ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 128ಕ್ಕೇರಿಕೆ, ಇಂದು 4 ಹೊಸ ಕೇಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಶುಕ್ರವಾರ ಮತ್ತೆ ನಾಲ್ವರಿಗೆ ಕೊರೊನಾ ಸೋಂಕಿನ ವೈರಸ್ ತಗಲಿರುವುದು ದೃಡಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಈ ವರೆಗೆ ಕೊರೊನಾ ಸೋಂಕಿತರ ಸಂಖ್ಯೆ 128 ಕ್ಕೆ ಏರಿಕೆಯಾಗಿದೆ.

ಬೆಳಗಾವಿಯಲ್ಲಿ 3 ಹಾಗೂ ಬಾಗಲಕೋಟೆಯಲ್ಲಿ‌ ಒಬ್ಬರಿಗೆ ಸೋಂಕು ಹಬ್ಬದೆ. ಇದರಿಂದಾಗಿ ಈವರೆಗೂ ದೆಹಲಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಿಸಿದ್ದ ರಾಜ್ಯದ ಒಟ್ಟು 13 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ವಿಶೇಷವೆಂದರೆ ದೆಹಲಿ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದ ಬೆಳಗಾವಿಯ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರು ನಗರದ ಕ್ಯಾಂಪ್ ಪ್ರದೇಶದ ಕಸಾಯಿ ಗಲ್ಲಿ, ಬೆಳಗಾವಿ ತಾಲೂಕಿನ ಬೆಳಗುಂದಿ ಹಾಗೂ ಹಿರೇಬಾಗೇವಾಡಿ ನಿವಾಸಿಗಳಾಗಿದ್ದಾರೆ. ಅವರು ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ 3ಕ್ಕೂ ಹೆಚ್ಚು ದಿನ ಭಾಗಿಯಾಗಿದ್ದರು.

ಬಳಿಕ ದೆಹಲಿಯಿಂದ ಸಂಪರ್ಕ್ ಕ್ರಾಂತಿ ಎಕ್ಸ್‍ಪ್ರೆಸ್ ರೈಲಿನಲ್ಲಿ ರಾಜ್ಯಕ್ಕೆ ಆಗಮಿಸಿದ್ದರು ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಕಲೆಹಾಕಿದೆ. ಅಷ್ಟೇ ಅಲ್ಲದೆ ಮತ್ತಷ್ಟು ಟ್ರಾವೆಲ್ ಹಿಸ್ಟರಿಯನ್ನು ಕಲೆ ಹಾಕುತ್ತಿದ್ದು, ಸೋಂಕಿತರು ವಾಸವಿದ್ದ ಸ್ಥಳವನ್ನು ಬಫರ್ ಜೋನ್ ಎಂದು ಘೋಷಣೆ ಮಾಡಲಾಗಿದೆ.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿ, ಬೆಳಗಾವಿಯ ಮೂವರಲ್ಲಿ ಕೊರೊನಾ ಸೋಂಕು ತಗುಲಿದೆ. ಈ ಮೂವರು ದೆಹಲಿಯ ಜಮಾಜ್ ಸಭೆಗೆ ತೆರಳಿದ್ದವರೇ ಆಗಿದ್ದಾರೆ. ಶಿವಮೊಗ್ಗದ ಲ್ಯಾಬ್‍ನಿಂದ ಬಂದಿರುವ ರಿಪೋರ್ಟ್ ನಲ್ಲಿ ಸೋಂಕು ತಗುಲಿರುವುದು ಖಚಿತವಾಗಿದೆ.

ಆದರೆ ಪುಣೆಯ ರಿಪೋರ್ಟ್ ಗಾಗಿ ಬೆಳಗಾವಿ ಜಿಲ್ಲಾಡಳಿತ ಕಾಯುತ್ತಿದೆ. ಪುಣೆಯ ಲ್ಯಾಬ್ ವರದಿ ಬಂದ ನಂತರ ಅಧಿಕೃತ ಘೋಷಣೆ ಮಾಡಲಾಗುತ್ತದೆ. ಸದ್ಯ ಮೂವರು ಸೋಂಕಿತರು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮವು ಬೆಳಗಾವಿಯಲ್ಲಿ ಆತಂಕ ಸೃಷ್ಟಿಸಿದೆ.

ಈ ಕಾರ್ಯಕ್ರಮದಿಂದ ಬೆಳಗಾವಿಗೆ ವಾಪಸ್ ಆಗಿದ್ದ 62 ಜನರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿ ಕ್ವಾರಂಟೈನ್‍ನಲ್ಲಿ ಇರಿಸಿದೆ. ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ 35 ಜನರ ಥ್ರೋಟ್ ಸ್ವ್ಯಾಬ್, ರಕ್ತದ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. 35 ಜನರ ಪೈಕಿ 27 ಮಂದಿಯ ಮಾದರಿಯನ್ನು ಶಿವಮೊಗ್ಗ ಹಾಗೂ 6 ಜನರ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಬೆಂಗಳೂರಿಗೆ ಕಳುಹಿಸಿದ್ದ ಆರು ಮಾದರಿಗಳಲ್ಲಿ ಮೂವರ ವರದಿ ಪಾಸಿಟೀವ್ ಬಂದಿದೆ.

ಧಾರವಾಡ ಜಿಲ್ಲೆಯ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಗುಣಮುಖನಾಗಿದ್ದು ಮೂರನೇ ಹಂತದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ, ಇನ್ನೊಮ್ಮೆ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುತ್ತೇವೆ, ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ, ಇನ್ನೂ ಆತ ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

75 ವರ್ಷದ ವೃದ್ಧ, ಬಾಗಲಕೋಟೆ ಜಿಲ್ಲೆಯ ನಿವಾಸಿಯಾಗಿದ್ದು, ಇವರ ವಿವರವಾದ ತನಿಖೆ ಪ್ರಗತಿಯಲ್ಲಿದೆ. ಇವರನ್ನು ಬಾಗಲಕೋಟೆ ಜಿಲ್ಲೆಯ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.ಸೋಂಕಿತ ವ್ಯಕ್ತಿಯು ವಾಸಿಸುವ ಸುತ್ತಮುತ್ತಲಿನ ವ್ಯಾಪ್ತಿಯ 0.5 ಕಿ.ಮೀ. ಪ್ರದೇಶವನ್ನು ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕರು ಮನೆ ಬಿಟ್ಟು ಹೊರಬರದಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾಡಲಾಗಿದ್ದು, ಅಲ್ಲಿರುವ ರೋಗಿಗಳನ್ನು ಹಳೆ ಬಾಗಲಕೋಟೆಯಲ್ಲಿರುವ 50 ಹಾಸಿಗೆಯ ಆಸ್ಪತ್ರೆ ಹಾಗೂ ಕುಮಾರೇಶ್ವರ ಆಸ್ಪತ್ರೆಗೆ ರವಾನಿಸಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದರು.

ಸೋಂಕಿತ ವ್ಯಕ್ತಿಯನ್ನು ಕಳೆದ 15 ದಿನಗಳಲ್ಲಿ ಯಾರು ಸಂಪರ್ಕ ಹೊಂದಿದ್ದಾರೆಯೊ ಅವರನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ, ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸಿದವರು ಸ್ವಯಂಪ್ರೇರಿತವಾಗಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ(94498 43160) ಅವರನ್ನು ಕೂಡಲೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

# ನೆಗೆಟಿವ್ ವರದಿ :
ದೆಹಲಿ ಜಮಾತ್‍ನಿಂದ ಬಂದಿದ್ದ 17 ಜನರ ಕೊರೊನಾ ವೈದ್ಯಕೀಯ ವರದಿ ನೆಗಟಿವ್ ಬಂದಿದೆ ಎಂದು ಬೀದರ್ ಜಿಲ್ಲಾಧಿಕಾರಿ ಹೆಚ್.ಆರ್.ಮಹಾದೇವ್ ತಿಳಿಸಿದ್ದಾರೆ. ಕೊರೊನಾ ಮಹಾಮಾರಿಗೆ ಗಡಿ ಜಿಲ್ಲೆ ಬೀದರ್ ತತ್ತರಿಸಿ ಹೋಗಿದೆ. ಜಮಾತ್ ಧಾರ್ಮಿಕ ಕಾರ್ಯಕ್ರಮ ಕಂಟವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿ, ಜಮಾತ್ ಗೆ ಹೋಗಿದ್ದ ಬೀದರ್ ಮೂಲದ 28 ಜನರಲ್ಲಿ 10 ಜನರಿಗೆ ಈಗಾಗಾಲೇ ಕೊರೊನಾ ಸೋಂಕು ಧೃಡ ಪಟ್ಟಿದೆ. ಅನುಮಾವಿದ್ದ ಕಾರಣ ಇನ್ನೊಬ್ಬರ ವರದಿ ಬಾಕಿಯಿದೆ. ಉಳಿದ 17 ಜನರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ ಮಾಹಿತಿ ನೀಡಿದ್ದಾರೆ.

ಸೋಂಕಿತರ ಜೊತೆ ಸಂಪರ್ಕದಲ್ಲಿದ್ದ 82 ಜನರನ್ನು ಐಸೋಲೇಷನ್ ವಾಡ್9 ನಲ್ಲಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿರುವವರನ್ನ ಪತ್ತೆ ಹಚ್ಚಲು ಮೂರು ಪ್ರದೇಶದಿಂದ ಒಟ್ಟು 120 ಜನರ ಟೀಂ ಮಾಡಲಾಗಿದೆ. ಈ ಟೀಂ ಪ್ರತಿ ಮನೆಗೆ ಹೋಗಿ ಮಾಹಿತಿಯನ್ನ ಕಲೆ ಹಾಕುತ್ತಿದೆ. ಜಿಲ್ಲೆಯ ಜನರು ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ಬೀದರ್ ನಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

# ಸೇವಾ ಅವಧಿ ವಿಸ್ತರಣೆ :
ತುರ್ತುಪರಿಸ್ಥಿತಿ ಹಿನ್ನೆಲೆಯಲ್ಲಿ ನಿವೃತ್ತಿ ಹೊಂದಿರುವ ಆರೋಗ್ಯ ಇಲಾಖೆಯ ವೈದ್ಯಕೀಯ ಮತ್ತು ಅರೆ ವೈದ್ಯಕೀಯ, ಪೂರಕವಾಗಿರುವ ಕ್ಲಿನಿಕಲ್ ಮತ್ತು ನಾನ್ – ಕ್ಲಿನಿಕಲ್ ಸಿಬ್ಬಂದಿ ಸೇವೆಯನ್ನು ಮುಂದಿನ ಮೂರು ತಿಂಗಳ ಅವಧಿ (ಜೂನ್ 30) ವರೆಗೆ ವಿಸ್ತರಿಸಲಾಗಿದೆ. ಹಾಗೇ ಏಪ್ರಿಲ್ ನಲ್ಲಿ ನಿವೃತ್ತಿ ಹೊಂದುವವರ ಸೇವೆಯನ್ನು 2 ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿದೆ.

Facebook Comments

Sri Raghav

Admin