ಲಾಕ್‍ಡೌನ್ ಸಡಿಲಿಕೆ ನಂತರ ಹೆಚ್ಚಿದ ಕೊರೊನಾ ಅಬ್ಬರ, 1,783 ಸಾವು, 52,000 ಮಂದಿಗೆ ಗೆ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮೇ 7- ದೇಶವ್ಯಾಪಿ ಲಾಕ್‍ಡೌನ್ ನಿರ್ಬಂಧ ಸಡಿಲಿಕೆಯಾದ ನಂತರ ಕಿಲ್ಲರ್ ಕೊರೊನಾ ವೈರಸ್ ದಾಳಿ ಮತ್ತಷ್ಟು ತೀವ್ರಗೊಂಡು ಸಾವು ಮತ್ತು ಸೋಂಕು ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.

ಕೇವಲ ಮೂರು ದಿನಗಳಲ್ಲೇ 10,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು, ಇದಕ್ಕೆ ಲಾಕ್‍ಡೌನ್ ಸಡಿಲಿಕೆಯೇ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಕೋವಿಡ್-19 ಸೋಂಕು ನಿಗ್ರಹಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರನೆ ಹಂತದ ಲಾಕ್‍ಡೌನ್ ಅನೇಕ ಸಡಿಲಿಕೆಗಳೊಂದಿಗೆ ಮೇ 4ರಿಂದ ಜಾರಿಗೆ ಬಂದಿದ್ದು, ಇದರ ಬೆನ್ನಲ್ಲೇ ಸಾವು ಮತ್ತು ಸೋಂಕು ಪ್ರಕರಣಗಳಲ್ಲಿ ದಾಖಲೆ ಪ್ರಮಾಣದಲ್ಲಿ ಹೆಚ್ಚವಾಗಿರುವುದು ಆತಂಕಕಾರಿಯಾಗಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 89 ಮಂದಿ ಮೃತಪಟ್ಟಿದ್ದು, 3,567 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಲಾಕ್‍ಡೌನ್ ನಂತರ ಸತತ ಮೂರನೆ ದಿನ ಅತಿ ಹೆಚ್ಚು ಸೋಂಕುಗಳ ಪ್ರಕರಣವಾಗಿದೆ. ಸಾಂಕ್ರಾಮಿಕ ರೋಗ ಆಘಾತಕಾರಿ ಮಟ್ಟದಲ್ಲಿ ಸ್ಫೋಟಗೊಂಡಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಚಿಂತೆಗೀಡು ಮಾಡಿದ್ದು, ಜನರು ಮತ್ತಷ್ಟು ಭಯಭೀತರಾಗಿದ್ದಾರೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ದೇಶದಲ್ಲಿ ಡೆಡ್ಲಿ ಕೋವಿಡ್-19 ವೈರಸ್‍ಗೆ ಬಲಿಯಾದವರ ಸಂಖ್ಯೆ 1,783ಕ್ಕೇರಿದ್ದು, ಸಾಂಕ್ರಾಮಿಕ ರೋಗಿಗಳ ಸಂಖ್ಯೆ 52,952 ತಲುಪಿದೆ. ಇಂದು ಸಂಜೆಯೊಳಗೆ ಸೋಂಕಿತರ ಪ್ರಮಾಣ 54,000 ದಾಟುವ ಆತಂಕವೂ ಇದೆ.

ಲಾಕ್‍ಡೌನ್ ಸಡಿಲ ಮಾಡುತ್ತಿದ್ದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸಾವು-ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದ್ದು, ಎಚ್ಚರ ತಪ್ಪಿದರೆ ದೇಶಕ್ಕೆ ದೊಡ್ಡ ಗಂಡಾಂತರ ತಪ್ಪಿದ್ದಲ್ಲ ಎಂಬ ಭಯವೂ ಆವರಿಸಿದೆ. ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಸರಾಸರಿ ಶೇ.28.83ಕ್ಕಿಂತ ಹೆಚ್ಚಾಗಿ ಸುಧಾರಣೆ ಕಂಡುಬಂದಿದ್ದರೂ, ಮತ್ತೊಂದೆಡೆ ದಿನನಿತ್ಯ ಮರಣ ಮತ್ತು ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ನಿನ್ನೆ ರಾತ್ರಿಯವರೆಗೆ 89 ಮಂದಿಯನ್ನು ಸೈಲೆಂಟ್ ಕಿಲ್ಲರ್ ನುಂಗಿ ಹಾಕಿದೆ. ಮಹಾರಾಷ್ಟ್ರದಲ್ಲಿ 34, ಗುಜರಾತ್‍ನಲ್ಲಿ 28, ಮಧ್ಯಪ್ರದೇಶದಲ್ಲಿ ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದಲ್ಲಿ ತಲಾ 4, ರಾಜಸ್ತಾನದಲ್ಲಿ 3, ಪಂಜಾಬ್ ಮತ್ತು ತಮಿಳುನಾಡು-ತಲಾ 2 ಹಾಗೂ ದೆಹಲಿ, ಹರಿಯಾಣ ಮತ್ತು ಒಡಿಶಾದಲ್ಲಿ ತಲಾ ಒಂದೊಂದು ಸಾವು ಸಂಭವಿಸಿದೆ.

ಈವರೆಗೆ ಸಂಭವಿಸಿರುವ 1,783 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಒಟ್ಟು 651 ಸಾವುಗಳು ವರದಿಯಾಗಿವೆ. ದೇಶದಲ್ಲಿ ಸಂಭವಿಸಿದ ಒಟ್ಟು ಸಾವು ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲೇ ಸುಮಾರು ಶೇ.40ರಷ್ಟು ಮರಣ ವರದಿಯಾಗಿದೆ. ರಾಜಧಾನಿ ಮುಂಬೈನಲ್ಲಿ ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿವೆ.

ನಂತರದ ಸ್ಥಾನಗಳಲ್ಲಿ ಗುಜರಾತ್ (396), ಮಧ್ಯಪ್ರದೇಶ (185), ಪಶ್ಚಿಮ ಬಂಗಾಳ (144), ರಾಜಸ್ತಾನ (92), ದೆಹಲಿ (65), ಉತ್ತರ ಪ್ರದೇಶ (60), ಆಂಧ್ರಪ್ರದೇಶ (36), ತಮಿಳುನಾಡು (35), ತೆಲಂಗಾಣ(30), ಕರ್ನಾಟಕ (29) ಹಾಗೂ ಪಂಜಾಬ್ (27) ರಾಜ್ಯಗಳಿವೆ.

ಜಮ್ಮು-ಕಾಶ್ಮೀರದಲ್ಲಿ ಎಂಟು, ಹರಿಯಾಣ ಏಳು, ಕೇರಳ ಮತ್ತು ಬಿಹಾರದಲ್ಲಿ ತಲಾ ನಾಲ್ಕು, ಜಾರ್ಖಂಡ್ ಮೂರು, ಒಡಿಶಾ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಎರಡು ಹಾಗೂ ಚಂಡೀಗಢ, ಮೇಘಾಲಯ, ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 35,902ರಷ್ಟಿದೆ. ಈ ಮಧ್ಯೆ, ಈವರೆಗೆ 15,266 (ಚೇತರಿಕೆ ಪ್ರಮಾಣ ಶೇ.28.83) ಮಂದಿ ಗುಣಮುಖರಾಗಿದ್ದಾರೆ.. ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ಧಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದೆಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಪಂಜಾಬ್, ಒಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಮ್ಮಾರಿ ನಿಗ್ರಹಕ್ಕಾಗಿ ಶತ ಪ್ರಯತ್ನಗಳನ್ನು ಮುಂದುವರಿಸಿದ್ದರೂ, ಮಹಾಮಾರಿ ನಿಯಂತ್ರಣಕ್ಕೆ ಒಳಪಡದಿರುವುದು ಭಾರತೀಯರಿಗೆ ದೊಡ್ಡ ಆಘಾತ ಉಂಟು ಮಾಡಿದೆ.

Facebook Comments

Sri Raghav

Admin