ಏಷ್ಯಾಕಾಂಡವನ್ನು ಬೆಚ್ಚಿಬೀಳಿಸಿರುವ ಅಪಾಯಕಾರಿ ಕೊರೊನ ಭಾರತಕ್ಕೂ ಪ್ರವೇಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು/ಮುಂಬೈ, ಜ.24- ಚೀನಾ ಮತ್ತು ಏಷ್ಯಾಕಾಂಡವನ್ನು ಬೆಚ್ಚಿಬೀಳಿಸಿರುವ ಅಪಾಯಕಾರಿ ಕರೋನ ವೈರಸ್ ಭಾರತಕ್ಕೂ ಪ್ರವೇಶಿಸಿರುವ ಆತಂಕ ಎದುರಾಗಿದೆ. ಚೀನಾದಿಂದ ಬಂದಿರುವ ಇಬ್ಬರು ವ್ಯಕ್ತಿಗಳನ್ನು ಮುಂಬೈನಲ್ಲಿ ಪ್ರತ್ಯೇಕವಾಗಿರಿಸಿ ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಅವರನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ ಎಂದು ಬೃಹನ್ ಮುಂಬೈ ಪಾಲಿಕೆ (ಬಿಎಂಪಿ) ತಿಳಿಸಿದೆ.

ಚೀನಾದಿಂದ ಬಂದ ಈ ಇಬ್ಬರು ವ್ಯಕ್ತಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದ್ದು, ಇವರಿಗೆ ಶೋಂಕು ತಗುಲಿರುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ವಿವಿಧ ತಪಾಸಣೆ ಮತ್ತು ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ವೈರಸ್ ನಿರೋಧಕ ಕೊಠಡಿಯಲ್ಲಿರುವ ಈ ಇಬ್ಬರನ್ನು ಮುಂದಿನ 24 ಗಂಟೆಗಳ ಕಾಲ ನಿಗಾವ್ಯವಸ್ಥೆಯಲ್ಲಿ ಮುಂದುವರೆಸಲಾಗುವುದು ಎಂದು ವೈದ್ಯಕೀಯ ಅಧ್ಯಕ್ಷರು ತಿಳಿಸಿದ್ದಾರೆ.

ಬೆಂಗಳೂರಿನಲ್ಲೂ ತೀವ್ರ ನಿಗಾ: ಚೀನಾದಿಂದ ಬೆಂಗಳೂರಿಗೆ ಆಗಮಿಸಿರುವ ಮೂವರು ವಲಸಿಗರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. ವಿಶ್ವವನ್ನೇ ನಡುಗಿಸಿರುವ ಕರೋನ ಸಾಂಕ್ರಾಮಿಕ ರೋಗದ ಬಗ್ಗೆ ಎಲ್ಲೆಡೆ ಆತಂಕಗಳು ಸೃಷ್ಟಿಯಾಗಿವೆ. ಈಗಾಗಲೇ 10 ದೇಶಗಳಲ್ಲಿ ಕರೋನ ವೈರಸ್ ಕಾಣಿಸಿಕೊಂಡಿದ್ದು ಮರಣ ಮೃದಂಗ ಆರಂಭಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ನಾಳೆ ವಿಶೇಷ ಸಭೆ ನಡೆಸಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆ ಇದೆ. ಚೀನಾದಲ್ಲಿ ಸೋಂಕು ವ್ಯಾಪಕವಾಗಿದ್ದು, ಅಲ್ಲಿನ ಪ್ರಜೆಗಳು ಭಾರತಕ್ಕೆ ಬರುವಾಗ ಸಾಕಷ್ಟು ಪರಿಶೀಲನೆ ನಡೆಸಲಾಗುತ್ತಿದೆ. ಕಳೆದ 15 ದಿನಗಳ ಹಿಂದೆ ಮೂವರು ಚೀನಿ ಪ್ರಜೆಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ಈಗಾಗಲೇ ಅವರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಸದ್ಯಕ್ಕೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತಪಾಸಣಾ ಕಾರ್ಯ ಮುಂದುವರೆಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೀನಾದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈವರೆಗೂ 493 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಯಾರಿಗೂ ಶೋಂಕು ಇರುವುದು ಪತ್ತೆಯಾಗಿಲ್ಲ.

Facebook Comments