ಕೊರೊನ ಸೋಂಕಿತರ ಸಂಖ್ಯೆಯಲ್ಲಿ ಬ್ರೆಜಿಲ್ ಹಿಂದಿಕ್ಕಿ 2ನೇ ಸ್ಥಾನದತ್ತ ಭಾರತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಸೆ.4-ಭಾರತದಲ್ಲಿ ಕಿಲ್ಲರ್ ಕೊರೊನಾ ವೈರಸ್ ಸೋಂಕಿನ ಆರ್ಭಟ ಆಘಾತಕಾರಿ ಮಟ್ಟದಲ್ಲೇ ಮುಂದುವರಿದಿದೆ. ಸತತ ಎರಡನೇ ದಿನ 83,000+ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದು ದೇಶದಲ್ಲಿನ ಗಂಡಾಂತರ ಸ್ಥಿತಿಗೆ ಸಾಕ್ಷಿಯಾಗಿದೆ.  ಆಗಷ್ಟ್ ನಲ್ಲಿ ಏರುಗತಿಯಲ್ಲೇ ಮುಂದುವರಿದಿದ್ದ ಕೋವಿಡ್-19 ಹಾವಳಿ ಸೆಪ್ಟೆಂಬರ್‍ನಲ್ಲೂ ಅಬ್ಬರಿಸಿ ಬೊಬ್ಬರಿಯುತ್ತಿದೆ.

ಭಾರತವು ನಾಳೆ ವೇಳೆಗೆ ಬ್ರೆಜಿಲ್‍ನನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರುವ ಸಾಧ್ಯತೆ ಇದೆ.  ಅಮೆರಿಕ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಕೊರೊನಾ ಹಾವಳಿ ಕ್ರಮೇಣ ಇಳಿಮುಖವಾಗುತ್ತಿದ್ದರೆ, ಭಾರತದಲ್ಲಿ ಮಾತ್ರ ವೈರಸ್ ದಾಳಿ ಏರುಗತಿಯಲ್ಲಿರುವ ಚಿಂತೆಗೀಡು ಮಾಡುವ ಸಂಗತಿಯಾಗಿದೆ.  ಸಾಂಕ್ರಾಮಿಕ ರೋಗದ ಮಹಾಸ್ಫೋಟದಲ್ಲಿ ಮತ್ತೆ ನಿನ್ನೆ ದಾಖಲೆ ಪ್ರಮಾಣದಲ್ಲಿ ಹೊಸ ವೈರಾಣು ಸೋಂಕುಗಳು ವರದಿಯಾಗಿವೆ.

ದೇಶದಲ್ಲಿ ನಿನ್ನೆಯಿಂದ ಇಂದು ಮುಂಜನೆವರೆಗೆ 83,000ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ. ಇದೇ ಅವಧಿಯಲ್ಲಿ 1.100 ಮಂದಿಯನ್ನು ವೈರಸ್ ಬಲಿ ತೆಗೆದುಕೊಂಡಿದೆ ಮೊನ್ನೆ 84,000 ವೈರಸ್ ರೋಗ ತಗುಲಿದ್ದು, 1,043 ಸಾವುಗಳು ಸಂಭವಿಸಿತ್ತು.  ದೇಶದಲ್ಲೀಗ ಸೋಂಕಿತರ ಸಂಖ್ಯೆ 39 ಲಕ್ಷ ಹಾಗೂ ಸಾವಿನ ಸಂಖ್ಯೆ 68,475 ದಾಟಿರುವುದು ಆತಂಕದ ವಿದ್ಯಮಾನವಾಗಿದೆ.

ಕೋವಿಡ್ ಸಾಂಕ್ರಾಮಿಕ ರೋಗ ಮಹಾಸ್ಫೋಟದ ಪ್ರಕೋಪ ಸೆಪ್ಟಂಬರ್ ಆರಂಭದಲ್ಲೇ ಅಧಿಕವಾಗಿ ಕಂಡುಬಂದಿದ್ದು, ಪಾಸಿಟಿವ್ ಮತ್ತು ಸಾವು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವುದು ವರದಿಯಾಗಿದೆ. ಅಲ್ಲದೇ ಕಳೆದ ವಾರ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಸೋಂಕು ಪ್ರಕರಣಗಳು ಭಾರತದಲ್ಲಿ ದಾಖಲಾಗಿದೆ.

ಇದರ ನಡುವೆಯೂ ಚೇತರಿಕೆ ಪ್ರಮಾಣದಲ್ಲಿ ಶೇ.77.15ರಷ್ಟು ವೃದ್ದಿ ಕಂಡುಬಂದಿದ್ದು, ಈವರೆಗೆ ದೇಶದಲ್ಲಿ 4.66 ಕೋಟಿಗೂ ಹೆಚ್ಚು ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಹೆಚ್ಚಳವೂ ಸಹ ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೂ 30 ಲಕ್ಷಕ್ಕೂ ಹೆಚ್ಚು ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದಾರೆ.

24 ತಾಸುಗಳಲ್ಲಿ 1,100 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 69,000 ಸನಿಹದಲ್ಲಿದೆ. ಈವರೆಗೆ ಭಾರತದಲ್ಲಿ ರೋಗಪೀಡಿತರ ಪ್ರಮಾಣ 39,36,747 ದಾಟಿದೆ. ದೇಶದಲ್ಲಿ ಈಗ 8,31,124 ಆಕ್ಟಿವ್ ಕೇಸ್‍ಗಳಿದ್ದು, 30 ಹೆಚ್ಚು ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿದ್ದಾರೆ. ಆಕ್ಟಿವ್ ಕೇಸ್‍ಗಳಿಗೆ ಹೋಲಿಸಿದಲ್ಲಿ, ರಿಕವರಿ ರೇಟ್‍ನಲ್ಲಿ ಮೂರುವರೆ ಪಟ್ಟುಗಳಷ್ಟು ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ.

ಚೇತರಿಕೆ ಪ್ರಮಾಣ ಶೇ.77.15 ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.75ರಷ್ಟು ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.

ದೇಶದ ವಿವಿಧ ರಾಜ್ಯಗಳಲ್ಲಿ ನಿನ್ನೆ ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಅಂದರೆ 11,69,765 ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 4.66 ಕೋಟಿಗೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

Facebook Comments