಣ 7,500 ಮತ್ತು ಸೋಂಕು ಬಾಧಿತರ ಸಂಖ್ಯೆ 2.66 ಲಕ್ಷ ತಲುಪುವ ಆತಂಕವಿದೆ. .

ದೇಶದಲ್ಲಿ ಒಂದೇ ದಿನ 9,000ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಇದು ನಿರಂತರ ಐದನೇ ದಿನ. ಸತತ 16 ದಿವಸಗಳಿಂದ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೇ 7,000ಕ್ಕೂ ಅಧಿಕ ಪಾಸಿಟಿವ್ ಕೇಸ್‍ಗಳು ಪತ್ತೆಯಾದ ಹತ್ತನೇ ದಿನವಾಗಿದ್ದು ದೇಶದ ಗಂಭೀರ ಸ್ಥಿತಿಗೆ ಸಾಕ್ಷಿಯಾಗಿದೆ. ಸಾಂಕ್ರಾಮಿಕ ರೋಗ ಉಲ್ಬಣಗೊಂಡ ನಂತರ ಸತತ ಎಂಟನೆ ದಿನ 8,000ಕ್ಕೂ ಅಧಿಕ ಸೋಂಕು ಪ್ರಕರಣ ವರದಿಯಾಗಿದೆ.

ಸಾಂಕ್ರಾಮಿಕ ರೋಗ ಉಲ್ಬಣದಲ್ಲಿ ನಿರಂತರ 18 ದಿನದ ಭಾರೀ ಜಿಗಿತ ಇದಾಗಿದೆ. ಅಲ್ಲದೇ ಈ ಅವಧಿಯಲ್ಲಿ 13 ದಿವಸಗಳಿಂದಲೂ 6,500ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 206 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ 7,135ಕ್ಕೇರಿದೆ ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 2,56,611 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

24 ಗಂಟೆಗಳಲ್ಲಿ ದೇಶದ ವಿವಿಧೆಡೆ ಸಂಭವಿಸಿದ 206 ಮರಣ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ 91, ಗುಜರಾತ್ 30, ಉತ್ತರಪ್ರದೇಶ ಮತ್ತು ತಮಿಳುನಾಡು ತಲಾ 18, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ತಲಾ 13, ರಾಜಸ್ತಾನ 9, ಹರಿಯಾಣ 4, ತೆಲ ಆಂದ್ರಪ್ರದೇಶ, ಕರ್ನಾಟಕ, ಜಮ್ಮು-ಕಾಶ್ಮೀರ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ತಲಾ ಎರಡು ಹಾಗೂ ಒಡಿಶಾ ಮತ್ತು ಪಂಜಾಬ್‍ನಲ್ಲಿ ತಲಾ ಒಂದೊಂದು ಸಾವು ಪ್ರಕರಣ ವರದಿಯಾಗಿದೆ.

ಈವರೆಗೆ ಸಂಭವಿಸಿರುವ 7,135 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದ್ದು, ಅಲ್ಲಿ ಈವರೆಗೆ 3,060 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿಯೂ ಭಾರೀ ಏರಿಕೆ ಕಂಡುಬಂದಿದೆ. 86,000ಕ್ಕೂ ಹೆಚ್ಚು ಮಂದಿ ರೋಗ ಪೀಡಿತರಾಗಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 1,249 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ದೆಹಲಿ (761), ಮಧ್ಯಪ್ರದೇಶ (412), ಪಶ್ಚಿಮ ಬಂಗಾಳ (396), ಉತ್ತರ ಪ್ರದೇಶ (275), ತಮಿಳುನಾಡು (269), ರಾಜಸ್ಥಾನ (240), ತೆಲಂಗಾಣ (123), ಆಂಧ್ರಪ್ರದೇಶ (75), ಕರ್ನಾಟಕ(61), ಹಾಗೂ ಪಂಜÁಬ್ (51) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ 46, ಬಿಹಾರ 30, ಹರಿಯಾಣ 28, ಕೇರಳ 15, ಉತ್ತರಾಖಂಡ 13, ಒಡಿಶಾ 9, ಜಾರ್ಖಂಡ್ 7, ಹಿಮಾಚಲ ಪ್ರದೇಶ ಮತ್ತು ಚಂಡೀಗಢ ತಲಾ 5, ಅಸ್ಸಾಂ ಮತ್ತು ಛತ್ತೀಸ್‍ಗಢ ತಲಾ 4 ಹಾಗೂ ಪುದುಚೇರಿ, ಲಡಾಕ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.  ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 1,25,381ಕ್ಕೇರಿದೆ. ಈವರೆಗೆ 1,24,094 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಶೇ.48.36ರಷ್ಟು ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಜೂನ್ ಕೊನೆ ವಾರಗಳಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಲಿದೆ ಎಂಬ ವರದಿಗಳಿದ್ದು, ಅದಕ್ಕೆ ಮುನ್ಸೂಚನೆಯಾಗಿ ಮೊದಲ ವಾರದಲ್ಲೇ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದು ಆಘಾತಕಾರಿಯಾಗಿದೆ.

ಈ ಆಘಾತಕಾರಿ ಸನ್ನಿವೇಶದ ನಡುವೆಯೇ ಭಾರತವು ಸೋಂಕು ಪ್ರಮಾಣದಲ್ಲಿ ಸ್ಪೇನ್ ದೇಶವನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ. ಎರಡು ದಿನಗಳ ಹಿಂದಷ್ಟೇ ಭಾರತ ಆರನೇ ಸ್ಥಾನದಲ್ಲಿತ್ತು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್‍ನನ್ನು ಹಿಂದುಕ್ಕುವ ಕಾಲ ದೂರವಿಲ್ಲ.

Facebook Comments